ಪೂರ್ಣಾವಧಿ ಮುಗಿಸಿದವರು ಕೇವಲ ಮೂವರು: ಉಳಿದವರೆಲ್ಲಾ ಹಿಂಗೆ ಬಂದು, ಹಂಗೆ ಹೋದರು!

Published : Jul 24, 2019, 03:48 PM ISTUpdated : Jul 27, 2019, 12:22 PM IST
ಪೂರ್ಣಾವಧಿ ಮುಗಿಸಿದವರು ಕೇವಲ ಮೂವರು: ಉಳಿದವರೆಲ್ಲಾ ಹಿಂಗೆ ಬಂದು, ಹಂಗೆ ಹೋದರು!

ಸಾರಾಂಶ

ರಾಜ್ಯದಲ್ಲಿ ಮುರಿದು ಬಿತ್ತು ಜೆಡಿಎಸ್, ಕಾಂಗ್ರೆಸ್ ಮೈತ್ರಿ| 14 ತಿಂಗಳಿಗೇ ರಾಜೀನಾಮೆ ಕೊಟ್ಟ ಎಚ್. ಡಿ. ಕುಮಾರಸ್ವಾಮಿ| ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಪೂರ್ಣಾವಧಿ ಪೂರೈಸಿದವರು ಕೇವಲ ಮೂವರು| 

ಬೆಂಗಳೂರು[ಜು.24]: ಕರ್ನಾಟಕ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಿದೆ. ಯಾರೂ ಊಹಿಸದಿರುವ ಸಂದರ್ಭದಲ್ಲಿ, ದೋಸ್ತಿಗೆ ಕೈಕೊಡಲಾರರು ಎಂದೇ ಭಾವಿಸಲಾಗಿದ್ದ ಶಾಸಕರು ರಾಜೀನಾಮೆ ಪತ್ರವನ್ನೆಸೆದು ದೋಸ್ತಿ ಪಾಳಯಕ್ಕೆ ಶಾಕ್ ಕೊಟ್ಟಿದ್ದಾರೆ. ಅತೃಪ್ತರ ಹಠವೇ ಗೆದ್ದಿದ್ದು, ಕಳೆದ 16 ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿದ್ದ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಪೂರ್ಣಾವಧಿ ಆಡಳಿತ ಪೂರೈಸಿದ ಮುಖ್ಯಮಂತ್ರಿಗಳು ಯಾರು? ಎಂದು ಮೆಲುಕು ಹಾಕಿದಾಗ ಕೇವಲ ಮೂರೇ ಹೆಸರುಗಳು ಸಿಗುತ್ತವೆ. ಇನ್ನು ಆ ಮೂವರು ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷದ ನಾಯಕರೇ ಎಂಬುವುದು ಇನ್ನಷ್ಟು ಕುತೂಹಲಕಾರಿಯಾಗಿದೆ. ಅಷ್ಟಕ್ಕೂ ಆ ಮೂವರು ಸಿಎಂಗಳು ಯಾರು? ಇಲ್ಲಿದೆ ವಿವರ

ಎಸ್. ನಿಜಲಿಂಗಪ್ಪ[1962-68], ಡಿ. ದೇವರಾಜ ಅರಸು[1972-77] ಹಾಗೂ ಸಿದ್ದರಾಮಯ್ಯ[2013-2018] ಈ ಮೂವರಷ್ಟೇ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪೂರ್ಣಾವಧಿ ಆಡಳಿತ ಪೂರೈಸಿದ ಮುಖ್ಯಮಂತ್ರಿಗಳೆಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕಾಂಗ್ರೆಸ್, ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಷಗಳು. ಹೀಗಿದ್ದರೂ ಪೂರ್ಣಾವಧಿ ಪೂರೈಸಿದ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷದವರೆಂಬುವುದು ಉಲ್ಲೇಖನೀಯ. ಬಿಜೆಪಿ ಹಾಗೂ ಜೆಡಿಎಸ್ ಪಾಳಯದ ನಾಯಕರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರೂ, ಅವರಾರೂ ಪೂರ್ಣಾವಧಿ ಆಡಳಿತ ಪೂರೈಸಲು ಸಾಧ್ಯವಾಗಿಲ್ಲ. 

ಫೆಬ್ರವರಿ 2006ರಿಂದ ಅಕ್ಟೋಬರ್ 2007ರವರೆಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. ಈ ವೇಳೆ ಎಚ್. ಡಿ. ಕುಮಾರಸ್ವಾಮಿ ಮೊಟ್ಟ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಮನಸ್ತಾಪವೇರ್ಪಟ್ಟಿದ್ದರಿಂದ ಮೈತ್ರಿ ಮುರಿದು ಬಿತ್ತು. ಮುಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿತು. 

2018ರಲ್ಲಿ ಮತ್ತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿಯಿತು. ಕುಮಾರಸ್ವಾಮಿ ಎರಡನೇ ಬಾರಿ ಕರ್ನಾಟಕದ ಸಿಎಂ ಆದರು. ಆದರೆ 14 ತಿಂಗಳು ಅಧಿಕಾರ ನಡೆಸಿದ ಸರ್ಕಾರ ಬಹುಮತ ಕಳೆದುಕೊಂಡು ಪತನವಾಯ್ತು.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?

ಇನ್ನು ಬಿಜೆಪಿಯತ್ತ ದೃಷ್ಟಿ ಹರಿಸಿದರೆ, ಬಿ. ಎಸ್. ಯಡಿಯೂರಪ್ಪ 2007ರಲ್ಲಿ ಮೊದಲ ಬಾರಿ ಕರ್ನಾಟಕದ ಸಿಎಂ ಆದರು. ದುರಾದೃಷ್ಟವಶಾತ್ ಜೆಡಿಎಸ್ ಮೈತ್ರಿ ಮುರಿದುಕೊಂಡ ಪರಿಣಾಮ ಏಳು ದಿನಗಳಲ್ಲೇ ಸರ್ಕಾರ ಮುರಿದು ಬಿತ್ತು ಹಾಗೂ ರಾಷ್ಟ್ರಪತಿ ಆಳ್ವಿಕೆ ಹೇರಲಾಯ್ತು.

ಆದರೆ 2008ರಲ್ಲಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಐತಿಹಾಸಿಕ ಜಯಗಳಿಸಿತು. ಬಿಎಸ್‌ವೈ ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಅದೃಷ್ಟ ಸಾಥ್ ನೀಡದಿದ್ದ ಪರಿಣಾಮ ಭ್ರಷ್ಟಾಚಾರ ಪ್ರಕರಣದಡಿಯಲ್ಲಿ 2011ರ ಜುಲೈನಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯ್ತು.

ಮೂರನೇ ಬಾರಿ ಬಿ. ಎಸ್ ಯಡಿಯೂರಪ್ಪ ಕರ್ನಾಟಕದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರಾದರೂ ಬಹುಮತ ಸಾಬೀತುಪಡಿಸಲಾಗದೆ ಕೇವಲ ಆರು ದಿನಗಳಲ್ಲಿ[2018ರ ಮೇ 17 ರಿಂದ 23] ರಾಜೀನಾಮೆ ನೀಡಬೇಕಾಯ್ತು.

1956ರಲ್ಲಿ ರಾಜ್ಯವಾಗಿ ರೂಪುಗೊಂಡ ಕರ್ನಾಟಕ ಈವರೆಗೆ 25 ಮುಖ್ಯಮಂತ್ರಿಗಳನ್ನು ಕಂಡಿದೆ. ಹಲವಾರು ಮಂದಿ ಪೂರ್ಣಝಾವಧಿ ಪೂರೈಸುವ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ಇನ್ನು ಕೆಲವರು ಪೂರ್ಣಾವಧಿ ಮುಗಿಸುವುದಕ್ಕೂ ಮೊದಲೇ ಚುನಾವಣಾ ದಿನಾಂಕ ಘೋಷಣೆಯಾದ ಕಾರಣ ಈ ಅವಕಾಶದಿಂದ ವಂಚಿತರಾಗಿದ್ದಾರೆ. ಅದೇನಿದ್ದರೂ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗಿ ಮಿಂಚಿದ ನಾಯಕರಲ್ಲಿ ಕಾಂಗ್ರೆಸ್ ಮುಖಂಡರ ಸಂಖ್ಯೆ ಹೆಚ್ಚು ಎಂಬುವುದು ಉಲ್ಲೇಖನೀಯ.

ಪೂರ್ಣವಧಿ ಅಂದರೆ ಏನು?

ರಾಜ್ಯ ವಿಧಾನಸಭೆಯ ಆಡಳಿತಾವಧಿ 5 ವರ್ಷ. ಹೀಗಾಗಿ ರಾಜ್ಯ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿದ ಆಡಳಿತ ಪಕ್ಷದ ಮುಖ್ಯಮಂತ್ರಿ 5 ವರ್ಷಗಳವರೆಗೆ ಅಧಿಕಾರ ಪೂರೈಸಬೇಕು. ಹೀಗಾದಲ್ಲಿ ಆ ಮುಖ್ಯಮಂತ್ರಿ ಪೂರ್ಣಾವಧಿ ಪೂರೈಸಿದಂತಾಗುತ್ತದೆ. 

ಎಸ್. ಎಂ ಕೃಷ್ಣ ಯಾಕಾಗಿ ಪೂರ್ಣಾವಧಿ ಸಿಎಂ ಅಲ್ಲ?

1999ರ ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಎಸ್‌. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿ ಸರ್ಕಾರ ರಚಿಸಿ, ಉತ್ತಮ ಆಡಳಿತ ನೀಡಿತ್ತು. ಆದರೆ ಇನ್ನೇನು ಪೂರ್ಣಾವಧಿ ಮುಗಿಸಲು ಕೇವಲ 5 ತಿಂಗಳು ಇದೆ ಎನ್ನುವಾಗಲೇ ಲೋಕಸಭಾ ಚುನಾವಣೆ ಎದುರಾಗಿತ್ತು. ಹೀಗಾಗಿ ವಿಧಾನಸಭೆ ಚುನಾವಣೆಯೂ ಒಟ್ಟಿಗೇ ನಡೆಯಲಿ ಎನ್ನುವ ಉದ್ದೇಶದಿಂದ ಮಾಜಿ ಸಿಎಂ. ಎಸ್. ಎಂ ಕೃಷ್ಣ ವಿಧಾನಸಭೆಯನ್ನು ವಿಸರ್ಜಿಸಿದ್ದರು. ಹೀಗಾಗಿ ಪೂರ್ಣಾವಧಿ ಸಿಎಂ ಪಟ್ಟಿಗೆ ಎಸ್‌ಎಂಕೆ ಹೆಸರು ಸೇರ್ಪಡೆಯಾಗಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌
ದುಬೈ ಮರುಭೂಮಿಯಲ್ಲಿ ನಿಗೂಢ ಜೀವಿ ಪತ್ತೆ: ಪ್ರವಾಸಿ ಮಹಿಳೆ ಹಂಚಿಕೊಂಡ ವಿಡಿಯೋ ಭಾರೀ ವೈರಲ್!