ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡಂಗಲ್ ಕ್ರಾಸ್ ಬಳಿ ತೆಲಂಗಾಣಕ್ಕೆ ಸಾಗಿಸುತ್ತಿದ್ದ 2 ಗೂಬೆಗಳನ್ನು ಸೇಡಂ ಪೊಲೀಸರು ವಶಪಡಿಸಿಕೊಂಡು, ಆರು ಆರೋಪಿಗಳನ್ನು ಬಂಧಿಸಿದ್ದರು. ಪೊಲೀಸರು ಈ ಆರೋಪಿಗಳನ್ನು ವಿಚಾರಣೆ ನಡೆಸುತ್ತಿರುವ ವೇಳೆ ತೆಲಂಗಾಣ ಚುನಾವಣೆ ಹಿನ್ನೆಲೆಯಲ್ಲಿ ವಾಮಾಚಾರಕ್ಕೆ ಗೂಬೆಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈಗಾಗಲೇ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದು, ತನಿಖೆ ಪೂರ್ಣಗೊಂಡ ನಂತರ ಇದರ ಸಂಪೂರ್ಣ ಚಿತ್ರಣ ಹೊರಬರಲಿದೆ.
ಕಲಬುರಗಿ[ನ.18]: ಚುನಾವಣಾ ಅಖಾಡದಲ್ಲಿ ಎದುರಾಳಿಗಳ ವಿರುದ್ಧ ಜಯ ಸಾಧಿಸಲು ಅಭ್ಯರ್ಥಿಗಳು ವಾಮಾಚಾರದ ಮೊರೆ ಹೋಗುವ ಅಂಶ ಹೊಸತಲ್ಲ. ಆದರೆ, ಡಿ.7 ರಂದು ನಡೆಯಲಿರುವ ತೆಲಂಗಾಣದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಲ್ಲಿಯ ಅಭ್ಯರ್ಥಿಗಳು ವಾಮಾಚಾರಕ್ಕೆ ಅಳಿವಿನಂಚಿನಲ್ಲಿರುವ ಪಕ್ಷಿಯಾದ ಕೊಂಬಿನ ಗೂಬೆಗಳನ್ನು ಮಾರಣಹೋಮ ಮಾಡುತ್ತಿದ್ದಾರಾ? ಗೂಬೆಯ ಸರ್ವಾಂಗಕ್ಕೂ ಭಾರೀ ಬೇಡಿಕೆಯಿದ್ದು ಒಂದೊಂದು ಗೂಬೆಗೂ 3ರಿಂದ 4 ಲಕ್ಷ ರು. ಬೆಲೆ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಹಣದಾಸೆಗಾಗಿ ರಾಜ್ಯದಲ್ಲಿ ಗೂಬೆಯನ್ನು ಹಿಡಿದು ರವಾನಿಸುತ್ತಿರುವ ತಂಡಗಳು ಕಾರ್ಯಾಚರಿಸುತ್ತಿವೆಯೇ? ಇಂತಹ ಶಂಕೆಗಳು ಇದೀಗ ಬಲವಾಗಿದ್ದು ಪೊಲೀಸರು ಈ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕೊಡಂಗಲ್ ಕ್ರಾಸ್ ಬಳಿ ತೆಲಂಗಾಣಕ್ಕೆ ಸಾಗಿಸುತ್ತಿದ್ದ 2 ಗೂಬೆಗಳನ್ನು ಸೇಡಂ ಪೊಲೀಸರು ವಶಪಡಿಸಿಕೊಂಡು, ಆರು ಆರೋಪಿಗಳನ್ನು ಬಂಧಿಸಿದ್ದರು. ಪೊಲೀಸರು ಈ ಆರೋಪಿಗಳನ್ನು ವಿಚಾರಣೆ ನಡೆಸುತ್ತಿರುವ ವೇಳೆ ತೆಲಂಗಾಣ ಚುನಾವಣೆ ಹಿನ್ನೆಲೆಯಲ್ಲಿ ವಾಮಾಚಾರಕ್ಕೆ ಗೂಬೆಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈಗಾಗಲೇ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಕೈಗೊಂಡಿದ್ದು, ತನಿಖೆ ಪೂರ್ಣಗೊಂಡ ನಂತರ ಇದರ ಸಂಪೂರ್ಣ ಚಿತ್ರಣ ಹೊರಬರಲಿದೆ.
undefined
ಜಮಖಂಡಿಯವನೇ ಕಿಂಗ್‌ಪಿನ್:
ಪೊಲೀಸ್ ವಶದಲ್ಲಿರುವ 6 ಜನ ಆರೋಪಿಗಳ ಪೈಕಿ ಜಮಖಂಡಿಯ ಬದ್ನಿ ಗ್ರಾಮದ ಹುಸೇನ್ ಸಾಬ್ ಜಮಾದಾರ್ ಈತ ಗೂಬೆಗಳನ್ನು ಜಮಖಂಡಿಯಿಂದಲೇ ತರಲಾಗಿದೆ. ಸೇಡಂನಲ್ಲಿರೋ ಮಧ್ಯವರ್ತಿ ಮೂಲಕ ಹೈದ್ರಾಬಾದ್‌ನಲ್ಲಿರುವ ಒಬ್ಬ ವ್ಯಕ್ತಿಯ ಸೂಚನೆ ಮೇರೆಗೆ ಇವುಗಳನ್ನು ಅಲ್ಲಿಗೆ ತಲುಪಿಸಲು ಕೊಂಡೊಯ್ಯಲಾಗುತ್ತಿತ್ತು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆದರೆ, ಹೈದ್ರಾಬಾದ್ ಮೂಲದ ವ್ಯಕ್ತಿ ಯಾರೆಂಬುದು ಈತನಿಗೂ ಗೊತ್ತಿಲ್ಲ. ಈ ತಂಡದ ಕಿಂಗ್‌ಪಿನ್ ಒಬ್ಬಾತ ಜಮಖಂಡಿಯವನೇ ಆಗಿದ್ದು, ಆತ ದಾಳಿ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದಾನೆ. ಆತನಿಗೆ ಗೂಬೆಗಳಿಗೆ ಬೇಡಿಕೆ ಇಟ್ಟಿದ್ದ ಹೈದರಾಬಾದ್ ವ್ಯಕ್ತಿಯ ಸಂಪರ್ಕವಿದೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗೂಬೆಗಳನ್ನು ಹೈದರಾಬಾದ್‌ಗೆ ಹೊತ್ತೊಯ್ಯುವ ಧಾವಂತದಲ್ಲಿದ್ದಾಗ ಇವರನ್ನೆಲ್ಲ ಬಂಧಿಸಿದ್ದೇವೆ. ಒಂದೊಂದು ಗೂಬೆಗೆ 3ರಿಂದ 4 ಲಕ್ಷ ರು. ಬೆಲೆ ಇದೆ ಎಂಬುದು ತಿಳಿದು ಬಂದಿದೆ. ತೆಲಂಗಾಣ ಚುನಾವಣೆಯಲ್ಲಿ ಈ ಗೂಬೆಗಳನ್ನು ನಾನಾ ಕಾರಣಕ್ಕಾಗಿ ಬಳಕೆ ಮಾಡುತ್ತಿರುವುದರಿಂದ ಭಾರೀ ಡಿಮ್ಯಾಂಡ್ ಇದೆ ಎಂದು ವಿಚಾರಣೆಯಲ್ಲಿ ಆರೋಪಿಗಳೇ ಬಾಯಿಬಿಟ್ಟಿದ್ದಾರೆ. ಈ ಜಾಲದ ವ್ಯಾಪ್ತಿ- ವಿಸ್ತಾರ ಪಕ್ಕಾ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.
-ಶಂಕರಗೌಡ ಪಾಟೀಲ್, ಸೇಡಂ ಸಿಪಿಐ
ತೋಟದಲ್ಲಿ ಸಾಕಲಾಗುತ್ತಿದೆಯೆ?:
ಬಂಧಿತರಾಗಿರುವ ಬದ್ನಿ ಹುಸೇನ್ ಸಾಬ್, ಶಹಾಪುರದ ಮಯ್ನಳ್ಳಿ ಯಲ್ಲಪ್ಪ ಮಾತು ಕೇಳಿದರೆ ಕಳ್ಳಸಾಗಾಟಕ್ಕೆಂದೇ ತೋಟದಲ್ಲಿ ಗೂಬೆಗಳನ್ನು ಸಾಕಲಾಗುತ್ತಿದೆಯೆ ಎಂಬ ಶಂಕೆ ವ್ಯಕ್ತವಾಗಿದೆ. ವಶಪಡಿಸಿಕೊಂಡ ಗೂಬೆಗಳು 4ರಿಂದ 5 ಕೆ.ಜಿ. ತೂಗುತ್ತವೆ. ಹೀಗಾಗಿ ಇವು ಕಳ್ಳಸಾಗಣೆ ಮಾಡಲೆಂದೇ ಸಾಕಿರುವ ಗೂಬೆಗಳಾಗಿವೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕೊಂಬಿನ ಗೂಬೆಗೆ ಭಾರೀ ಬೇಡಿಕೆ:
ಭಾರತದಲ್ಲಿ 33 ಬಗೆಯ ಗೂಬೆ ಪ್ರಭೇದಗಳು ವಾಸಿಸುತ್ತಿವೆ. ಅದರಲ್ಲಿ ಕಳ್ಳಸಾಗಣೆಗೆ ಹೆಚ್ಚು ಒಳಗಾಗೋದು ಇಂಡಿಯನ್ ಈಗಲ್ ಓಲ್. ಕನ್ನಡದಲ್ಲಿ ಇಂದನ್ನು ಕೊಂಬಿನ ಗೂಬೆ ಎಂದು ಕರೆಯುತ್ತಾರೆ. ಕಣ್ಣು ಅಗಲವಾಗಿರುವ ಈ ಗೂಬೆಯೇ ಮಾಟಮಂತ್ರಕ್ಕೆ, ವಾಮಾಚಾರಕ್ಕೆ ಹಾಗೂ ವಶೀಕರಣಕ್ಕೆ ಹೆಚ್ಚು ಬಳಕೆಯಾಗುತ್ತದೆ. ಜಮಖಂಡಿಯಿಂದ ತೆಲಂಗಾಣಕ್ಕೆ ಸಾಗಣೆಯಾಗುತ್ತಿದ್ದದ್ದು ಸಹ ಕೊಂಬಿನ ಗೂಬೆಗಳಾಗಿದ್ದವು.
ತೆಲಂಗಾಣ, ಆಂಧ್ರದಲ್ಲಿ ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಗಳು ಮನೆಯಲ್ಲಿ ಗೂಬೆಯನ್ನು ಹಾರಿ ಬಿಡುವುದು, ಅವುಗಳನ್ನು ಕೊಂದು ತಲೆಬುರುಡೆ, ರೆಕ್ಕೆ- ಪುಕ್ಕ, ಕಣ್ಣು, ಕಾಲುಗಳನ್ನು ಮನೆ ಮುಂದೆ ಬಿಸಾಕಿ ವಾಮಾಚಾರ ಮಾಡುತ್ತಾರೆ ಎಂಬ ವಿಷಯ ಕೇಳಿದ್ದೇವೆ. ಸೆರೆ ಸಿಕ್ಕ 6 ಆರೋಪಿಗಳೂ ಈ ಸಂಗತಿ ಬಾಯಿಬಿಟ್ಟಿದ್ದಾರೆ. ಈ ಹಿಂದೆ ಬೆಳಗಾವಿಯಲ್ಲಿ 2, ಮೈಸೂರು, ಬೆಂಗಳೂರಲ್ಲಿ ತಲಾ 3 ಪ್ರಕರಣ ದಾಖಲಾಗಿವೆ. ತನಿಖೆಯಿಂದ ಆ ಬಗ್ಗೆ ತಿಳಿಯಬೇಕಿದೆ.
-ಆರ್.ಆರ್.ಯಾದವ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಲಬುರಗಿ ವಲಯ
ನಿಧಿಗಳ್ಳರಿಗೂ ಗೂಬೆ ಅಚ್ಚುಮೆಚ್ಚು:
ಗೂಬೆಯ 360 ಡಿಗ್ರಿ ವಾಲುವ ಕತ್ತು ಈ ನಿಧಿ ಶೋಧಕರಿಗೆ ಅಸ್ತ್ರ. ನಿಧಿ ಇಂತಹ ಜಾಗದಲ್ಲಿದೆ ಎಂಬುದನ್ನು ಮೊದಲೇ ಅರಿತವರಾಗಿರುವ ನಿಧಿಗಳ್ಳರು ಗೂಬೆಯನ್ನು ಆ ಜಾಗದಲ್ಲಿ ಬಿಟ್ಟುಬಿಡುತ್ತಾರೆ. ಈ ಪಕ್ಷಿ ಎಲ್ಲಿ ತನ್ನ ಕತ್ತನ್ನು ಸಂಪೂರ್ಣ ತಿರುಗಿಸಿ ಹೊರಳಾಡುವುದೋ ಆ ಜಾಗದಲ್ಲೇ ನಿಧಿ ಇರೋದು ಪಕ್ಕಾ ಎಂದು ಅಲ್ಲಿ ಅಗೆಯುತ್ತಾರೆ. ಅಷ್ಟೇ ಅಲ್ಲ, ಗೂಬೆಗಳ ಸರ್ವಾಂಗಕ್ಕೂ ಭಾರೀ ಬೇಡಿಕೆಯಿದೆ. ಗೂಬೆಯ ಕಣ್ಣು, ಮೂಗು (ಚೊಂಚು), ರೆಕ್ಕೆಪುಕ್ಕ, ಕತ್ತು, ತಲೆ ಬುರುಡೆ, ಅದರ ಉಗುರು, ಹೃದಯ, ಲೀವರ್ ಸೇರಿದಂತೆ ದೇಹದ ಎಲ್ಲಾ ಅಂಗಾಂಗಗಳನ್ನು ಮಾಟ-ಮಂತ್ರ, ಔಷಧಿಕ್ಕೆ ಬಳಸಲಾಗುತ್ತಿದೆ ಎನ್ನಲಾಗಿದೆ.