
ನವದೆಹಲಿ(ಜು.15): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ವಿಶ್ವದಲ್ಲೇ ನಂ.3 ಜನಮೆಚ್ಚಿದ ಸರ್ಕಾರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಸಮೀಕ್ಷೆಯೊಂದರ ಪ್ರಕಾರ, ಸ್ವಿಜರ್ಲೆಂಡ್ ಸರ್ಕಾರ ಶೇ.80 ಮತದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇಂಡೋನೇಷ್ಯಾ ಸರ್ಕಾರ ಶೇ.79 ಮತದೊಂದಿಗೆ ದ್ವಿತೀಯ ಹಾಗೂ ಭಾರತ ಸರ್ಕಾರ ಶೇ.73 ಮತದೊಂದಿಗೆ ತೃತೀಯ ಸ್ಥಾನದಲ್ಲಿದೆ.
ಕೆಲ ವಾರಗಳ ಹಿಂದಷ್ಟೇ ಮೂರು ವರ್ಷಗಳ ಅಧಿಕಾರಾವಧಿ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಿಂದ ಸಿಹಿ ಸುದ್ದಿಯೊಂದು ಲಭಿಸಿದೆ. ಮೋದಿ ಅವರ ಆಡಳಿತದ ಬಗ್ಗೆ ಭಾರತದ ಶೇ.73ರಷ್ಟು ಮಂದಿ ವಿಶ್ವಾಸವಿರಿಸಿಕೊಂಡಿದ್ದಾರೆ. ತನ್ಮೂಲಕ ಜನಮೆಚ್ಚಿದ ನಾಯಕರ ಪಟ್ಟಿಯಲ್ಲಿ ಮೋದಿ ಅವರು ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿದ್ದಾರೆ ಎಂದು ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಂಘಟನೆ (ಒಇಸಿಡಿ) ತನ್ನ ವರದಿಯಲ್ಲಿ ಘೋಷಣೆ ಮಾಡಿದೆ.
ವಿಶೇಷ ಎಂದರೆ, ಕಳೆದ ಜನವರಿಯಲ್ಲಷ್ಟೇ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್, ಬ್ರಿಟನ್ ನಲ್ಲಿ ಪ್ರಧಾನಿಯಾಗಿ ಪುನರಾಯ್ಕೆಯಾದ ಥೆರೇಸಾ ಮೇ ಅವರು ಟಾಪ್ ೫ರಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.
ಸ್ವಿಜರ್ಲೆಂಡ್ ಸರ್ಕಾರದ ಬಗ್ಗೆ ಅಲ್ಲಿನ ಶೇ.80ರಷ್ಟು ಜನ ವಿಶ್ವಾಸವಿಟ್ಟಿದ್ದಾರೆ. ಹೀಗಾಗಿ ಆ ದೇಶ ಜನರ ಮೆಚ್ಚುಗೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಶೇ.79ರಷ್ಟು ಜನರ ನಂಬಿಕೆ ಗಳಿಸುವ ಮೂಲಕ ಇಂಡೋನೇಷ್ಯಾ ಸರ್ಕಾರ ದ್ವಿತೀಯ ಸ್ಥಾನದಲ್ಲಿದೆ ಎಂದು ‘ಗವರ್ನಮೆಂಟ್ ಅಟ್ ಎ ಗ್ಲ್ಯಾನ್ಸ್ ರಿಪೋರ್ಟ್ 2017’ ತಿಳಿಸಿದೆ. ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಧನಾತ್ಮಕ ಭಾವನೆ ಇದ್ದರೆ ಅದುವೇ ನಂಬಿಕೆ. ಸರ್ಕಾರದ ಮೇಲೆ ನಂಬಿಕೆ ಇದ್ದರೆ, ಸರ್ಕಾರದ ಕ್ಷಮತೆ ಹೆಚ್ಚುತ್ತದೆ. ಆರ್ಥಿಕಾಭಿವೃದ್ಧಿ ಸಾಧ್ಯವಾಗುತ್ತದೆ. ಸರ್ಕಾರದ ಮೇಲಿನ ವಿಶ್ವಾಸದಿಂದಾಗಿ ಕಾನೂನು ಹಾಗೂ ತೆರಿಗೆ ವ್ಯವಸ್ಥೆ ಮೇಲಿನ ಜನರ ಬದ್ಧತೆ ಹೆಚ್ಚಾಗುತ್ತದೆ.
ಸಾಮಾಜಿಕ ಹಾಗೂ ರಾಜಕೀಯ ಒಮ್ಮತ ಹೆಚ್ಚಾಗಿ, ಸರ್ಕಾರದ ನೀತಿಗಳನ್ನು ಜನರು ಸ್ವೀಕರಿಸುವ ಪ್ರಮಾಣ ಏರುತ್ತದೆ. ಅಲ್ಪಾವಧಿ ತ್ಯಾಗಕ್ಕೆ ನಾಗರಿಕರೇ ಕರೆ ಕೊಡುತ್ತಾರೆ ಎಂದು ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.