ಪಠ್ಯ ಪುಸ್ತಕಗಳಲ್ಲಿ ಲೆನಿನ್ ಓಕೆ, ಆದ್ರೆ ಗಾಂಧಿ ಏಕಿಲ್ಲ ?

By Web DeskFirst Published Oct 3, 2018, 5:04 PM IST
Highlights

ಸ್ಟಾಲಿನ್, ಲೆನಿನ್, ರಷ್ಯಾ ಕ್ರಾಂತಿಯ ಬಗ್ಗೆ ಮಾಹಿತಿಯಿರುವುದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆದರೆ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಬಗ್ಗೆ ಮಾಹಿತಿ ಇರಲೇಬೇಕು. 

ಅಗರ್ತಲ[ಅ.03]: ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ತ್ರಿಪುರ ಸಿಎಂ ಬಿಪ್ಲಾಬ್ ಕುಮಾರ್ ದೇಬ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ತ್ರಿಪುರ ವಿವಿಯ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು,ನಮ್ಮ ರಾಜ್ಯದ ಇತಿಹಾಸ ಪಠ್ಯ ಪುಸ್ತಕಗಳ ಪುಟಗಳನ್ನು ತಿರುಗಿಸಿದರೆ ರಷ್ಯಾದ ಜೋಸೆಫ್ ಸ್ಟಾಲಿನ್, ಕಮ್ಯೂನಿಸ್ಟ್ ನಾಯಕ ಲೆನಿನ್, ರಷ್ಯಾದ ಕ್ರಾಂತಿಯ ಬಗ್ಗೆಯೇ ಮಾಹಿತಿಯಿರುತ್ತದೆ. ಆದರೆ ನಮ್ಮ ರಾಷ್ಟ್ರಪಿತ ಗಾಂಧೀಜಿಯ ಬಗ್ಗೆ ಮಾಹಿತಿಗಳು ಹುಡುಕಿದರೂ ಸಿಗುವುದಿಲ್ಲ.

ಸ್ಟಾಲಿನ್, ಲೆನಿನ್, ರಷ್ಯಾ ಕ್ರಾಂತಿಯ ಬಗ್ಗೆ ಮಾಹಿತಿಯಿರುವುದಕ್ಕೆ ನಮ್ಮ ಅಭ್ಯಂತರವೇನಿಲ್ಲ. ಆದರೆ ರಾಷ್ಟ್ರಪಿತ ಮಹಾತ್ಮ ಗಾಂಧಿಯ ಬಗ್ಗೆ ಮಾಹಿತಿ ಇರಲೇಬೇಕು. ನಮ್ಮ ರಾಜ್ಯದ ಇತಿಹಾಸದ ಪುಸ್ತಕಗಳಲ್ಲಿ ಭಾರತೀಯ ಇತಿಹಾಸದ ಮಾಹಿತಿಯನ್ನು ಹುಡುಕಿದರೆ ಅನ್ಯ ದೇಶದ ವಿಷಯಗಳೆ ಇರುತ್ತವೆ. ನಮ್ಮ ದೇಶದ ಸಾಧಕರ ವಿಷಯ ಅತ್ಯಗತ್ಯವಾಗಿ ಇರಲೇ ಬೇಕು ಎಂದು ತಿಳಿಸಿದರು.

ಭಾರತೀಯ ನಾಯಕರಾದ ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕ್, ನೇತಾಜಿ ಸುಭಾಷ್ ಚಂದ್ರ ಬೋಸ್, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಒಳಗೊಂಡ ಹಲವು ನಾಯಕರ ಮಾಹಿತಿಗಳನ್ನು ತ್ರಿಪುರ ರಾಜ್ಯದ ಶಾಲೆಗಳ ಎನ್ ಸಿ ಇ ಆರ್ ಟಿ ಪಠ್ಯಪುಸ್ತಕಗಳಲ್ಲಿ ಸೇರಿಸಲು ರಾಜ್ಯ ಸರ್ಕಾರ ಯೋಜಿಸಿದ್ದು 2019ರಲ್ಲಿ ಜಾರಿಗೊಳಿಸುವ ಸಾಧ್ಯತೆಯಿದೆ. 

ಆಗಸ್ಟ್ ತಿಂಗಳಲ್ಲಿ ಇದೇ ಸಿಎಂ, ಬಾತುಕೋಳಿಗಳು ಈಜಾಡಿದರೆ ಕೆರೆಗಳಲ್ಲಿ ಆಮ್ಲಜನಕ ಪ್ರಮಾಣ ತನ್ನಿಂತಾನೇ ಏರಿಕೆಯಾಗಲಿದೆ. ಆದ ಕಾರಣ, ತ್ರಿಪುರದ ಗ್ರಾಮಸ್ಥರಿಗೆ 50 ಸಾವಿರ ಬಾತುಕೋಳಿ ಮರಿಗಳನ್ನು ವಿತರಣೆ ಮಾಡುತ್ತೇನೆ ಎಂದು ಪ್ರಕಟಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇಷ್ಟಲ್ಲದೆ ಇಂಟರ್ ನೆಟ್ ನವ ಭಾರತದಲ್ಲಿ ಮಾತ್ರವಲ್ಲ ಮಹಾಭಾರತದ ಕಾಲದಲ್ಲೂ ಚಾಲ್ತಿಯಲ್ಲಿತ್ತು. ಗೌತಮ ಬುದ್ಧ ಸಮುದ್ರ ಮೂಲಕ ಜಪಾನಿಗೆ ತೆರಳಿದ್ದ ಮುಂತಾದ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

click me!