ಅಂತ್ಯವಾಯ್ತು ಚುನಾವಣಾ ಬಹಿರಂಗ ಪ್ರಚಾರ: ಮೌನವಾಗಿ ಲೆಕ್ಕಾಚಾರ ಹಾಕ್ತಿದ್ದಾನೆ ಮತದಾರ

By Suvarna Web DeskFirst Published Apr 8, 2017, 3:09 AM IST
Highlights

ಭಾರೀ ಕುತೂಹಲ ಮೂಡಿಸಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆ ಫೈಟ್ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಸುಮಾರು 20 ದಿನ ಭರ್ಜರಿ ಪ್ರಚಾರ ನಡೆದ ಎರಡೂ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಇಂದು ಇನ್ನುಳಿದ ಅವಧಿಯಲ್ಲಿ ಕೇವಲ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದ್ದು ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಕೊನೆಯ ಕ್ಷಣದ ಹೋರಾಟ ನಡೆಸಬೇಕಾಗಿದೆ.

ಮೈಸೂರು(ಎ.08): ಭಾರೀ ಕುತೂಹಲ ಮೂಡಿಸಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆ ಫೈಟ್ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ. ಸುಮಾರು 20 ದಿನ ಭರ್ಜರಿ ಪ್ರಚಾರ ನಡೆದ ಎರಡೂ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಇಂದು ಇನ್ನುಳಿದ ಅವಧಿಯಲ್ಲಿ ಕೇವಲ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದ್ದು ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ಕೊನೆಯ ಕ್ಷಣದ ಹೋರಾಟ ನಡೆಸಬೇಕಾಗಿದೆ.

ಬಹಿರಂಗ ಪ್ರಚಾರ ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿ ಮತ್ತು ಚುನಾವಣಾ ಏಜೆಂಟ್ ಹೊರತುಪಡಿಸಿ ಮತದಾರರಲ್ಲದವರು ಕ್ಷೇತ್ರ ವ್ಯಾಪ್ತಿಯಲ್ಲಿ ಉಳಿಯಲು ಅವಕಾಶವಿಲ್ಲದ ಕಾರಣ ಇಷ್ಟು ದಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ನಾಯಕರು ಉಭಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ತೊರೆದಿದ್ದಾರೆ. ಆದ್ರೆ ಮುಖ್ಯಮಂತ್ರಿಯಾದಿಯಾಗಿ ಬಹುತೇಕ ಎಲ್ಲಾ ನಾಯಕರು ಮೈಸೂರಿನಲ್ಲೇ ಉಳಿದುಕೊಂಡಿದ್ದು ಮೈಸೂರಿನಿಂದಲೇ ಕೊನೆಯ ಕ್ಷಣದ ಕಾರ್ಯತಂತ್ರ ನಡೆಯಲಿದೆ.

ಇನ್ನು ಉಳಿದಿರುವ ೪೮ ಗಂಟೆಗಳ ಅವಧಿಯಲ್ಲಿ ಉಭಯ ಕ್ಷೇತ್ರಗಳ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಕಸರತ್ತು ಮುಂದುವರಿಸಬೇಕಾಗಿದೆ. ಮನೆ ಮನೆ ಪ್ರಚಾರವನ್ನಷ್ಟೇ ನಡೆಸಬೇಕಾಗಿದ್ದು, ಮತದಾನದ ಕ್ಷಣದವರೆಗೂ ಮತದಾರನ ಒಲವನ್ನು‌ ತನ್ನತ್ತ ಉಳಿಸಿಕೊಳ್ಳಲು ಪ್ರಯತ್ನದಲ್ಲಿ ತೊಡಗಬೇಕಾಗಿದೆ. ಆದರೆ ಮತದಾರನ ಗುಟ್ಟು ಇನ್ನೂ ರಹಸ್ಯವಾಗಿಯೇ ಉಳಿದಿದ್ದು, ಎರಡೂ ಕ್ಷೇತ್ರಗಳಲ್ಲಿ ಭಾರೀ ಸ್ಪರ್ಧೆಯ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಮಧ್ಯೆ ಕೊನೆಯ ಕ್ಷಣದಲ್ಲಿ ಹಣ ಮತ್ತು ಮದ್ಯ ಹಂಚಿಕೆ ವ್ಯಾಪಕವಾಗಿ ನಡೆಯುವ ಬಗ್ಗೆ ಊಹಿಸಲಾಗಿದ್ದು, ಚುನಾವಣಾ ಆಯೋಗ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದೆ. ಮತದಾನದ ಹಿನ್ನೆಲೆಯಲ್ಲಿ‌ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗುತ್ತಿದೆ.

ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್.

 

click me!