ಯುವತಿಯರ ಜತೆ ಮೇಘಾಲಯ ರಾಜ್ಯಪಾಲರ ಚೆಲ್ಲಾಟ...!

By Suvarna Web DeskFirst Published Jan 26, 2017, 12:44 PM IST
Highlights

ಆರ್'ಎಸ್ಎಸ್ ಹಿನ್ನೆಲೆಯುಳ್ಳ ತಮಿಳುನಾಡು ಮೂಲದ ವಿ. ಷಣ್ಮುಗನಾಥನ್ ಮೇ. 20, 2015ರಿಂದ ಮೇಘಾಲಯದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಶಿಲ್ಲಾಂಗ್(ಜ.26): ಮೇಘಾಲಯ ರಾಜ್ಯಪಾಲ ವಿ. ಷಣ್ಮುಗನಾಥನ್ ಅವರು ರಾಜಭವನದಲ್ಲಿ ಯುವತಿಯರು ಹಾಗೂ ಮಹಿಳೆಯರ ಜತೆ ಚೆಲ್ಲಾಟವಾಡುತ್ತಿರುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಈ ಸಂಬಂಧ ರಾಜಭವನದ 80ಕ್ಕೂ ಹೆಚ್ಚು ನೌಕರರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದು, ಷಣ್ಮುಗನಾಥನ್ ಅವರನ್ನು ವಜಾಗೊಳಿಸುವಂತೆ ಮನವಿ ಮಾಡಿದ್ದಾರೆ.

‘ರಾಜಭವನದ ಘನತೆ ಜತೆ ರಾಜಿ ಮಾಡಿಕೊಂಡಿರುವ ರಾಜ್ಯಪಾಲರು, ಅದನ್ನು ಯುವ ಮಹಿಳೆಯರ ಕ್ಲಬ್ ಆಗಿ ಪರಿವರ್ತನೆ ಮಾಡಿದ್ದಾರೆ. ರಾಜ್ಯಪಾಲರ ನೇರ ಆದೇಶದ ಮೇರೆಗೆ ಯುವತಿಯರು ರಾಜಭವನಕ್ಕೆ ಬಂದು-ಹೋಗುವ ಕೆಲಸ ಮಾಡುತ್ತಿದ್ದಾರೆ. ಆ ಯುವತಿಯರಿಗೆ ರಾಜ್ಯಪಾಲರ ಮಲಗುವ ಕೋಣೆಗೂ ನೇರ ಪ್ರವೇಶಾವಕಾಶವಿದೆ’ ಎಂದು ಪತ್ರದಲ್ಲಿ ದೂರಿದ್ದಾರೆ.

ರಾಜ್ಯಪಾಲರು ಇಬ್ಬರು ಸಾರ್ವಜನಿಕ ಸಂಪರ್ಕ ಅಧಿಕಾರಿಗಳು, ಅಡುಗೆ ಮಾಡುವವರು, ನರ್ಸ್‌ವೊಬ್ಬರನ್ನು ರಾತ್ರಿ ಪಾಳಿಗೆ ನೇಮಕ ಮಾಡಿಕೊಂಡಿದ್ದಾರೆ. ಅವರೆಲ್ಲರೂ ಮಹಿಳೆಯರು. ರಾಜಭವನದ ಕೆಲಸ ಕಾರ್ಯಗಳಿಗೆ ಯುವತಿಯರನ್ನು ಮಾತ್ರವೇ ರಾಜ್ಯಪಾಲರು ನೇಮಿಸಿಕೊಳ್ಳುತ್ತಿದ್ದಾರೆ. ಪುರುಷ ಸಿಬ್ಬಂದಿಯನ್ನು ವರ್ಗಾಯಿಸುತ್ತಿದ್ದಾರೆ ಎಂದು 11 ಅಂಶಗಳ ಪತ್ರದಲ್ಲಿ ವಿವರಿಸಿದ್ದಾರೆ. ಈ ಕುರಿತು ರಾಜಭವನ ಹಾಗೂ ರಾಜ್ಯಪಾಲರನ್ನು ಪಿಟಿಐ ಸುದ್ದಿಸಂಸ್ಥೆ ಪ್ರತಿಕ್ರಿಯೆಗಾಗಿ ಸಂಪರ್ಕಿಸಲು ಯತ್ನಿಸಿದೆಯಾದರೂ ಸಾಧ್ಯವಾಗಿಲ್ಲ.

ಆರ್'ಎಸ್ಎಸ್ ಹಿನ್ನೆಲೆಯುಳ್ಳ ತಮಿಳುನಾಡು ಮೂಲದ ವಿ. ಷಣ್ಮುಗನಾಥನ್ ಮೇ. 20, 2015ರಿಂದ ಮೇಘಾಲಯದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರ ಜೊತೆಗೆ ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದ ಜೆ.ಪಿ. ರಾಜ್'ಕೋವಾ ಅವರಿಂದ ತೆರವಾದ ಸ್ಥಾನವನ್ನೂ ಹೆಚ್ಚುವರಿ ರಾಜ್ಯಪಾಲರಾಗಿ ಸೆಪ್ಟೆಂಬರ್ 16,2016ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.  

ಸಾರ್ವಜನಿಕ ಸಂಪರ್ಕಾಧಿಕಾರಿ ಸಂದರ್ಶನಕ್ಕೆ ಬಂದಿದ್ದ ಮಹಿಳೆಯೊಬ್ಬರ ಜತೆ ಷಣ್ಮುಗನಾಥನ್ ಅವರು ಅಸಭ್ಯವಾಗಿ ನಡೆದುಕೊಂಡರು ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ರಾಜಭವನದ ಸಿಬ್ಬಂದಿ ದೂರು ನೀಡಿದ್ದಾರೆ.

click me!