
ಇಸ್ಲಾಮಾಬಾದ್[ಫೆ.22]: 2008ರಲ್ಲಿ ಮುಂಬೈ ಮೇಲೆ ರಕ್ಕಸ ದಾಳಿ ನಡೆಸಿದ್ದ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೊಹಮ್ಮದ್ ಹಫೀಜ್ ಸಯೀದ್ ಮುನ್ನಡೆಸುತ್ತಿರುವ ಎರಡು ಸಂಘಟನೆಗಳಿಗೆ ಗುರುವಾರ ಪಾಕಿಸ್ತಾನ ದಿಢೀರ್ ನಿಷೇಧ ಹೇರಿದೆ. ಸಿಆರ್‌ಪಿಎಫ್‌ನ 40 ಯೋಧರನ್ನು ದಾಳಿ ಪಡೆದ ಪುಲ್ವಾಮಾ ದಾಳಿ ಬಳಿಕ ಜಾಗತಿಕವಾಗಿ ಒತ್ತಡ ಎದುರಿಸುತ್ತಿದ್ದ ಪಾಕಿಸ್ತಾನ, ಅಂತಾರಾಷ್ಟ್ರೀಯ ಸಮುದಾಯದ ಓಲೈಕೆಗಾಗಿ ಈ ಕಣ್ಣೊರೆಸುವ ತಂತ್ರದ ಮೊರೆ ಹೋಗಿರಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಪಾಕ್ ಮೇಲೆ ಜಲಯುದ್ಧ, ಮೋದಿ ಮತ್ತೊಂದು ಅಸ್ತ್ರ!
ಪ್ರಧಾನಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ಸಮಿತಿ ಸಭೆಯಲ್ಲಿ ಹಫೀಜ್ ಸಯೀದ್‌ನ ಜಮಾತ್ ಉದ್ ದಾವಾ ಹಾಗೂ ದತ್ತಿ ಸಂಸ್ಥೆ ಫಾಲಾ ಎ ಇನ್ಸಾನಿಯಾತ್ ಸಂಘಟನೆಗಳಿಗೆ ನಿಷೇಧ ಹೇರುವ ನಿರ್ಧಾರ ಕೈಗೊಳ್ಳಲಾಗಿದೆ. ಪಾಕಿಸ್ತಾನದ ಗೃಹ ಇಲಾಖೆಯ ನಿಗಾ ಪಟ್ಟಿಯಲ್ಲಿದ್ದ ಈ ಎರಡೂ ಸಂಘಟನೆಗಳಿಗೆ ಈಗ ನಿಷೇಧ ಹೇರಲು ತೀರ್ಮಾನಿಸಲಾಗಿದೆ.
ವೈರಲ್ ಚೆಕ್: ಪುಲ್ವಾಮಾ ದಾಳಿ ಬಳಿಕ ಗಹಗಹಿಸಿ ನಕ್ಕ ಮೋದಿ ನಿತೀಶ್?
ಜಮಾತ್ ಉದ್ ದಾವಾ ಸಂಘಟನೆ 300 ಸೆಮಿನರಿಗಳು ಹಾಗೂ ಶಾಲೆಗಳು, ಆಸ್ಪತ್ರೆಗಳು, ಒಂದು ಪ್ರಕಾಶನ ಸಂಸ್ಥೆ ಮತ್ತು ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ನಿಷೇಧಕ್ಕೆ ಒಳಗಾದ ಎರಡೂ ಸಂಘಟನೆಗಳಲ್ಲಿ ಸುಮಾರು 50 ಸಾವಿರ ಸ್ವಯಂಸೇವಕರು ಹಾಗೂ ವೇತನ ಪಡೆಯುವ ನೌಕರರು ಇದ್ದಾರೆ.
166 ಜನರನ್ನು ಬಲಿ ಪಡೆದ ಮುಂಬೈ ಮೇಲಿನ ಭಯೋತ್ಪಾದಕ ದಾಳಿ ನಡೆಸಿದ ಲಷ್ಕರ್ ಸಂಘಟನೆಯ ಮುಖವಾಡದಂತಿರುವ ಸಂಘಟನೆಯೇ ಜಮಾತ್ ಉದ್ ದಾವಾ. 2014ರ ಜೂನ್‌ನಲ್ಲೇ ಈ ಸಂಘಟನೆಗೆ ಅಮೆರಿಕ ನಿಷೇಧ ಹೇರಿದೆ.
ವಿಶೇಷ ಎಂದರೆ, ಪುಲ್ವಾಮಾ ದಾಳಿ ನಡೆಸಿದ್ದು ಮೌಲಾನಾ ಮಸೂದ್ ಅಜರ್ ನೇತೃತ್ವದ ಜೈಷ್ ಎ ಮೊಹಮ್ಮದ್ ಸಂಘಟನೆಯಾಗಿದ್ದರೂ, ಪಾಕಿಸ್ತಾನ ಜಮಾತ್ ಉದ್ ದಾವಾ ವಿರುದ್ಧ ಕ್ರಮ ಕೈಗೊಂಡಿರುವುದು ಕಣ್ಣೊರೆಸುವ ತಂತ್ರವಷ್ಟೇ ಎಂದು ಭದ್ರತಾ ತಜ್ಞರು ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.