ಈರುಳ್ಳಿ 50 ಪೈಸೆ, ಬೆಳ್ಳುಳ್ಳಿ ಕೆಜಿಗೆ 2 ರು.!

By Web DeskFirst Published Dec 5, 2018, 7:37 AM IST
Highlights

ಈರುಳ್ಳಿ ಬೆಲೆ ಕೆಜಿಗೆ 50 ಪೈಸೆ ಮತ್ತು ಬೆಳ್ಳುಳ್ಳಿ ಬೆಲೆ ಕೆಜಿಗೆ 2 ರು. ದರ ಪಡೆದುಕೊಳ್ಳುವ ಮೂಲಕ ರೈತರ ಕಣ್ಣಲ್ಲಿ ನೀರು ತರಿಸಿದೆ. 

ನೀಮುಚ್‌[ಡಿ.05]: ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ವೇಳೆ ಬಹುತೇಕ ಎಲ್ಲಾ ಪಕ್ಷಗಳು ರೈತರ ಪರ ಭರವಸೆಯ ಮಹಾಪೂರವನ್ನೇ ಹರಿಸಿದ್ದವು. ಆದರೆ ಮತ್ತೊಂದೆಡೆ ಇದೀಗ ರೈತರು ಕಣ್ಣಿರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ, ರಾಜ್ಯದ ಸಗಟು ಮಾರುಕಟ್ಟೆಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಪಾತಾಳಕ್ಕೆ ಕುಸಿದಿದೆ.

ರಾಜ್ಯದ ಮಾಲ್ವಾ ವಲಯದಲ್ಲಿ ಪ್ರಮುಖ ತರಕಾರಿ ಮಾರುಕಟ್ಟೆಗಳ ಪೈಕಿ ಒಂದಾದ ನೀಮುಚ್‌ನಲ್ಲಿ ಭಾನುವಾರ ಈರುಳ್ಳಿ ಬೆಲೆ ಕೆಜಿಗೆ 50 ಪೈಸೆ ಮತ್ತು ಬೆಳ್ಳುಳ್ಳಿ ಬೆಲೆ ಕೆಜಿಗೆ 2 ರು. ದರ ಪಡೆದುಕೊಳ್ಳುವ ಮೂಲಕ ರೈತರ ಕಣ್ಣಲ್ಲಿ ನೀರು ತರಿಸಿದೆ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾದ ಕಾರಣ ನಿರೀಕ್ಷೆಗೂ ಮೀರಿ ಫಲಸು ಬಂದಿದೆ. ಪರಿಣಾಮ ರೈತರು ಕಟಾವಾದ ಬೆಳೆಯನ್ನು ಮಾರುಕಟ್ಟೆಗೆ ತರುತ್ತಲೇ ಬೇಡಿಕೆ ಕುಸಿದು ಧಾರಣೆಯೂ ನೆಲಕಚ್ಚಿದೆ.

ಮಾರುಕಟ್ಟೆಯಲ್ಲಿ ಸಿಕ್ಕಿದ ಬೆಲೆಯಿಂದ ಬೇಸತ್ತ ಹಲವು, ರೈತರು ಫಲಸನ್ನು ಮಾರಾಟ ಮಾಡದೆ ಹಾಗೆಯೇ ಬಿಟ್ಟು ಹೋಗುತ್ತಿದ್ದಾರೆ. ರೈತರಿಗೆ ಇಷ್ಟೊಂದು ಕನಿಷ್ಠ ಬೆಲೆ ಸಿಗುತ್ತಿದ್ದರೂ, ಚಿಲ್ಲರೆ ಮಾರುಕಟ್ಟೆಯಲ್ಲಿ ಈಗಲೂ ಈರುಳ್ಳಿ 15-20 ರು.ಗೆ ಹಾಗೂ ಬೆಳ್ಳುಳ್ಳಿ 30-40 ರು.ಗೆ ಮಾರಾಟವಾಗುತ್ತಿದೆ.

2016ರಲ್ಲೂ ಹೀಗೆ ಈರುಳ್ಳಿ ಬೆಲೆ ಕೆಜಿಗೆ 30 ಪೈಸೆಗೆ ಕುಸಿದಿತ್ತು. ಹೀಗಾಗಿ ಬಳಿಕ ಸರ್ಕಾರವೇ ರೈತರಿಂದ ಕೆಜಿಗೆ 8 ರು.ನಂತೆ ಖರೀದಿಸುವ ಯೋಜನೆ ಜಾರಿಗೆ ತಂದಿತ್ತು. ಆದರೆ ಯೋಜನೆ ಜಾರಿಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದ ಬಳಿಕ ಅದನ್ನು ಕೈಬಿಡಲಾಗಿತ್ತು.

click me!