
ಬೆಂಗಳೂರು (ಜ.09): ಭಾನುವಾರ ಬೆಳಗಿನ ಜಾವ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ(ಸೆಂಟ್ರಿಂಗ್) ಕುಸಿದು ಒಬ್ಬ ಕಾರ್ಮಿಕ ಮೃತಪಟ್ಟಿರುವ ವಿಚಾರವನ್ನು ಕಟ್ಟಡ ನಿರ್ಮಾಣ ಸಂಸ್ಥೆ ಹಾಗೂ ಗುತ್ತಿಗೆದಾರರು ಮುಚ್ಚಿಹಾಕಿರುವ ಕುರಿತು ಅನುಮಾನಗಳು ಮೂಡುತ್ತಿವೆ ಎಂದು ನಗರ ಯೋಜನಾ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣ ಸ್ವಾಮಿ ಸಂಶಯ ವ್ಯಕ್ತಪಡಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಘಟನಾ ಸ್ಥಳ ಹಾಗೂ ವೈದೇಹಿ ಆಸ್ಪತ್ರೆಗೆ ಕಂದಾಯ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರ ನಡೆದ ಸೆಂಟ್ರಿಂಗ್ ಕುಸಿದ ವೇಳೆ ಉತ್ತರ ಭಾರತದ ಮೂಲದ ಲಂಬೂ ಎಂಬ ವ್ಯಕ್ತಿ ಸಾವನ್ನಪ್ಪಿರುವುದಾಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರದೀಪ್ ಎಂಬ ಕಾರ್ಮಿಕರ ಮಾಹಿತಿ ನೀಡಿದ್ದಾನೆ. ಜತೆಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಬದ್ರಿ ಎಂಬ ಕಾರ್ಮಿಕ ಸಂಪೂರ್ಣವಾಗಿ ಕಣ್ಣು ಕಳೆದುಕೊಂಡಿದ್ದಾನೆ ಎಂದು ತಿಳಿಸಿದರು.
ಕಾರ್ಮಿಕರೊಂದಿಗೆ ಘಟನೆ ಕುರಿತು ವಿಚಾರಣೆ ನಡೆಸಿದ ವೇಳೆ ವಿಷಯ ಬೆಳಕಿಗೆ ಬಂದಿದ್ದು, ದಿವ್ಯಶ್ರೀ ಕಟ್ಟಡ ನಿರ್ಮಾಣ ಸಂಸ್ಥೆಯವರು ಹಾಗೂ ಪಾಲಿಕೆಯ ಅಧಿಕಾರಿಗಳು ವಿಚಾರವನ್ನು ಮುಚ್ಚಿಡುವ ಕೆಲಸ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ದೂರಿದರು.
ಪಾಲಿಕೆಯಿಂದ ಕಟ್ಟಡದ ನಕ್ಷೆ ಮಂಜೂರಾತಿ ಪಡೆದೆ ಕಟ್ಟಡ ಕಾಮಗಾರಿ ನಡೆಸಲಾಗುತ್ತಿದ್ದು, ಕಾಮಗಾರಿ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಬಿಲ್ದರ್‌ಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಗುಣಮಟ್ಟದ ಸಾಮಗ್ರಿಗಳನ್ನು ಬಳಸದಿರುವುದು ಅವಘಡಕ್ಕೆ ಕಾರಣವಾಗಿದ್ದು, ಅಮಾಯಕ ಕಾರ್ಮಿಕರ ಪ್ರಾಣದೊಂದಿಗೆ ಚೆಲ್ಲಾಟವಾಡಲಾಗಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು ಎಂದು ತಿಳಿಸಿದರು.
ಈ ವೇಳೆ ಪಾಲಿಕೆ ಸದಸ್ಯರಾದ ಪುಷ್ಪಾ ಮಂಜುನಾಥ್, ಶ್ರೀಕಾಂತ್, ಪ್ರಮೀಳಾ ಸೇರಿದಂತೆ ಬಿಬಿಎಂಪಿ ಅಧಿಕಾರಿಗಳು ಹಾಜರಿದ್ದರು.
ಆರೋಪಕ್ಕೆ ಪುಷ್ಟಿ: ಭಾನುವಾರ ಬೆಳಗ್ಗೆ ಕಟ್ಟಡದ ಸೆಂಟ್ರಿಂಗ್ ಕುಸಿದು ಎಂಟು ಮಂದಿ ಕಾರ್ಮಿಕರು ಗಾಯಗೊಂಡಿದ್ದರು. ಘಟನೆಯನ್ನು ವರದಿ ಮಾಡಲು ಮುಂದಾದ ಪತ್ರಕರ್ತರಿಗೆ ದಿವ್ಯಶ್ರೀ ಕಟ್ಟಡ ಸಂಸ್ಥೆಯ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದರು. ಈ ವೇಳೆ ಪತ್ರಕರ್ತರು ಹಾಗೂ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಮಾಧ್ಯಮದವರನ್ನು ಕೆಲ ನಿಮಿಷಗಳು ಒಳಗೆ ಕರೆದುಕೊಂಡು ಹೋಗಿದ್ದರು. ಆನಂತರದಲ್ಲಿ ಕಟ್ಟಡ ನಿರ್ಮಾಣದ ಸ್ಥಳಕ್ಕೆ ಹೋಗಲು ಅವಕಾಶ ನೀಡಿರಲಿಲ್ಲ. ಇದರೊಂದಿಗೆ ಕಾರ್ಮಿಕರನ್ನು ಭೇಟಿ ಮಾಡಲು ಆಸ್ಪತ್ರೆಯ ಬಳಿ ಹೋದರೂ ಗಾಯಳುಗಳನ್ನು ಭೇಟಿ ಮಾಡಲು ಅವಕಾಶ ನೀಡದಿರುವುದು ಮಂಜುಳಾ ನಾರಾಯಣಸ್ವಾಮಿ ಅವರ ಸಂಶಯಕ್ಕೆ ಪುಷ್ಠಿ ನೀಡದಂತಾಗಿದೆ.
ವೈಟ್‌ಫೀಲ್ಡ್ ಬಳಿ ಸೆಂಟ್ರಿಂಗ್ ಕುಸಿತದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದ್ದು, ಪ್ರಕರಣದಿಂದಾಗಿ ಹಲವರಿಗೆ ಗಾಯಗಳಾಗಿವೆ. ಆದರೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
- ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.