
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಪ್ರಬಲ ಮೈತ್ರಿಕೂಟ ರಚನೆಗೆ ಯತ್ನಿಸುತ್ತಿರುವ ವಿಪಕ್ಷಗಳು, ಕಾರ್ಯತಂತ್ರ ರಚನೆಯ ನಿಟ್ಟಿನಲ್ಲಿ ಸೋಮವಾರ ದೆಹಲಿಯಲ್ಲಿ ಸಭೆಯೊಂದನ್ನು ಆಯೋಜಿಸಿವೆ. ಈ ಸಭೆಯ ನೇತೃತ್ವವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ವಹಿಸಿಕೊಂಡಿದ್ದಾರೆ.
ಕಳೆದ ನ.22ರಂದೇ ಈ ಸಭೆಯನ್ನು ಆಯೋಜಿಸಲಾಗಿತ್ತಾದರೂ, ಆ ಸಂದರ್ಭದಲ್ಲಿ ಪಂಚರಾಜ್ಯಗಳ ಚುನಾವಣೆಯಲ್ಲಿ ವಿವಿಧ ಪಕ್ಷಗಳ ನಾಯಕರು ಕಾರ್ಯನಿರತರಾಗಿದ್ದ ಕಾರಣ ಸಭೆಯನ್ನು ಡಿ.11ಕ್ಕೆ ಮುಂದೂಡಲಾಗಿತ್ತು.
ಸೋಮವಾರದ ಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಸಿಪಿಐ ನಾಯಕ ಸುಧಾಕರ್ ರೆಡ್ಡಿ, ಡಿಎಂಕೆ ಅಧ್ಯಕ್ಷ ಸ್ಟಾಲಿನ್, ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಆರ್‌ಜೆಡಿಯ ತೇಜಸ್ವಿ ಯಾದವ್, ಎಲ್‌ಜೆಡಿಯ ಶರದ್ ಯಾಧವ್, ನ್ಯಾಷನಲ್ ಕಾನ್ಫರೆನ್ಸ್‌ನ ಫಾರುಖ್ ಅಬ್ದುಲ್ಲಾ, ಎನ್‌ಸಿಪಿಯ ಶರದ್ ಪವಾರ್, ಎಸ್‌ಪಿಯ ಅಖಿಲೇಶ್‌ಸಿಂಗ್, ಬಿಎಸ್‌ಪಿಯ ಸತೀಶ್‌ಚಂದ್ರ ಹಾಗೂ ಇತರೆ ಸಣ್ಣಪುಟ್ಟಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಕಾರ್ಯತಂತ್ರ: ಸೋಮವಾರದ ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿಗೆ ವಿರುದ್ಧವಾಗಿ ವಿಪಕ್ಷಗಳ ಪ್ರಬಲ ಮೈತ್ರಿಕೂಟ ರಚನೆಯ ಕುರಿತು ಚರ್ಚೆ ನಡೆಸಲಾಗುವುದು. ಮೈತ್ರಿಕೂಟ ರಚನೆಗೆ ಅಗತ್ಯವಾದ ಮುಂದಿನ ಹಂತದ ಕಾರ್ಯತಂತ್ರದ ಬಗ್ಗೆಯೂ ಚರ್ಚೆ ನಡೆಯಲಿದೆ. ಇದರ ಜೊತೆಗೆ ಮಂಗಳವಾರದಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತರಾಟೆಗೆ ತೆಗೆದುಕೊಳ್ಳುವ ಕುರಿತೂ ನಾಯಕರು ಸಮಾಲೋಚನೆ ನಡೆಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.