
ಮೈಸೂರು(ಎ.07): ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಇಂದು ಸಂಜೆ ೫ ಗಂಟೆ ಬಳಿಕ ಮತದಾರರಲ್ಲದವರು ಕ್ಷೇತ್ರದ ವ್ಯಾಪ್ತಿಯಿಂದ ಹೊರಗುಳಿಯಬೇಕಾಗಿದ್ದು, ಉಭಯ ಕ್ಷೇತ್ರದಾದ್ಯಂತ ಇಂದಿನಿಂದಲೇ ಏಪ್ರಿಲ್ ೯ರ ಮಧ್ಯರಾತ್ರಿಯವರೆಗೂ ಮದ್ಯ ನಿಷೇಧ ಜಾರಿಯಾಗಲಿದೆ.
ಚುನಾವಣೆ ಘೋಷಣೆಯಾದ ದಿನದಿಂದ ಆರಂಭವಾಗಿ ಇಷ್ಟು ದಿನಗಳ ಕಾಲ ನಡೆದ ಎರಡೂ ಕ್ಷೇತ್ರಗಳ ಬಹಿರಂಗ ಪ್ರಚಾರ ಇಂದು ಕೊನೆಗೊಳ್ಳಲಿದೆ. ಬಿರುಬಿಸಿಲಿನಲ್ಲಿ ಬಹಿರಂಗ ಪ್ರಚಾರ, ರೋಡ್ ಶೋ, ಪಾದಯಾತ್ರೆ ಸೇರಿದಂತೆ ಮತ ಪ್ರಚಾರಕ್ಕಾಗಿ ನಾನಾ ಸರ್ಕಸ್ ನಡೆಸಿದ ಮತದಾರರಲ್ಲದ ನಾಯಕರುಗಳು ಸಂಜೆ ೫ ಗಂಟೆಯೊಳಗಾಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಬಿಟ್ಟು ಹೊರಡಬೇಕಿದೆ. ಈ ಸಂಬಂಧ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಸೂಚನೆಯನ್ನೂ ಹೊರಡಿಸಲಾಗಿದೆ. ಅಭ್ಯರ್ಥಿ ಮತ್ತು ಚುನಾವಣಾ ಏಜೆಂಟ್ ಮಾತ್ರ ಕ್ಷೇತ್ರ ವ್ಯಾಪ್ತಿಯಲ್ಲಿ ಉಳಿಯಲು ಅವಕಾಶವಿದೆ.
ಇನ್ನು ಮತದಾನದ ಹಿನ್ನಲೆಯಲ್ಲಿ ಎರಡೂ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇಂದಿನಿಂದ ೪೮ ಗಂಟೆಗಳ ಕಾಲ ಮದ್ಯ ಸರಬರಾಜು ಮತ್ತು ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಈ ಮಧ್ಯೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಹಣ ಹಂಚಿಕೆಯ ಸಾಧ್ಯತೆಯೂ ಇರುವ ಕಾರಣ, ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ.
ಇನ್ನು ಕಾಂಗ್ರೆಸ್ ಅಭ್ಯರ್ಥಿಗಳ ಪರ ತಮ್ಮ ಪ್ರಚಾರವನ್ನು ಇಂದೂ ಮುಂದುವರಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಂಡ್ಲುಪೇಟೆಯಲ್ಲಿ ರೋಡ್ ಶೋ ಮತ್ತು ಬಹಿರಂಗ ಪ್ರಚಾರ ಸಭೆ ನಡೆಸಲಿದ್ದಾರೆ. ಈ ಮಧ್ಯೆ ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ಅಭ್ಯರ್ಥಿಗಳ ಮನೆ ಮನೆ ಪ್ರಚಾರಕ್ಕಷ್ಟೇ ಅವಕಾಶವಿದ್ದು, ಅಭ್ಯರ್ಥಿಗಳು ಪ್ರತೀ ಮತದಾರರ ಮನೆ ಬಾಗಿಲಿಗೆ ಭೇಟಿ ನೀಡಿ ಮತಯಾಚನೆ ಮಾಡಲಿದ್ದಾರೆ. ಒಟ್ಟಾರೆ, ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಇಷ್ಟು ದಿನಗಳ ಕಾಲ ಇದ್ದ ಚುನಾವಣಾ ಬಿಸಿ ಇಂದಿನಿಂದ ಕೊನೆಯ ಕ್ಷಣದ ತಿರುವಿಗೆ ಸಾಕ್ಷಿಯಾಗಲಿದೆ.
ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.