
ಬೆಂಗಳೂರು (ಫೆ.22): ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಜ್ಯದಲ್ಲಿ ಒಂದು ಸಾವಿರ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ಭಾರತೀಯ ಉನ್ನತ ಶಿಕ್ಷಣ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಯಾವ ಮಾಧ್ಯಮದ ಶಿಕ್ಷಣ ಕೊಡಿಸಬೇಕೆಂಬ ಆಯ್ಕೆಯನ್ನು ಪೋಷಕರೇ ಮಾಡಬೇಕು. ಉಳ್ಳವರಿಗೊಂದು ಇಲ್ಲದವರಿಗೊಂದು ಆಗೋದು ಬೇಡ. ಇದು ಕನ್ನಡ ಭಾಷೆ ತುಳಿಯುವ ಪ್ರಯತ್ನವಲ್ಲ. ಬದಲಾಗಿ ಖಾಸಗಿ ಶಾಲೆ ಮಕ್ಕಳಂತೆ ಸರ್ಕಾರಿ ಶಾಲೆ ಮಕ್ಕಳೂ ಬೆಳೆಯಬೇಕೆಂಬುದು ಸರ್ಕಾರದ ಉದ್ದೇಶ ಎಂದರು.
ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಅದರಂತೆ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಪ್ರಾರಂಭಿಸಿ, ಯಾವ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಬೇಕೆಂಬ ಆಯ್ಕೆಯನ್ನು ಪೋಷಕರಿಗೆ ಬಿಡುವುದಾಗಿ ಹೇಳಿದರು.
ಇಂದಿನ ಶಿಕ್ಷಣ ಬಡ ಕುಟುಂಬದ ಮಕ್ಕಳಿಗೆ ಆರ್ಥಿಕ ದುಸ್ಸಾಹಸವಾಗಿದೆ. ಇದರ ನಡುವೆ ಸರ್ಕಾರದಿಂದ ಉನ್ನತ ಶಿಕ್ಷಣ ನೀಡಬೇಕೆಂಬ ಹಂಬಲವಿದೆ. ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಗತ್ಯ. ವಿಶ್ವವಿದ್ಯಾಲಯಗಳಲ್ಲಿ ಯಾವ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂಬುದು ಗೊತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಸಂಜೆ ಕಾಲೇಜು, ಆಸ್ಪತ್ರೆಗಳನ್ನು ಸ್ಥಾಪಿಸುವ ಆಲೋಚನೆಯಿದೆ ಎಂದರು.
ಶಿಕ್ಷಕರ ಜತೆಗೆ ಚರ್ಚೆ: ಖಾಸಗಿ ಶಾಲೆಗಳು ಬರುವ ಮೇ ತಿಂಗಳಿಂದಲೇ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಿವೆ. ಸರ್ಕಾರಿ ಶಾಲೆಗಳನ್ನು ಮೇ ಮೊದಲ ವಾರದಿಂದ ಪ್ರಾರಂಭಿಸುವ ಚಿಂತನೆಯಿದೆ. ಆದರೆ, ಶಿಕ್ಷಕರು ರಜೆ ಬೇಕೆಂದು ಹೇಳುತ್ತಿದ್ದಾರೆ. ಈ ಸಂಬಂಧ ಶಿಕ್ಷಕರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಹನ್ನೆರಡು ವರ್ಷಗಳ ಹಿಂದೆ ಮಹಾರಾಣಿ ಕಾಲೇಜಿಗೆ .15 ಕೋಟಿ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಿದ್ದೆ. ಮೂಲಸೌಕರ್ಯ ಒದಗಿಸುವ ಕೆಲಸ ಮಾಡಿದ್ದೆ. ವಿದ್ಯಾರ್ಥಿಗಳು ರಸ್ತೆ ದಾಟಿ ಕಾಲೇಜಿಗೆ ಬರಲು ಕಷ್ಟಪಡುತ್ತಿದ್ದರು. ಹಾಗಾಗಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜಿನ ಮುಂಭಾಗ ಎಸ್ಕ್‌ಲೇಟರ್ ಹಾಕಿಸುವ ಚಿಂತನೆಯಿದೆ. ವಿದ್ಯಾರ್ಥಿಗಳು ಸಮಸ್ಯೆಗಳನ್ನು ವಿದ್ಯಾರ್ಥಿ ಮುಖಂಡರ ಮೂಲಕ ತಮ್ಮ ಗಮನಕ್ಕೆ ತಂದರೆ ಪರಿಹರಿಸುವುದಾಗಿ ಹೇಳಿದರು.
ಬಿಸಿಯೂಟ ಕಲ್ಪಿಸಿ: ಕಾಲೇಜಿನ ವಿದ್ಯಾರ್ಥಿನಿಯರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬೇಡಿಕೆÜಗಳ ಸುರಿಮಳೆಗೈದರು. ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ಕೊಡಿ. ಎಸ್‌ಸ್ಸಿ-ಎಸ್ಟಿವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ ಬಸ್ ಪಾಸ್ ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಿಸಿ. ಕಾಲೇಜಿನಲ್ಲಿ ಮಧ್ಯಾಹ್ನದ ಬಿಸಿ ಊಟ ವ್ಯವಸ್ಥೆ ಮಾಡಿ. ಇಲ್ಲವಾದರೆ, ಇಂದಿರಾ ಕ್ಯಾಂಟಿನ್ ಅಥವಾ ಅಪ್ಪಾಜಿ ಕ್ಯಾಂಟಿನ್ ಪ್ರಾರಂಭಿಸಿ. ಅಲ್ಲದೆ, ಕಾಲೇಜಿಗೆ ದೊಡ್ಡ ಸಭಾಂಗಣ, ಕ್ರೀಡಾಂಗಣ ಮಾಡಿಕೊಡಿ ಎಂದು ಬೇಡಿಕೆ ಇರಿಸಿದರು. ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.