
ಬೆಂಗಳೂರು : ಓಲಾಕ್ಯಾಬ್ ಚಾಲಕನೊಬ್ಬ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯಲಹಂಕ ನಿವಾಸಿ 22 ವರ್ಷದ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಓಲಾ ಚಾಲಕ ದೇವಸಂ ಮೊಲ್ಯನಿಗಾಗಿ ಬಲೆ ಬೀಸಿದ್ದಾರೆ.
ಜೆ.ಪಿ.ನಗರದಲ್ಲಿರುವ ಖಾಸಗಿ ಕಂಪನಿಯೊಂದರ ಕೆಲಸ ಮಾಡುವ ಯುವತಿ ಆ. 23ರಂದು ಬೆಳಗ್ಗೆ 6.30ರ ಸುಮಾರಿಗೆ ಯಲಹಂಕ ನ್ಯೂಟೌನ್‌ನಿಂದ ಜೆ.ಪಿ ನಗರದಲ್ಲಿರುವ ಕಚೇರಿಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಯಲಹಂಕ ನ್ಯೂಟೌನ್ ಗೆ ಬಂದ ಆರೋಪಿ ದೇವಸಂ ಮೊಲ್ಯ, ಯುವತಿಯನ್ನು ತನ್ನ ಓಲಾಕ್ಯಾಬ್‌ನಲ್ಲಿ ಹತ್ತಿಸಿಕೊಂಡು ಹೊರಟಿದ್ದ.
ಮಾರ್ಗ ಮಧ್ಯೆ ವಿಧಾನಸೌಧ ಸಿಗ್ನಲ್‌ನಿಂದ ಕ್ವೀನ್ಸ್ ವೃತ್ತದ ಕಡೆ ಹೋಗುತ್ತಿದ್ದ ವೇಳೆ ಚಾಲಕ ತನ್ನ ಮುಂಬದಿಯಲ್ಲಿದ್ದ ಕನ್ನಡಿಯಿಂದ ಹಿಂದೆ ಕುಳಿತಿದ್ದ ಯುವತಿಯನ್ನು ಕೆಟ್ಟ ದೃಷ್ಟಿಯಲ್ಲಿ ಗಮನಿಸುತ್ತಿದ್ದ. ನಂತರ ತನ್ನ ಎಡಗೈನಲ್ಲಿ ಮೊಬೈಲ್ ಹಿಡಿದುಕೊಂಡು ಮಹಿಳೆಗೆ ಕಾಣುವಂತೆ ಅಶ್ಲೀಲ ವಿಡಿಯೋ ನೋಡುತ್ತಿದ್ದ. ಅಲ್ಲದೆ, ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಆತಂಕಗೊಂಡ ಮಹಿಳೆ ಕ್ಯಾಬ್ ನಿಲ್ಲಿಸುವಂತೆ ಕೇಳಿದ್ದರು.
ನಿಮ್ಮ ಲೊಕೇಶನ್ ಇನ್ನೂ ದೂರದಲ್ಲಿದೆ ಎಂದ ಆರೋಪಿ ಕಾರು ನಿಲ್ಲಿಸದೆ ಜೆ.ಪಿ ನಗರದಲ್ಲಿ ಸಂತ್ರಸ್ತೆ ಸೂಚಿಸಿದ ವಿಳಾಸಕ್ಕೆಕರೆದೊಯ್ದಿದ್ದ. ಇದರಿಂದ ನೊಂದ ಮಹಿಳೆ ಓಲಾ ಸಂಸ್ಥೆಗೆ ಕರೆ ಮಾಡಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಬಗ್ಗೆ ಮಾಹಿತಿ ಸಿಕ್ಕಿದ್ದು, ಕೂಡಲೇ ಆತನನ್ನು ಬಂಧಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.