ಬಿಜೆಪಿ ನಾಯಕರಿಂದ ಈ ಶಾಸಕರಿಗೆ ಕೋಟಿ, ಕೋಟಿ ಆಮಿಷ

By Web DeskFirst Published Sep 15, 2018, 7:12 AM IST
Highlights

ಬಿಜೆಪಿಯ ನಾಲ್ಕು ಮಂದಿ ನಾಯಕರು ಕಾಂಗ್ರೆಸ್‌ನ ಶಾಸಕರಿಗೆ ಕೋಟ್ಯಂತರ ರು. ಹಣದ ಆಮಿಷವೊಡ್ಡುವ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದಾರೆ.  

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಚಿತಾವಣೆ ಮೇರೆಗೆ ಆ ಪಕ್ಷದ ನಾಲ್ಕು ಮಂದಿ ನಾಯಕರು ಕಾಂಗ್ರೆಸ್‌ನ ಶಾಸಕರಿಗೆ ಕೋಟ್ಯಂತರ ರು. ಹಣದ ಆಮಿಷವೊಡ್ಡುವ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸುತ್ತಿದ್ದಾರೆ. 

ಕೂಡಲೇ ಈ ಎಲ್ಲ ಬಿಜೆಪಿನಾಯಕರ ವಿರುದ್ಧ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಹಣದ ಮೂಲದ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪಕ್ಷ ಆದಾಯ ತೆರಿಗೆ ಇಲಾಖೆಗೆ ಕೋರಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದ ನಿಯೋಗವು ಶುಕ್ರವಾರ ಐಟಿ ಇಲಾಖೆ ಕರ್ನಾಟಕ ಮತ್ತುಗೋವಾ ವೃತ್ತದ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಈಆಗ್ರಹ ಮಾಡಿದೆ. ದೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್.ಯಡಿಯೂರಪ್ಪ ಸೂಚನೆ ಮೇರೆಗೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಡಾ.ಅಶ್ವತ್ಥನಾರಾಯಣ, ಸತೀಶ್ ರೆಡ್ಡಿ ಮತ್ತು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಮತ್ತು ಇತರೆ ಬಿಜೆಪಿ ನಾಯಕರು ಅಖಾಡಕ್ಕೆ ಇಳಿದಿದ್ದಾರೆ. 

ಕಾಂಗ್ರೆಸ್‌ನ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ, ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಸೇರಿದಂತೆ ಹಲವರಿಗೆ ಹಣ ಹಾಗೂ ಇತರೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡುತ್ತಿರುವ ಈ ನಾಯಕರು ಅವಲಂಬಿಸಿರುವ ಹಣದ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚಲು ಕೂಡಲೇ ಈ ನಾಯಕರ ಮೇಲೆ ಐಟಿ ದಾಳಿ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಆಮಿಷವೊಡ್ಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಶಾಸಕರಾದ ಎಂ.ಶಿವಣ್ಣ, ಎಂ.ಟಿ.ಬಿ. ನಾಗರಾಜ್ ಮತ್ತು ಅವರ ಬೆಂಬಲಿಗರ ಮೇಲೆ ವಿಧಾನಸಭಾ ಚುನಾವಣೆಗೂ ಮುನ್ನ ಕಳೆದ ಫೆಬ್ರವರಿ ತಿಂಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಇದೇ ರೀತಿ ಈಗ ಪ್ರಜಾಪ್ರಭುತ್ವದ ಉಳಿವಿಗಾಗಿ ಹಾಗೂ ಭಾರತೀಯ ಸಂವಿಧಾನವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಶಾಸಕರಿಗೆ ಹಣ ಮತ್ತು ಆಮಿಷಗಳನ್ನು ಒಡ್ಡುತ್ತಿರುವ ಬಿಜೆಪಿ ನಾಯಕರ ವಿರುದ್ಧವೂ ಐಟಿ ದಾಳಿ ನಡೆಸಬೇಕು ಹಾಗೂ ಹಣದ ಮೂಲ ಪತ್ತೆ ಹಚ್ಚಬೇಕು ಎಂದು ದೂರಿನಲ್ಲಿ ಕೋರಲಾಗಿದೆ. 

ರಾಜ್ಯ ವಿಧಾಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದರಿಂದ ಮೊದಲು ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ ಬಿಜೆಪಿ,  ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸಿ ಸರ್ಕಾರ  ರಚಿಸಿತಾದರೂ, ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದರಿಂದ ಅವರು ರಾಜೀನಾಮೆ ನೀಡಿದರು. ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ರಚಿಸಿ ಯಶಸ್ವಿಯಾಗಿ ಆಡಳಿತ ನಡೆಸಲಾಗುತ್ತಿದೆ.ಆದರೆ, ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ನಿರಂತರವಾಗಿ ನಡೆಸುತ್ತಿದೆ ಎಂದು ದೂರಿನಲ್ಲಿ ಕಾಂಗ್ರೆಸ್ ಆರೋಪಿಸಿದೆ.

click me!