
ಬೆಂಗಳೂರು(ಜೂನ್ 25): ಇತ್ತೀಚೆಗೆ ಕನ್ನಡಿಗರ ಮೇಲೆ ಹೊರರಾಜ್ಯದವರ ದಬ್ಬಾಳಿಕೆ ಹೆಚ್ಚಾಗುತ್ತಿದ್ದು, ಕನ್ನಡದಲ್ಲಿ ಮಾತನಾಡಿದ್ದಕ್ಕೆ ಖಾಸಗಿ ಕಂಪನಿಯ ಮಾಲೀಕನೊಬ್ಬ ತನ್ನ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆಯಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಖಾಸಗಿ ಕಂಪನಿ ಮಾಲೀಕನನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಉತ್ತರ ಭಾರತ ಮೂಲದ ಸಾತ್ವಿಕ್ ನಿಂದಿಸಿದ ವ್ಯಕ್ತಿಯಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಸ್ವಿಗ್ಗಿ ಆ್ಯಪ್ ಎಂಬ ಫುಡ್ ಸಪ್ಲೈಯರ್ ಸಂಸ್ಥೆಯ ನೌಕರ ಅನಿಲ್ ಎಂಬಾತ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸಾತ್ವಿಕ್ ಅವರು ಸಂಜಯ್'ನಗರದ ಅಂಚೆ ಕಚೇರಿ ಬಳಿ ಸಿಗ್ಮಾ ಎಂಬ ಹೆಸರಿನಲ್ಲಿ ಖಾಸಗಿ ಕಂಪನಿ ನಡೆಸುತ್ತಿದ್ದಾರೆ. ಇದು ಉದ್ಯೋಗ ಕೊಡಿಸುವ ಕಂಪನಿಯಾಗಿದೆ. ಜೂ.18ರಂದು ಸಾತ್ವಿಕ್, ಸ್ವಿಗ್ಗಿ ಆ್ಯಪ್ ಮೂಲಕ ಕೆಲವೊಂದು ಆಹಾರ ಪದಾರ್ಥಗಳನ್ನು ಬುಕ್ ಮಾಡಿದ್ದರು. ಫುಡ್ ಸಪೈಯರ್ ಆಗಿ ಕೆಲಸ ಮಾಡುತ್ತಿರುವ ಅನಿಲ್, ನಿಗದಿತ ಸಮಯಕ್ಕೆ ಆಹಾರ ಪದಾರ್ಥಗಳನ್ನು ತಲುಪಿಸದೆ ಒಂದು ತಾಸು ತಡ ಮಾಡಿದ್ದಾರೆ. ಇದರಿಂದ ಕೋಪಗೊಂಡ ಸಾತ್ವಿಕ್, ಅನಿಲ್'ಗೆ ಹಿಂದಿ ಮತ್ತು ಇಂಗ್ಲಿಷ್'ನಲ್ಲಿ ನಿಂದಿಸಿದ್ದಾರೆ. ಅಲ್ಲದೆ ಕನ್ನಡ ಭಾಷೆ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ. ಇದಕ್ಕೆ ಅನಿಲ್ ಆಕ್ಷೇಪ ವ್ಯಕ್ತಪಡಿಸಿ ತಡವಾಗಿದ್ದಕ್ಕೆ ಕ್ಷಮೆ ಕೋರಿದ್ದಾರೆ. ಬಳಿಕವೂ ಕನ್ನಡ ಭಾಷೆಯ ಬಗ್ಗೆ ಅತ್ಯಂತ ಕೆಟ್ಟ ಪದ ಪ್ರಯೋಗ ಮಾಡಿದ್ದಾರೆ. ಈ ಸಂಬಂಧ ಅನಿಲ್ ಜೂ.21ರಂದು ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅನಿಲ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಾತ್ವಿಕ್ ವಿರುದ್ಧ ಐಪಿಸಿ 153ಎ (ಭಾಷೆಯ ಹೆಸರಲ್ಲಿ ದ್ವೇಷ ಭಾವನೆ ಬಿತ್ತುವುದು) ಮತ್ತು ಐಪಿಸಿ 504ರ (ಶಾಂತಿ ಕದಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಂತರ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನು ಮಂಜೂರು ದೊರೆತಿದೆ.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.