ಏರೋ ಇಂಡಿಯಾ: 2 ನೇ ದಿನವೂ ಯುದ್ಧ ವಿಮಾನಗಳ ರೋಚಕ ಪ್ರದರ್ಶನ

By Web DeskFirst Published Feb 22, 2019, 8:23 AM IST
Highlights

2ನೇ ದಿನವೂ ಯುದ್ಧ ವಿಮಾನಗಳ ರೋಚಕ ಪ್ರದರ್ಶನ | ಸುಡು ಬಿಸಿಲಿನಲ್ಲಿಯೂ ಯುದ್ಧ ವಿಮಾನಗಳ ಹಾರಾಟ ವೀಕ್ಷಿಸಿದ ಜನತೆ | ಜನರ ಚಪ್ಪಾಳೆ, ಹರ್ಷೋದ್ಘಾರಗಳಿಂದ ಸಂಭ್ರಮ

ಬೆಂಗಳೂರು (ಫೆ. 22):  ಬಿರು ಬಿಸಿಲಿನ ಮಧ್ಯ ನೀಲಾಕಾಶದಲ್ಲಿ ಹತ್ತಾರು ಬಗೆಯಲ್ಲಿ ಲೋಹದ ಹಕ್ಕಿಗಳು ಮಾಡಿದ ಮನಮೋಹಕ ಕಸರತ್ತು ನೆರೆದಿದ್ದ ಸಾವಿರಾರು ಜನರ ಮನಗೆದ್ದಿತು. ಕಣ್ಣು ಎವೆಯಿಕ್ಕುವಷ್ಟುದೂರ ಹಾರಿ ಮತ್ತೇ ಧರೆಯನ್ನು ಚುಂಬಿಸುವಂತೆ ಧಾವಿಸಿ ಕೆಳಗೆ ಬರುತ್ತಿದ್ದಂತೆ ತಲೆ ಎತ್ತಿ ನೋಡುತ್ತಿದ್ದ ಪ್ರೇಕ್ಷಕರಲ್ಲಿ ಹೋ ಎಂಬ ಕೂಗು ಪೈಲೆಟ್‌ಗಳಿಗೂ ಕೇಳುವಂತಿತ್ತು. ನಡು ನೆತ್ತಿ ಸುಡುತ್ತಿದ್ದರೂ ಜನರಲ್ಲಿ ಉತ್ಸಾಹ ಮಾತ್ರ ಕುಗ್ಗಿರಲಿಲ್ಲ.

ಯಲಹಂಕದ ವಾಯು ನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಎರಡನೇ ದಿನವಾದ ಗುರುವಾರ ದೊಡ್ಡ ಪ್ರಮಾಣದಲ್ಲಿ ಜನರು ಆಗಮಿಸಿದ್ದರು. ಪ್ರದರ್ಶನದ ಸ್ಥಳದಲ್ಲಿ ಇದ್ದ ಜನರಗಿಂತ ಹೊರಗೆ ಆಕಾಶ ನೋಡುತ್ತಿದ್ದ ಜನರ ಸಂಖ್ಯೆ ದುಪ್ಪಟ್ಟಾಗಿತ್ತು.

ಯುದ್ಧ ವಿಮಾನ, ನಾಗರಿಕ ವಿಮಾನ ಹಾಗೂ ಹೆಲಿಕಾಪ್ಟರ್‌ಗಳು ನಭಕ್ಕೆ ಚಿಮ್ಮಿ ಬಾನಂಗಳದಲ್ಲಿ ನೀಡಿದ ಪ್ರದರ್ಶನವನ್ನು ಜನರ ಚಪ್ಪಾಳೆ, ಹರ್ಷೋದ್ಘಾರಗಳಿಂದ ಸಂಭ್ರಮಿಸಿದರು. ಸಾರಂಗ್‌ ಹೆಲಿಕಾಪ್ಟರ್‌ ತಂಡ ಬಾನಿನಲ್ಲಿ ಮೈನವಿರೇಳಿಸುವ ಸಾಹಸ ಪ್ರದರ್ಶಿಸಿತು. ವಿವಿಧ ಆಕೃತಿಯಲ್ಲಿ ಹೊಗೆ ಉಗುಳುವ ಮೂಲಕ ಬಾನಂಗಳದಲ್ಲಿ ಚಿತ್ತಾರ ಬಿಡಿಸಿ ಆಕರ್ಷಿಸಿದವು. ಎದೆ ನಡುಗಿಸುವಂತೆ ಶಬ್ದದೊಂದಿಗೆ ನಭಕ್ಕೆ ಹಾಕಿ ಪಲ್ಟಿಹೊಡೆದು ಸಾಹಸ ಕೌಶಲ್ಯ ಪ್ರದರ್ಶಿಸಿದ ರಫೇಲ್‌ ಯುದ್ಧ ವಿಮಾನದ ಆರ್ಭಟಕ್ಕೆ ಪ್ರೇಕ್ಷಕರು, ಯೋಧರು ರೋಮಾಂಚನಗೊಂಡರು.

ನೆಲದಿಂದ ಒಮ್ಮೆಲೆ ಬಾನೆತ್ತರಕ್ಕೆ ಹಾರಿದ ತೇಜಸ್‌, ಮೊದಲ ಯುದ್ಧ ಗೆಲ್ಲಿಸುವಲ್ಲಿ ಶ್ರಮಿಸಿದ ಡಕೋಟ, ಪ್ರಯಾಣಿಕರ ಬೃಹತ್‌ ಏರ್‌ಬಸ್‌, ಎಫ್‌-16, ಸುಖೋಯ್‌-30 ಹೀಗೆ ಒಂದರ ನಂತರ ಮತ್ತೊಂದು ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಸುಮಾರು 2 ಗಂಟೆಗಳ ಕಾಲ ನೋಡುಗರ ಮೈ ನವಿರೇಳುವಂತೆ ಮಾಡಿದ್ದವು.

ಎಇಡಬ್ಲ್ಯೂ ಆ್ಯಂಡ್‌ ಸಿ ಏರ್‌ ಕ್ರಾಫ್ಟ್‌(ನೇತ್ರ), ಎಚ್‌ಟಿಟಿ-40, ಬಿ-52, ಪಿ8ಐ ವಿಮಾನಗಳು ಕೆಳಗೆ ಬಂದು ಬಾನಂಗಳಕ್ಕೆ ಚಿಮ್ಮುವಾಗ ಪ್ರೇಕ್ಷಕರಲ್ಲಿ ಉದ್ಘೋಷದ ಜತೆಗೆ ಕರತಾಡನ ಮುಗಿಲು ಮುಟ್ಟಿತ್ತು. ಸ್ವದೇಶಿ ನಿರ್ಮಿತ ಎಲ್‌ಸಿಎ ತೇಜಸ್‌ನ ಶಕ್ತಿ ಪ್ರದರ್ಶನ ವೈಮಾನಿಕ ಪ್ರದರ್ಶನಕ್ಕೆ ಮತ್ತೊಂದು ಹೈಲೈಟ್‌ ಆಗಿ ಪರಿಣಮಿಸಿತು.

ರುದ್ರಾ, ಧೃವ್‌ ಹೆಲಿಕಾಪ್ಟರ್‌ಗಳು ಬಾನಲ್ಲಿ ಹಾರಾಡುತ್ತಲೇ ವಿವಿಧ ಭಂಗಿಗಳನ್ನು ಪ್ರದರ್ಶಿಸಿದವು. ಸೈನಿಕರು ಹೆಲಿಕಾಪ್ಟರ್‌ನಿಂದ ಹಗ್ಗದ ಸಹಾಯದಿಂದ ಇಳಿದರು. ಮತ್ತೊಂದು ಹೆಲಿಕಾಪ್ಟರ್‌ ಸರಕುಗಳನ್ನು ಹಗ್ಗದ ಸಹಾಯದಿಂದ ಸಾಗಿಸುವ ಕಸರತ್ತು ಮಾಡಿ ಜನರನ್ನು ಬೆರಗುಗೊಳಿಸಿದವು. ತೇಜಸ್‌, ರಫೆಲ್‌, ಸುಖೋಯ್‌ ಪ್ರದರ್ಶನ ನೀಡಿದವು. ಅದರ ಜತೆಗೆ ಹಾಕ್‌-ಐ, ಫಾಲ್ಕನ್‌, ಹನ್ಸ, ಡೋರ್ನಿಯರ್‌, ಎಚ್‌ಟಿಟಿ-40 ವಿಮಾನಗಳು, ರುದ್ರಾ, ಧನುಷ್‌, ಭೀಮ್‌, ವಿಕ್ಟರ್‌-6ನಂತಹ ಲಘು ಹೆಲಿಕಾಪ್ಟರ್‌ಗಳ ಹಾರಾಟ ಆಕರ್ಷಕವಾಗಿದ್ದವು.

 

click me!