ಓಲಾ ಲೈಸನ್ಸ್‌ ರದ್ದತಿ ವಾಪಸ್‌ ?

By Web DeskFirst Published Mar 24, 2019, 8:44 AM IST
Highlights

ರಾಜ್ಯದಲ್ಲಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ಓಲಾ ತನ್ನ ಲೈಸೆನ್ಸ್ ಮತ್ತೆ ವಾಪಸ್ ಪಡೆವ ಸಾಧ್ಯತೆ ಇದೆ. 

ಬೆಂಗಳೂರು :  ನಿಯಮ ಉಲ್ಲಂಘಿಸಿ ರಾಜಧಾನಿಯಲ್ಲಿ ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಿದ್ದರಿಂದ ಸಾರಿಗೆ ಇಲಾಖೆಯಿಂದ ಮೋಟಾರ್‌ ಕ್ಯಾಬ್‌ ಪರವಾನಗಿ ಅಮಾನುತು ಶಿಕ್ಷೆಗೆ ಗುರಿಯಾಗಿರುವ ಓಲಾ ಸಂಸ್ಥೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ನಡುವೆ ಸೋಮವಾರ (ಮಾ.25) ಸಭೆ ಜರುಗಲಿದ್ದು, ಬಹುತೇಕ ಸಮಸ್ಯೆ ಇತ್ಯರ್ಥವಾಗುವ ಸಾಧ್ಯತೆ ಇದೆ.

ಈಗಾಗಲೇ ಸರ್ಕಾರದ ಮಟ್ಟದಿಂದಲೂ ಅಮಾನತು ಆದೇಶ ಹಿಂಪಡೆಯುವಂತೆ ಸಾರಿಗೆ ಇಲಾಖೆ ಮೇಲೆ ಒತ್ತಡ ಹೆಚ್ಚಾಗಿದೆ. ಚಾಲಕರು ಮತ್ತು ಸಾರ್ವಜನಿಕ ವಲಯದಿಂದಲೂ ಅಮಾನತು ಆದೇಶಕ್ಕೆ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಈ ಸಭೆಯಲ್ಲಿ ಓಲಾ ಸಂಸ್ಥೆಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿ, ಪರವಾನಗಿ ಅಮಾನತು ಆದೇಶ ಹಿಂಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ನಿಯಮಬಾಹಿರವಾಗಿ ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸಿದ್ದ ಓಲಾ ಸಂಸ್ಥೆಯ ಮೋಟಾರ್‌ ಕ್ಯಾಬ್‌ ಅಗ್ರಿಗೇಟರ್‌ ಪರವಾನಗಿಯನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ. ಸಂಸ್ಥೆಯು ಈ ಪರವಾನಗಿಯನ್ನು ಸೋಮವಾರ ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ (ಆರ್‌ಟಿಎ) ಒಪ್ಪಿಸಲಿದೆ. ಈ ವೇಳೆ ಆಕ್ಷೇಪಣೆ ಸಲ್ಲಿಸಲು ಸಂಸ್ಥೆಗೆ ಅವಕಾಶವಿದೆ. ಈ ಆಕ್ಷೇಪಣೆ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದು ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಸಾರ್ವಜನಿಕರ ವಿರೋಧ

ಸಾರಿಗೆ ಇಲಾಖೆ ಓಲಾ ಸಂಸ್ಥೆಯ ಅಗ್ರಿಗೇಟರ್‌ ಪರವಾನಗಿ ಅಮಾತುಗೊಳಿಸಿರುವುದಕ್ಕೆ ಕ್ಯಾಬ್‌ ಚಾಲಕರು ಮತ್ತು ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಸಾವಿರಾರು ಮಂದಿ ಚಾಲಕರು ಹಾಗೂ ಅವರ ಕುಟುಂಬ ಓಲಾ ಕ್ಯಾಬ್‌ ನೆಚ್ಚಿಕೊಂಡು ಬದುಕು ನಡೆಸುತ್ತಿವೆ. ಲಕ್ಷಾಂತರ ಪ್ರಯಾಣಿಕರು ಸಂಚಾರಕ್ಕೆ ಈ ಕ್ಯಾಬ್‌ಗಳನ್ನೇ ಅವಲಂಬಿಸಿದ್ದಾರೆ. ಹೀಗಿರುವಾಗ ಸಾರಿಗೆ ಇಲಾಖೆಯು ಸಂಸ್ಥೆಗೆ ನೀಡಿದ್ದ ಪರವಾನಗಿಯನ್ನು ಏಕಾಏಕಿ ಅಮಾನತುಗೊಳಿಸಿರುವುದು ಎಷ್ಟುಸರಿ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಸಂಸ್ಥೆ ನಿಯಮ ಉಲ್ಲಂಘಿಸಿದ್ದರೆ ದಂಡ ವಿಧಿಸಿ ಎಚ್ಚರಿಕೆ ನೀಡಬಹುದು. ಅದನ್ನು ಬಿಟ್ಟು ಪರವಾನಗಿಯನ್ನೇ ಅಮಾನತು ಮಾಡುವುದು ಸರಿಯಲ್ಲ. ಕ್ಯಾಬ್‌ ಕಾರ್ಯಾಚರಣೆ ಸ್ಥಗಿತಗೊಳ್ಳುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.

ಪರವಾನಗಿ ಅಮಾನತಿಗೆ ಸಚಿವ ಪ್ರಿಯಾಂಕ್‌ ಆಕ್ಷೇಪ

ಸಾರಿಗೆ ಇಲಾಖೆ ಏಕಾಏಕಿ ಓಲಾ ಸಂಸ್ಥೆಯ ಅಗ್ರಿಗೇಟರ್‌ ಪರವಾನಗಿ ಅಮಾನುಗೊಳಿಸಿರುವುದು ಸರಿಯಲ್ಲ. ಸಂಸ್ಥೆ ತಪ್ಪು ಮಾಡಿದ್ದರೆ ದಂಡ ವಿಧಿಸಿ ಎಚ್ಚರಿಕೆ ನೀಡಲು ಅವಕಾಶವಿದೆ. ಅಮಾನತ್ತಿಗೂ ಮುನ್ನ ಸಾವಿರಾರು ಚಾಲಕರು ಮತ್ತು ಲಕ್ಷಾಂತರ ಪ್ರಯಾಣಿಕರ ಹಿತವನ್ನು ಗಮನದಲ್ಲಿರಿಸಿಕೊಳ್ಳಬೇಕಿತ್ತು. ಸಂಸ್ಥೆಯ ತಪ್ಪಿಗೆ ಪರವಾನಗಿ ಅಮಾನತು ಪರಿಹಾರವಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.

ಪರವಾನಗಿ ಅಮಾನತು ಕ್ರಮದಿಂದ ರಾಜ್ಯದ ಬಂಡವಾಳ ಹೂಡಿಕೆ, ನವೋದ್ಯಮ, ಪ್ರವಾಸೋದ್ಯಮದ ಮೇಲೆ ಪರಿಣಾಮ ಉಂಟಾಗುತ್ತದೆ. ಸಾರಿಗೆ ಇಲಾಖೆ ಅಧಿಕಾರಿಗಳು ಈ ಅಮಾನತು ಆದೇಶ ಹೊರಡಿಸುವ ಮುನ್ನ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸರ್ಕಾರದ ಸಲಹೆ ಪಡೆಯಬೇಕಿತ್ತು. ಆದರೆ, ಯಾರ ಸಲಹೆಯನ್ನೂ ಪಡೆದಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸೋಮವಾರ (ಮಾ.25) ಈ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.

click me!