ಬಿಜೆಪಿ ನಾಯಕರ ವಿರುದ್ಧ ಸದನದಲ್ಲಿ ಶಾಸಕನಿಂದ ಗಂಭೀರ ಆರೋಪ! ಗದ್ದಲಕ್ಕೆ ಕಾರಣವಾದ ‘ಆಪರೇಷನ್ ಕಮಲ’
ಬೆಂಗಳೂರು (ಜು.19): ವಿಶ್ವಾಸಮತ ಯಾಚನೆ ಕಲಾಪ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸಿಎಂ ಎಚ್.ಡಿ.ಕುಮಾರಸ್ವಾಮಿ ಸುದೀರ್ಘವಾಗಿ ಮಾತು ಆರಂಭಿಸಿದ ಬೆನ್ನಲ್ಲೇ, ಶಾಸಕರೊಬ್ಬರು ಮಾಡಿದ ಆರೋಪ ಗದ್ದಲಕ್ಕೆ ಕಾರಣವಾಯ್ತು.
ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿ, ಶಾಸಕರಿಗೆ ಬಿಜೆಪಿಯು ಆಮಿಷ ನೀಡುವ ಬಗ್ಗೆಯೂ ಪ್ರಸ್ತಾಪಿಸಿದರು. ಆಗ ಮಧ್ಯೆ ಪ್ರವೇಶಿಸಿದ ಕೋಲಾರ ಶಾಸಕ ಶ್ರೀನಿವಾಸ ಗೌಡ, ತನಗೂ ಬಿಜೆಪಿ ನಾಯಕರು ಆಫರ್ ನೀಡಿದ್ದನ್ನು ಪ್ರಸ್ತಾಪಿಸಿದರು.
ಮಲ್ಲೇಶ್ವರಂನ ಬಿಜೆಪಿ ಶಾಸಕ ಅಶ್ವಥ ನಾರಾಯಣ, ಮಾಜಿ ಶಾಸಕ ಸಿ.ಪಿ. ಯೋಗೇಶ್ವರ ಮತ್ತು ಯಲಹಂಕ ಶಾಸಕ ವಿಶ್ವನಾಥ್ ನನ್ನ ಮನೆಗೆ ನೇರವಾಗಿ ಬಂದು 5 ಕೋಟಿ ಹಣದ ಕೊಟ್ಟಿದ್ದರು. ನಾನು ಅದನ್ನು ತೆಗೆದುಕೊಳ್ಳಲು ನಿರಾಕರಿಸದ್ರೂ, ಅದನ್ನು ಅಲ್ಲೇ ಇಟ್ಟು ಹೋಗಿದ್ರು ಎಂದು ಕೋಲಾರ ಶಾಸಕ ಶ್ರೀನಿವಾಸ್ ಗೌಡ ಸದನಕ್ಕೆ ತಿಳಿಸಿದರು.
ಇದನ್ನೂ ಓದಿ | ಹೊಟ್ಟಗೇನ್ ತಿಂತೀರಾ? ಆರೋಪಗಳ ವಿರುದ್ಧ ಗುಡುಗಿದ ಸ್ಪೀಕರ್ ರಮೇಶ್ ಕುಮಾರ್
ಈಗ ಮೂವತ್ತು ಕೋಟಿ ಕೊಡ್ತೀವಿ, ಬರ್ತೀರಾ ಎಂದು ಕೇಳ್ತಿದ್ದಾರೆ. ಇದಕ್ಕೋಸ್ಕರ ಜನ ನಮಗೆ ವೋಟ್ ಹಾಕಿದ್ದಾರಾ? ಮನುಷ್ಯನಿಗೆ ಬೆಲೆ ಕಟ್ಟಿ ಖರೀದಿಸೋಕೆ ಹೊರಟ್ಟಿದ್ದೀರಾ? ಇವತ್ತು ಯಾರ್ಯಾರು, ಎಷ್ಟೆಷ್ಟು ಕೊಟ್ಟಿದ್ದಾರೆ, ತಗೊಂಡಿದ್ದಾರೆ ನನ್ನ ಬಳಿ ಮಾಹಿತಿಯಿದೆ ಎಂದು ಬಿಜೆಪಿ ವಿರುದ್ಧ ಗುಡುಗಿದರು.
ಬಿಜೆಪಿಯವರು ಇಲ್ಲ ಅಂತಾ ಹೇಳಲಿ, ನಾನು ಉತ್ತರ ಕೊಡುತ್ತೇನೆ ಎಂದು ಬಿಜೆಪಿಗೆ ಶ್ರೀನಿವಾಸ್ ಗೌಡ ಸವಾಲೆಸೆದರು.
ಇದಕ್ಕೆ ಧ್ವನಿಗೂಡಿಸಿದ ಸಚಿವ ಕೃಷ್ಣ ಭೈರೇಗೌಡ, ಇದರ ಬಗ್ಗೆ ತನಿಖೆಯಾಗಬೇಕು, ಬಿಜೆಪಿಯವರು ಯಾಕೆ ಮೌನವಾಗಿದ್ದಾರೆ? ಮೌನಂ ಸಮ್ಮತಿ ಲಕ್ಷಣವಾಗಿದೆ. ಈಗ ಮಾಧುಸ್ವಾಮಿಯವರಿಗೆ ಧ್ವನಿ ಬರುತ್ತಿಲ್ಲ? ಎಲ್ಲಿ ಹೋಯ್ತು ನೈತಿಕತೆ ಎಂದು ಹರಿಹಾಯ್ದರು.