ನಮ್ಮ ಕುಟುಂಬದಿಂದ ಮೂರನೇ ವ್ಯಕ್ತಿ ಸ್ಪರ್ಧೆ ಮಾಡುವುದಿಲ್ಲ : ಎಚ್’ಡಿಕೆ

By Suvarna Web DeskFirst Published Mar 8, 2018, 9:57 AM IST
Highlights

ರಾಜ್ಯ ವಿಧಾನಸಭಾ ಚುನಾವಣೆಗೆ ನಮ್ಮ ಕುಟುಂಬದಿಂದ ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿ ಸ್ಪರ್ಧಿಸುವುದಿಲ್ಲ. ಒಂದು ವೇಳೆ ಮೂರನೇ ವ್ಯಕ್ತಿ ಕಣಕ್ಕಿಳಿಯುವ ಒತ್ತಾಯ ಬಂದರೆ ನಾನೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ .ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ನಮ್ಮ ಕುಟುಂಬದಿಂದ ಯಾವುದೇ ಕಾರಣಕ್ಕೂ ಮೂರನೇ ವ್ಯಕ್ತಿ ಸ್ಪರ್ಧಿಸುವುದಿಲ್ಲ. ಒಂದು ವೇಳೆ ಮೂರನೇ ವ್ಯಕ್ತಿ ಕಣಕ್ಕಿಳಿಯುವ ಒತ್ತಾಯ ಬಂದರೆ ನಾನೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ .ಡಿ.ಕುಮಾರಸ್ವಾಮಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ನಗರದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ನಡೆದ ವಿಕಾಸಪರ್ವ ಪಾದ ಯಾತ್ರೆಯಲ್ಲಿ ಭಾಗವಹಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಚನ್ನಪಟ್ಟಣ ಮತ್ತು ರಾಜರಾಜೇಶ್ವರಿನಗರ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿಯೂ ನಮ್ಮ ಕುಟುಂಬದ ಸದಸ್ಯರು ಸ್ಪರ್ಧಿಸುವುದಿಲ್ಲ.

ಈಗಾಗಲೇ ಹೇಳಿರುವಂತೆ ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಕಣಕ್ಕಿಳಿಯುತ್ತೇವೆ. ಕುಟುಂಬದಿಂದ ಮೂರನೇ ವ್ಯಕ್ತಿಯನ್ನು ಕಣಕ್ಕಿಳಿ ಸುವುದಿಲ್ಲ. ಒಂದು ವೇಳೆ ಸ್ಪರ್ಧಿಸಲೇಬೇಕು ಎಂಬ ಒತ್ತಾಯ ಬಂದರೆ ನಾನೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದರು.

ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಬೇಕು ಮತ್ತು ರಾಜ ರಾಜೇಶ್ವರಿನಗರದಿಂದ ಎಚ್ .ಡಿ.ರೇವಣ್ಣ ಪುತ್ರ ಪ್ರಜ್ವಲ್ ಸ್ಪರ್ಧಿಸುವಂತೆ ಆಯಾ ಕ್ಷೇತ್ರದ ಸ್ಥಳೀಯ ಕಾರ್ಯ ಕರ್ತರಿಂದ ಒತ್ತಡ ಇದೆ. ಆದರೆ, ಇಬ್ಬರು ಸ್ಪರ್ಧಿಸುತ್ತಿಲ್ಲ. ಪಕ್ಷಕ್ಕಾಗಿ ಶ್ರಮಿಸಿದ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಆಡಳಿತ ಯಂತ್ರ ದುರ್ಬಲಗೊಂಡಿದೆ. ಕೋಮು ವಾದ ಮತ್ತು ಹಿಂಸಾಚಾರಗಳು ಹೆಚ್ಚಾಗುತ್ತಿವೆ. ಇದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಪಾತ್ರ ಇದೆ. ಬಿಜೆಪಿ ಪ್ರತಿಯೊಂದು ಪ್ರಕರಣವನ್ನು ಹಿಂದೂ ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು. 

ಇದೇ ವೇಳೆ ಪದ್ಮನಾಭನಗರ ಕ್ಷೇತ್ರದ ಗಣೇಶ್ ದೇವಾಲಯ, ಯಡಿಯೂರು, ಬನಶಂಕರಿ ದೇವಸ್ಥಾನ  ಸೇರಿದಂತೆ ಇತರೆ ಪ್ರದೇಶದಲ್ಲಿ ಪಾದಯಾತ್ರೆ ಯಲ್ಲಿ ಭಾಗವಹಿಸಿ ಪ್ರಚಾರ ನಡೆಸಿದರು.

click me!