
ನವದೆಹಲಿ(ಜುಲೈ 02): ಪಾಕ್ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್'ಗೆ ರಾಜತಾಂತ್ರಿಕ ನೆರವಿನ ಅವಕಾಶವನ್ನ ಪಾಕಿಸ್ತಾನ ಮತ್ತೊಮ್ಮೆ ನಿರಾಕರಿಸಿದೆ. ಈ ವಿಚಾರದಲ್ಲಿ ಭಾರತದ ಕೋರಿಕೆಯನ್ನು ಪಾಕಿಸ್ತಾನ ತಿರಸ್ಕರಿಸುತ್ತಿರುವುದು ಇದು 18ನೇ ಬಾರಿಯಾಗಿದೆ. ಭಾರತದ ವಿರುದ್ಧವೇ ಭಯೋತ್ಪಾದನೆಯ ಆರೋಪ ಮಾಡಿರುವ ಪಾಕಿಸ್ತಾನವು, ಕುಲಭೂಷಣ್'ಗೆ ರಾಜತಾಂತ್ರಿಕ ನೆರವು ಒದಗಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಪಾಕಿಸ್ತಾನದ ಗಡಿ ಪ್ರವೇಶಿಸಿದ್ದಕ್ಕೆ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಹಮೀದ್ ನೇಹಲ್ ಅನ್ಸಾರಿ ಹಾಗೂ ಕುಲಭೂಷಣ್ ಜಾಧವ್ ಸೇರಿದಂತೆ ಹಲವು ಭಾರತೀಯ ಕೈದಿಗಳಿಗೆ ಭಾರತೀಯ ರಾಜತಾಂತ್ರಿಕ ಕಚೇರಿಯ ಸಂಪರ್ಕ ಮಾಡಿಕೊಡಬೇಕೆಂದು ಭಾರತ ಸರಕಾರ ನಿನ್ನೆ ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿತ್ತು.
ಆದರೆ, ಕುಲಭೂಷಣ್ ಜಾಧವ್ ಮಾಮೂಲಿಯ ಕೈದಿಯಲ್ಲ. ಅವರು ಪಾಕಿಸ್ತಾನದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿದ್ದ ಗೂಢಚಾರಿ. ಅವರನ್ನು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿಯ ಪ್ರಕಟಣೆಯು ತಿಳಿಸಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ.
"ಭಾರತದ ಕಸ್ಟಡಿಯಲ್ಲಿರುವ ಪಾಕಿಸ್ತಾನದ 107 ಮೀನುಗಾರರು ಹಾಗೂ 85 ನಾಗರಿಕರಿಗೆ ಭಾರತ ಸರಕಾರವು ರಾಜತಾಂತ್ರಿಕ ಸಂಪರ್ಕದ ಅವಕಾಶವನ್ನ ಒದಗಿಸಿಲ್ಲ. ಶಿಕ್ಷೆ ಪೂರ್ಣಗೊಳಿಸಿರುವ 20 ಪಾಕ್ ಪ್ರಜೆಗಳನ್ನ ಭಾರತ ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ, ಪಾಕಿಸ್ತಾನದಲ್ಲಿ ಶಿಕ್ಷೆ ಪೂರ್ಣಗೊಳಿಸಿದ ಐವರು ಭಾರತೀಯರನ್ನು ಜೂನ್ 22ರಂದು ಪಾಕಿಸ್ತಾನವು ಜೈಲಿಂದ ಬಿಡುಗಡೆ ಮಾಡಿದೆ" ಎಂದು ಪಾಕಿಸ್ತಾನವು ತಿಳಿಸಿದೆ.
ಏನಿದು ಜಾಧವ್ ಪ್ರಕರಣ?
2016ರ ಮಾರ್ಚ್ 3ರಂದು ಬಲೂಚಿಸ್ತಾನ ಪ್ರಾಂತ್ಯದಲ್ಲಿದ್ದ ಕುಲಭೂಷಣ್ ಜಾಧವ್'ರನ್ನು ಬಂಧಿಸಿದ್ದಾಗಿ ಪಾಕ್ ಸರಕಾರ ಹೇಳಿಕೊಂಡಿದೆ. ಬಲೂಚಿಸ್ತಾನದಲ್ಲಿ ಗೂಢಚರ್ಯ ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ಜಾಧವ್ ಭಾಗಿಯಾಗಿದ್ದಾರೆ. ಅವರೇ ಸ್ವತಃ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿತು. ಕುಲಭೂಷಣ್ ತಪ್ಪೊಪ್ಪಿಕೊಂಡಿರುವ ವಿಡಿಯೋವನ್ನೂ ಸಾಕ್ಷಿಯಾಗಿ ಬಿಡುಗಡೆ ಮಾಡಿದೆ. ಪಾಕಿಸ್ತಾನದ ಮಿಲಿಟರಿ ಕೋರ್ಟ್'ನಲ್ಲಿ ಕ್ಷಿಪ್ರಗತಿಯಲ್ಲಿ ವಿಚಾರಣೆ ನಡೆದು, ಜಾಧವ್ ತಪ್ಪಿತಸ್ಥ ಎಂದು ಸಾಬೀತಾಯಿತು. ಅವರಿಗೆ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿತು.
ಭಾರತದ ವಾದವೇ ಬೇರೆ:
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿರುವ ಕುಲಭೂಷಣ್ ಜಾಧವ್ ಅವರು ಇರಾನ್ ದೇಶದಲ್ಲಿ ವೈಯಕ್ತಿಕ ವ್ಯವಹಾರದಲ್ಲಿ ತೊಡಗಿದ್ದರು. ಪಾಕಿಸ್ತಾನವು ಅವರನ್ನು ಇರಾನ್'ನಲ್ಲಿ ಬಂಧಿಸಿ ಬಳಿಕ ಪಾಕಿಸ್ತಾನಕ್ಕೆ ಕರೆದೊಯ್ಯಿತು. ಕುಲಭೂಷಣ್ ಅವರು ಯಾವುದೇ ಗೂಢಚಾರಿಕೆಯಲ್ಲಿ ತೊಡಗಿರಲಿಲ್ಲ. ಪಾಕಿಸ್ತಾನ ಬೇಕಂತಲೇ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದೆ ಎಂಬುದು ಭಾರತದ ವಾದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.