ಗೌರಿ ಹತ್ಯೆಯಾಗಿ ಇಂದಿಗೆ ವರ್ಷ

By Web DeskFirst Published Sep 5, 2018, 8:49 AM IST
Highlights

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ ಒಂದು ವರ್ಷಗಳು ಕಳೆದಿದೆ. ಈ ನಿಟ್ಟಿನಲ್ಲಿ ಬುಧವಾರ ಗೌರಿ ದಿನ ಎಂದು ಆಚರಣೆ ಮಾಡಲಾಗುತ್ತಿದೆ. 

ಬೆಂಗಳೂರು :  ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಗುಂಡಿಕ್ಕಿ ಹತ್ಯೆ ಮಾಡಿ ಒಂದು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ‘ಗೌರಿ ಲಂಕೇಶ್‌ ಬಳಗ’ ಮತ್ತು ‘ಗೌರಿ ಲಂಕೇಶ್‌ ಮೆಮೋರಿಯಲ್‌ ಟ್ರಸ್ಟ್‌’ ವತಿಯಿಂದ ಸೆ.5 (ಬುಧವಾರ)ರಂದು ‘ಗೌರಿ ದಿನ’ ಎಂಬ ವಿಶೇಷ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿದೆ.

ಬೆಳಗ್ಗೆ 10.30ಕ್ಕೆ ನಗರದ ಆನಂದರಾವ್‌ ವೃತ್ತದಲ್ಲಿರುವ ಗಾಂಧಿ ಪ್ರತಿಮೆಯಿಂದ ರಾಜಭವನ ಚಲೋ ಹಮ್ಮಿಕೊಂಡಿದ್ದು, ಹೋರಾಟಗಾರ ಸ್ವಾಮಿ ಅಗ್ನಿವೇಶ್‌ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್‌, ಡಾ.ವಿಜಯಾ, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ, ಸಾಹಿತಿ ಡಾ.ಕೆ.ಮರುಳ ಸಿದ್ದಪ್ಪ, ಚಿಂತಕ ಜಿ.ಕೆ.ಗೋವಿಂದರಾವ್‌, ರಹಮತ್‌ ತರಿಕೆರೆ, ಡಾ.ಎಸ್‌.ಜಿ.ಸಿದ್ದರಾಮಯ್ಯ, ಬಹುಭಾಷಾ ಕಲಾವಿದ ಪ್ರಕಾಶ್‌ ರೈ, ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2.30ರಿಂದ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶ’ ಹಮ್ಮಿಕೊಂಡಿದ್ದು, ಸಮಾವೇಶದಲ್ಲಿ ಹೋರಾಟಗಾರ ನೂರ್‌ ಶ್ರೀಧರ್‌ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಸಿದ್ದಾರ್ಥ ವರದರಾಜನ್‌ ಅವರು ಗೌರಿ ಪತ್ರಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಗೌರಿ ಹೆಸರಿನಲ್ಲಿ ಹೊರತರುತ್ತಿರುವ ಲೇಖನಿಯನ್ನು ಸಾಹಿತಿ ಚಂದ್ರಶೇಖರ ಪಾಟೀಲ್‌ ಹಾಗೂ ಗೌರಿ ಸಹೋದರಿ ಕವಿತಾ ಲಂಕೇಶ್‌ ಬಿಡುಗಡೆ ಮಾಡಲಿದ್ದಾರೆ. ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಾಹಿತಿಗಳಾದ ಬೊಳುವಾರು ಮಹಮ್ಮದ್‌ ಕುಂಞಿ, ಪ್ರೊ.ಅರವಿಂದ ಮಾಲಗತ್ತಿ, ಕೆ.ಟಿ.ಗಂಗಾಧರ್‌, ವಿ.ಮರಿಸ್ವಾಮಿ, ಬರಗೂರು ರಾಮಚಂದ್ರಪ್ಪ, ಇಂದೂಧರ ಹೊನ್ನಾಪುರ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಸಮಾವೇಶದಲ್ಲಿ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಂಡಿದ್ದು, ಮಧ್ಯಾಹ್ನ 3.45ರಿಂದ ಪ್ರಾರಂಭವಾಗುವ ‘ಸನಾತನವಾದಿ ಭಯೋತ್ಪಾದನೆ! ಎಚ್ಚರ, ಎಚ್ಚರಿಕೆ’, ಗೋಷ್ಠಿಯಲ್ಲಿ ಉಮಾದೇವಿ ಕಲಬುರಗಿ, ಇಂದಿರಾ ಲಂಕೇಶ್‌, ಮೇಘನಾ ಪಾನ್ಸರೆ ಭಾಗವಹಿಸಲಿದ್ದಾರೆ. ಗೋಷ್ಠಿಯ ಅಧ್ಯಕ್ಷತೆಯನ್ನು ತೀಸ್ತಾ ಸೆಟಲ್ವಾಡ್‌ ವಹಿಸಲಿದ್ದು, ಅತಿಥಿಗಳಾಗಿ ಸಾಹಿತಿ ಎಚ್‌.ಎಸ್‌.ಅನುಪಮಾ, ಮಾವಳ್ಳಿ ಶಂಕರ್‌, ರಂಜಾನ್‌ ದರ್ಗಾ, ಎಸ್‌.ಆರ್‌.ಹಿರೇಮಠ, ಅಗ್ನಿ ಶ್ರೀಧರ್‌, ಕೋಡಿಹಳ್ಳಿ ಚಂದ್ರಶೇಖರ್‌, ನಗರಿ ಬಾಬಯ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಸಂಜೆ 4.45ರಿಂದ ನಡೆಯುವ ‘ಕಗ್ಗತ್ತಲ ಕಾಲದ ಕೋಲ್ಮಿಂಚುಗಳು’ ವಿಷಯದ ಕುರಿತ ಗೋಷ್ಠಿಯ ಆಶಯ ನುಡಿಯನ್ನು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು ಮಾಡಲಿದ್ದಾರೆ. ಗಿರೀಶ್‌ ಕಾರ್ನಾಡ್‌, ಪ್ರೊ.ನರೇಂದ್ರ ನಾಯಕ್‌, ಉಮರ್‌ ಖಾಲಿದ್‌ ಮುಖ್ಯ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಸ್ವಾಮಿ ಅಗ್ನಿವೇಶ್‌ ವಹಿಸಲಿದ್ದಾರೆ. ಅತಿಥಿಗಳಾಗಿ ಡಾ.ಕೆ.ಎಸ್‌.ಭಗವಾನ್‌, ಯೋಗೇಶ್‌ ಮಾಸ್ಟರ್‌, ಕಡಿದಾಳ್‌ ಶಾಮಣ್ಣ, ಶ್ರೀಪಾದ ಭಟ್‌ ಮತಿತ್ತರರು ಭಾಗವಹಿಸಲಿದ್ದಾರೆ.

click me!