Exclusive Interview- ಬ್ರ್ಯಾಂಡ್ ಮೋದಿ ಟೆಸ್ಟ್ 2019ರಲ್ಲಿ: ಸ್ಮೃತಿ ಇರಾನಿ!

By Web DeskFirst Published Dec 28, 2018, 7:52 PM IST
Highlights

‘2019ರಲ್ಲಿ ಬ್ರ್ಯಾಂಡ್ ಮೋದಿ ಅಸಲಿ ಟೆಸ್ಟ್’| ‘2019ರಲ್ಲೂ ಭಾರತ ಮೋದಿಮಯವಾಗಲಿದೆ’| ಭಾರತ ಮೊದಲು ಎಂಬ ಸಿದ್ಧಾಂತ ಬಿಜೆಪಿ ಕೈ ಹಿಡಿಯಲಿದೆ’| ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅಭಿಮತ| ಮೈ ನೇಶನ್ ಜೊತೆ ಸ್ಮೃತಿ ಇರಾನಿ ಎಕ್ಸಕ್ಲೂಸಿವ್ ಸಂದರ್ಶನ| ಭಾರತ ವಿಶ್ವ ಗುರುವಾಗುವ ದಿನ ದೂರವಿಲ್ಲ ಎಂದ ಸ್ಮೃತಿ ಇರಾನಿ| ಅಮೇಥಿ ವಾರ್ ಕುರಿತು ಸ್ಮೃತಿ ಇರಾನಿ ಹೇಳಿದ್ದೇನು?

ನವದೆಹಲಿ(ಡಿ.28): ಪಂಚ ರಾಜ್ಯ ಚುನಾವಣೆಗಳ ಫಲಿತಾಂಶದ ಬಳಿಕ ಬಿಜೆಪಿ ಪಾಳೆಯದಲ್ಲಿ ಮಂಕು ಕವಿದಿದೆ ಎಂದೇ ಎಲ್ಲರ ಅಂಬೋಣ. ಆದರೆ ಈ ಫಲಿತಾಂಶಗಳಿಂದ ಪಕ್ಷವಾಗಲಿ, ನಾಯಕರಾಗಲಿ ಧೃತಿಗೆಟ್ಟಿಲ್ಲ ಎಂಬುದು ಕೇಂದ್ರ ಜವಳಿ ಖಾತೆ ಸಚಿವೆ ಸಮೃತಿ ಇರಾನಿ ನಂಬಿಕೆ.

ಹೌದು, ಮೈ ನೇಶನ್‌ಗೆ ವಿಶೇಷ ಸಂದರ್ಶನ ನೀಡುರುವ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ,  ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ಬಿಜೆಪಿ ಆತಂಕಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೈ ನೇಶನ್ ಪ್ರಧಾನ ಸಂಪಾದಕ ಅಭಿಜಿತ್ ಮಜುಂದಾರ್ ಅವರೊಂದಿಗೆ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಸ್ಮೃತಿ ಇರಾನಿ, ರಾಷ್ಟ್ರ ರಾಜಕಾರಣ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

"

ಸೋಲು ತಂದ ಚೈತನ್ಯ:
ಪಂಚ ರಾಜ್ಯಗಳ ಚುನಾವಣೆ ಸೋಲು ಬಿಜೆಪಿಗೆ ಖಂಡಿತ ಪಾಠವಾಗಲಿದೆ ಎಂದಿರುವ ಸ್ಮೃತಿ ಇರಾನಿ, ಆದರೆ ಈ ಸೋಲಿನಿಂದಾಗಿ ಬಿಜೆಪಿ ದೇಶದ ಜನರಿಂದ ದೂರವಾಗುತ್ತಿದೆ ಎಂಬ ವಾದ ಅಪ್ಪಟ ಸುಳ್ಳು ಎಂದು ಹೇಳಿದ್ದಾರೆ. ಒಂದು ವೇಳೆ ಈ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದರೆ ಕೇಂದ್ರದಿಂದ ಅಧಿಕಾರ ದುರುಪಯೋಗ, ಮೋದಿ ಹೆಸರಲ್ಲಿ ಸಿಕ್ಕ ಜಯ ಎಂದೇ ಅಲ್ಲವೇ ವಿಪಕ್ಷಗಳು ಆರೋಪಿಸುತ್ತಿದ್ದವು ಎಂದು ಅವರು ಮರು ಪ್ರಶ್ನೆ ಹಾಕಿದ್ದಾರೆ.

ಬ್ರ್ಯಾಂಡ್ ಮೋದಿ ಪರೀಕ್ಷೆ 2019ರಲ್ಲಿ:
ಅಸಲಿಗೆ ಬ್ರ್ಯಾಂಡ್ ಮೋದಿಗೆ ನಿಜವಾದ ಪರೀಕ್ಷೆ 2019ರಲ್ಲಿ ನಡೆಯಲಿದೆ ಎಂದಿರುವ ಸ್ಮೃತಿ ಇರಾನಿ, ದೇಶಕ್ಕಾಗಿ, ದೇಶದ ಜನತೆಗಾಗಿ ತಮ್ಮ ಸರ್ವಸ್ವವನ್ನೂ ಧಾರೆ ಎರೆದಿರುವ ಪ್ರಧಾನಿ ಮೋದಿ ಅವರನ್ನು ಈ ದೇಶ ಖಂಡಿತ ಒಪ್ಪಿಕೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಯಾರು ಏನೇ ಹೇಳಲಿ ಪ್ರಧಾನಿ ಮೋದಿ ಅವರೇ 2019ರಲ್ಲೂ ಮತ್ತೆ ಪ್ರಧಾನಿಯಾಗುವುದರಲ್ಲಿ ಸಂಶಯವಿಲ್ಲ. ದೇಶದ ಜನರ ನಾಡಿಮಿಡಿತದ ಅರಿವಿರುವುದರಿಂದಲೇ ನಮಗೆ ಈ ಕುರಿತು ಭರವಸೆ ಇದೆ ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಕಾರ್ಯಗಳು, ದೇಶ ಮೊದಲು ಎಂಬ ಸಿದ್ಧಾಂತಕ್ಕೆ ಬದ್ಧರಾಗಿ ಕಳೆದ ನಾಲ್ಕುವರೆ ವರ್ಷದಲ್ಲಿ ಭಾರತದ ವರ್ಚಸ್ಸು ವೃದ್ಧಿಸಿರುವ ಪ್ರಧಾನಿ ಮೋದಿ ಅವರಿಗೆ ದೇಶದ ಜನರ ಆರ್ಶೀವಾದ ಖಂಡಿತ ಸಿಗಲಿದೆ ಎಂಬುದು ಸ್ಮೃತಿ ಇರಾನಿ ಅವರ ದೃಢ ವಿಶ್ವಾಸ.

ಪಕ್ಷ ಮತ್ತು ಭಾರತ:
ಇನ್ನು ಪಕ್ಷದ ವಿಚಾರಕ್ಕೆ ಬಂದರೆ ಕೇವಲ ಚುನಾವಣೆಗಳನ್ನು ಗೆಲ್ಲುವುದಷ್ಟೇ ಬಿಜೆಪಿ ಸಿದ್ಧಾಂತವಲ್ಲ. ದೇಶವನ್ನು ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಸ್ವಜನಪಕ್ಷಪಾತದಿಂದ ಮುಕ್ತಗೊಳಿಸಿ, ಭಾರತವನ್ನು ಸದೃಢ ದೇಶವನ್ನಾಗಿ ಪರಿವರ್ತಿಸುವ, ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವ ಸಿದ್ಧಾಂತದಲ್ಲಿ ಬಿಜೆಪಿ ನಂಬಿಕೆ ಇರಿಸಿದೆ ಎಂದು ಸ್ಮೃತಿ ಹೇಳಿದರು.

ಕಳೆದ ನಾಲ್ಕುವರೆ ವರ್ಷದಲ್ಲಿ ವಿಶ್ವದ ಮುಂದೆ ಭಾರತದ ಚಹರೆ ಬದಲಾಗಿದ್ದು, ಇದು ಸಮಸ್ತ ಭಾರತೀಯರ ಮೇಲೆ ಬಿಜೆಪಿ ಇಟ್ಟ ನಂಬಿಕೆಯ ಪರಿಣಾಮ ಎಂದು ಇರಾನಿ ನುಡಿದರು. 

ಯಾವುದೇ ಕ್ಷೇತ್ರದಲ್ಲಿ ಬದಲಾವಣೆಗೆ ಮುಂದಾಗುವ ವಿಶ್ವ ವೇದಿಕೆ ಭಾರತದ ಧ್ವನಿಯನ್ನು ಈ ಹಿಂದಿಗಿಂತ ಹೆಚ್ಚು ಗಮನವಿಟ್ಟು ಆಲಿಸುತ್ತಿದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯಲ್ಲದೇ ಮತ್ತೇನು ಎನ್ನುತ್ತಾರೆ ಸ್ಮೃತಿ ಇರಾನಿ.

ಅಮೇಥಿ ವಾರ್:

ಇನ್ನು ಗಾಂಧಿ ಪರಿವಾರದ ಸ್ವತ್ತು ಎಂದೇ ಪರಿಗಣಿಸಲಾಗಿರುವ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, 2014ರ ಲೋಕಸಭೆ ಚುನಾವಣೆಯಲ್ಲಿ ಕೇವಲ 20 ದಿನ ಪ್ರಚಾರ ಮಾಡಿದ ಪರಿಣಾಮ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೇವಲ ‘ನ್ಯಾರೋ ಮಾರ್ಜಿನ್’ ಗೆಲುವು ನೋಡುವಂತಾಯಿತು.

ಈ ಬಾರಿ ಖಂಡಿತ ಅಮೇಥಿಯಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ಧುಮುಕುವ ಭರವಸೆ ಇದೆ ಎಂದು ಸ್ಮೃತಿ ಇರಾನಿ ಹೇಳಿದರು. ಈ ಮೂಲಕ 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರಿಗೆ ತಮ್ಮಿಂದ ಪ್ರಬಲ ಪ್ರತಿರೋಧ ಸಿಗಲಿದೆ ಎಂಬುದನ್ನು ಸ್ಮೃತಿ ಇರಾನಿ ಒತ್ತಿ ಹೇಳಿದ್ದಾರೆ.

ಸ್ಮೃತಿ ಇರಾನಿ ಮತ್ತು ವಿವಾದ:

ಇನ್ನು ತಮ್ಮ ಹಲವು ವಿವಾದಾತ್ಮಕ ಹೇಳಿಕೆಗಳು, ಟ್ವಿಟ್ಟರ್ ಸಂದೇಶಗಳ ಕುರಿತು ಕೇಳಿದ ಪ್ರಶ್ಬೆಗೆ ಮುಗುಳ್ನಗುತ್ತಲೇ ಉತ್ತರಿಸಿದ ಸ್ಮೃತಿ ಇರಾನಿ, ‘ನಾನು ಏನು ಹೇಳಿದ್ದೇನೊ ಅದಕ್ಕೆ ಈಗಲೂ ಬದ್ಧಳಾಗಿರುವೆ. ನಾನು ನಿಜವನ್ನೇ ಹೇಳುತ್ತೇನೆ ಎಂಬ ವಿಶ್ವಾಸ ನನ್ನಲ್ಲಿದೆ. ನಾವು ಚುನಾವಣೆಯಲ್ಲಿ ಆಯ್ಕೆಯಾಗಿರುವುದು  ಯಥಾಸ್ಥಿತಿ ಕಾಪಾಡಲು ಅಲ್ಲ, ಬದಲಾವಣೆಗೆ ನಾಂದಿ ಹಾಡಲು..’ಎಂದು ಸ್ಮೃತಿ ತಮ್ಮನ್ನು ಸಮರ್ಥಿಸಿಕೊಂಡರು.

click me!