ಕಾರ್ ಶೇರಿಂಗ್: ಜನರಿಗೂ, ಪರಿಸರಕ್ಕೂ ಬೇಕು. ಸರ್ಕಾರಕ್ಕೇಕೆ ಬೇಡ?

Published : Feb 05, 2017, 03:49 AM ISTUpdated : Apr 11, 2018, 12:42 PM IST
ಕಾರ್ ಶೇರಿಂಗ್: ಜನರಿಗೂ, ಪರಿಸರಕ್ಕೂ ಬೇಕು. ಸರ್ಕಾರಕ್ಕೇಕೆ ಬೇಡ?

ಸಾರಾಂಶ

ಸಿಲಿಕಾನ್‌ ಸಿಟಿಯ ಸಂಚಾರ ದಟ್ಟಣೆ ಮತ್ತು ಸಾರ್ವ­ಜನಿಕ ಸಾರಿಗೆ ವಾಹನಗಳ ಹೈರಾಣಗೊಳಿಸುವ ಪಯ­ಣದ ನಡುವೆ, ನಿತ್ಯ 2-3 ಗಂಟೆ ಪ್ರಯಾಣ ಮಾಡುವ ಉದ್ಯೋಗಿಗಳಿಗೆ ದೊಡ್ಡ ಮಟ್ಟದಲ್ಲಿ ನಿರಾಳ ತಂದಿದ್ದು ಈ ಕಾರ್‌ ಪೂಲಿಂಗ್‌ ವ್ಯವಸ್ಥೆ. ಒಂದೇ ಸಮಯಕ್ಕೆ, ಒಂದೇ ಮಾರ್ಗದಲ್ಲಿ ಸಂಚರಿಸುವ ಎರಡು ಮೂರು ಮಂದಿ ಒಂದೇ ಕಾರನ್ನು ಶೇರ್‌ (ಹಂಚಿಕೊಂಡು) ಮಾಡಿ ಪ್ರಯಾಣಿಸುವ ಮೂಲಕ ಹಣ ಮತ್ತು ಸಮಯ ಉಳಿತಾಯದ ವ್ಯವಸ್ಥೆ ಈ ಕಾರ್‌ ಪೂಲಿಂಗ್‌. ಕಾರ್‌ ಪೂಲಿಂಗ್‌ ಸೌಲಭ್ಯವನ್ನು ಆನ್‌ಲೈನ್‌ ಆ್ಯಪ್‌ ಮೂಲಕ ಬಳಸುವವರ ಸಂಖ್ಯೆ ಬೆಂಗಳೂರಿನಲ್ಲಿ ಏರುತ್ತಿದೆ. ಕಾರ್‌ ಪೂಲಿಂಗ್‌ನಿಂದಾಗಿ ಬಳಕೆದಾರರಿಗೆ ಹಣ-ಸಮಯ ಉಳಿತಾಯದಂತಹ ವೈಯಕ್ತಿಕ ಲಾಭ­ದೊಂದಿಗೆ, ಸಂಚಾರ ದಟ್ಟಣೆ, ಇಂಧನ ಪೋಲು, ಹೊಗೆಯಂತಹ ಸಾರ್ವ­ಜನಿಕ ಹಿತಾಸಕ್ತಿಗಳಲ್ಲೂ ಅನುಕೂಲವಿದೆ.

- ಶಶಿ ಸಂಪಳ್ಳಿ

ಬದಲಾದ ಉದ್ಯೋಗ- ಉದ್ಯಮ­ದೊಂ­ದಿಗೆ ಹೆಜ್ಜೆ ಹಾಕುವ ಮನುಷ್ಯನ ಬದುಕೂ ಬದಲಾಗುತ್ತದೆ. ಅದರೊಂದಿಗೆ ಜಗತ್ತೂ ಹೊಸ ಜ್ಞಾನ, ತಂತ್ರಜ್ಞಾನಗಳೊಂದಿಗೆ ಚಹರೆ ಬದಲಾ­ಯಿ­ಸುತ್ತಲೇ ಹೋಗುತ್ತದೆ. ಹೀಗೆ ಬದಲಾಗುವ ಬದುಕಿ­ನೊಂದಿಗೆ ಸಮಾಜ ಮತ್ತು ವ್ಯವಸ್ಥೆಗೆ ಚೌಕಟ್ಟು ಹಾಕುವ ಕಾಯ್ದೆ- ಕಾನೂನುಗಳೂ ಬದಲಾಗಬೇಕು. ಆಗ ಮಾತ್ರ ಪಯಣ ಸುಸೂತ್ರ. ಹಾಗಾಗದೇ ಇದ್ದರೆ ‘ಎತ್ತು ಏರಿಗೆ, ಕೋಣ ನೀರಿಗೆ' ಎಂಬ ಎಡಬಿಡಂಗಿ ಸ್ಥಿತಿ ಸಮಾಜದ್ದಾಗುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ಈಗ ಎದ್ದಿರುವ ಕಾರ್‌ಪೂಲಿಂಗ್‌ ವರ್ಸಸ್‌ ಸಂಚಾರ ಇಲಾಖೆಯ ಸಂಘರ್ಷದ ವಿವಾದವೇ ನಿದರ್ಶನ.
ಸಿಲಿಕಾನ್‌ ಸಿಟಿಯ ಸಂಚಾರ ದಟ್ಟಣೆ ಮತ್ತು ಸಾರ್ವ­ಜನಿಕ ಸಾರಿಗೆ ವಾಹನಗಳ ಹೈರಾಣಗೊಳಿಸುವ ಪಯ­ಣದ ನಡುವೆ, ನಿತ್ಯ 2-3 ಗಂಟೆ ಪ್ರಯಾಣ ಮಾಡುವ ಉದ್ಯೋಗಿಗಳಿಗೆ ದೊಡ್ಡ ಮಟ್ಟದಲ್ಲಿ ನಿರಾಳ ತಂದಿದ್ದು ಈ ಕಾರ್‌ ಪೂಲಿಂಗ್‌ ವ್ಯವಸ್ಥೆ. ಒಂದೇ ಸಮಯಕ್ಕೆ, ಒಂದೇ ಮಾರ್ಗದಲ್ಲಿ ಸಂಚರಿಸುವ ಎರಡು ಮೂರು ಮಂದಿ ಒಂದೇ ಕಾರನ್ನು ಶೇರ್‌ (ಹಂಚಿಕೊಂಡು) ಮಾಡಿ ಪ್ರಯಾಣಿಸುವ ಮೂಲಕ ಹಣ ಮತ್ತು ಸಮಯ ಉಳಿತಾಯದ ವ್ಯವಸ್ಥೆ ಈ ಕಾರ್‌ ಪೂಲಿಂಗ್‌. ಕಾರ್‌ ಪೂಲಿಂಗ್‌ ಸೌಲಭ್ಯವನ್ನು ಆನ್‌ಲೈನ್‌ ಆ್ಯಪ್‌ ಮೂಲಕ ಬಳಸುವವರ ಸಂಖ್ಯೆ ಬೆಂಗಳೂರಿನಲ್ಲಿ ಏರುತ್ತಿದೆ. ಕಾರ್‌ ಪೂಲಿಂಗ್‌ನಿಂದಾಗಿ ಬಳಕೆದಾರರಿಗೆ ಹಣ-ಸಮಯ ಉಳಿತಾಯದಂತಹ ವೈಯಕ್ತಿಕ ಲಾಭ­ದೊಂದಿಗೆ, ಸಂಚಾರ ದಟ್ಟಣೆ, ಇಂಧನ ಪೋಲು, ಹೊಗೆಯಂತಹ ಸಾರ್ವ­ಜನಿಕ ಹಿತಾಸಕ್ತಿಗಳಲ್ಲೂ ಅನುಕೂಲವಿದೆ.
ಹಾಗೆಂದೇ, ಸಂಚಾರ ದಟ್ಟಣೆಯಲ್ಲಿ ಕುಖ್ಯಾತಿ ಗಳಿಸಿ­ರುವ ಬೆಂಗಳೂರಿನಲ್ಲಿ ಈ ಹೊಸ ವ್ಯವಸ್ಥೆ ಬಹಳ ಬೇಗನೇ ಜನಪ್ರಿಯತೆ ಗಳಿಸಿತು. 2015ರ ಸೆಪ್ಟೆಂಬರ್‌ನಲ್ಲಿ, ಭಾರತದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆರಂಭವಾದ ಉಬರ್‌ ಕಾರ್‌ ಪೂಲಿಂಗ್‌ ಸೇವೆ ಉದ್ಯಾ­ನ­ನಗರದ ಕಾರು ಪ್ರಯಾಣದಲ್ಲಿ ಶೇ.20ರಷ್ಟುಪಾಲು ಪಡೆಯುವಷ್ಟು ಜನಪ್ರಿಯಗೊಂಡಿದೆ. ಕಾರು ಪ್ರಯಾ­ಣಿಕರ ನಡುವೆ ಶೇ.30ರಷ್ಟುಕಾರ್‌ಪೂಲಿಂಗ್‌ ಬಳಕೆಯಾ­ಗುತ್ತಿರುವ ದೆಹಲಿ ಹೊರತುಪಡಿಸಿ, ಹೈದರಾಬಾದ್‌, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾಗಳಿಗೆ ಹೋಲಿಸಿದರೆ ಕಾರ್‌ ಪೂಲಿಂಗ್‌ ವ್ಯವಸ್ಥೆಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ಇದೆ ಎಂಬುದು ಸಂಸ್ಥೆಯ ಅಭಿಪ್ರಾಯ.

ಇಲಾಖೆ vs ಪೂಲಿಂಗ್

ಜನಪ್ರಿಯತೆಯ ಹಾದಿಯಲ್ಲಿ ಸಾಗುತ್ತಿರುವ ನಡುವೆಯೇ ಕಾರ್‌ಪೂಲಿಂಗ್‌ ಕಾರುಗಳಿಗೆ ಕರ್ನಾಟಕ ಸಂಚಾರ ಇಲಾಖೆ ಬ್ರೇಕ್‌ ಹಾಕಿದೆ. ಕಾರ್‌ ಪೂಲಿಂಗ್‌ ವ್ಯವಸ್ಥೆಯಿಂದ ನಗರದ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಹೊಗೆ ಕಡಿತವಾಗುತ್ತದೆ ಮತ್ತು ಇಂಧನ ಉಳಿತಾಯವೂ ಆಗುತ್ತಿದೆ ಎಂದು ಈ ಸೇವೆ ಒದಗಿಸುತ್ತಿರುವ ಸಂಸ್ಥೆಗಳೂ, ನಮ್ಮ ಸಂಚಾರ ಪೊಲೀಸರೂ ಹೇಳುತ್ತಿರುವಾಗ ಸಂಚಾರ ಇಲಾಖೆ ಯಾಕೆ ಕಾರ್‌ ಪೂಲಿಂಗ್‌ ವ್ಯವಸ್ಥೆ ಕಾನೂನುಬಾಹಿರ ಎನ್ನುತ್ತಿದೆ? ಬೆಂಗಳೂರು ಸಂಚಾರ ಆಯುಕ್ತರ ಪ್ರಕಾರ, ಇದು ಸಂಚಾರ ನಿಯಮದ ಉಲ್ಲಂಘನೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ, ಬಾಡಿಗೆ ಕಾರುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಕರನ್ನು ಕರೆದೊಯ್ಯಬಹುದು. ಆದರೆ, ಮಾರ್ಗಮಧ್ಯದಲ್ಲಿ ಹಲವು ಕಡೆ ಹಲವು ಪ್ರಯಾಣಿ­ ಕರನ್ನು ಹತ್ತಿಸುವುದಾಗಲಿ, ಇಳಿಸುವುದಾ­ಗಲಿ ಮಾಡುವಂತಿಲ್ಲ. ಇದೇ ಈಗಿನ ವಿವಾದದ ಮೂಲ.

ಟ್ರಾಫಿಕ್ ಜಾಮ್'ಗೆ ಪರಿಹಾರ

ಭಾರತದ ಭವಿಷ್ಯದ ಸಾರಿಗೆ ವ್ಯವಸ್ಥೆ ಎಂಬಷ್ಟರಮಟ್ಟಿಗೆ ಬೆಳೆದಿರುವ ಕಾರ್‌ ಪೂಲಿಂಗ್‌ ವ್ಯವಸ್ಥೆ ಬೆಂಗಳೂರಿನಲ್ಲಿ ಒಂದೂವರೆ ವರ್ಷದಿಂದ ಲಭ್ಯ­ವಿದೆ. ಇಲ್ಲಿನ ಸಂಚಾರ ದಟ್ಟಣೆ, ಗಿಜಿ­ಗುಡುವ ರಸ್ತೆಗಳು, ಅಪಾರ ಹೊಗೆ ಮತ್ತು ತಾಸುಗಟ್ಟಲೆ ಕಾಯಿಸುವ ಸಿಗ್ನಲ್‌ ಲೈಟು­ಗಳಲ್ಲಿ ಪೋಲಾಗುವ ಇಂಧನಗಳ ಬಿಸಿ ಉಂಡ ಬೆಂಗಳೂರಿನ ಜನ ಕಾರ್‌ ಪೂಲಿಂಗ್‌ಗೆ ಮೊರೆಹೋಗುತ್ತಿ­ದ್ದಾರೆ. ಒಂಟಿಯಾಗಿ ಕಾರು ಪಡೆದು ಪ್ರಯಾ­ಣಿಸಲು ತಗ­ಲುವ ವೆಚ್ಚಕ್ಕಿಂತ ಶೇ.30­ರಷ್ಟು ಕಡಿಮೆ ವೆಚ್ಚದಲ್ಲಿ ಪ್ರಯಾಣ ಮಾಡುವ ಅವಕಾಶ ಕಾರ್‌ ಪೂಲಿಂಗ್‌ ನೀಡಿದೆ. ಇನ್ನು ಸ್ವತಃ ವಾಹನ ಚಾಲನೆ­ಮಾಡಿಕೊಂಡು ಹೋಗುತ್ತಿದ್ದವರಿಗಂತೂ ಈ ವ್ಯವಸ್ಥೆ ದೊಡ್ಡ ಮಟ್ಟದ ನಿರಾಳತೆ ನೀಡಿದೆ. ಹಾಗಾಗಿ ದಿನದಿಂದ ದಿನಕ್ಕೆ ಕಾರ್‌ ಪೂಲಿಂಗ್‌ ಜನಪ್ರಿಯತೆ ಏರುತ್ತಿದೆ.

'ಓಲಾ, ಉಬರ್‌ ಟ್ರಾವೆಲ್ಸ್‌ ನಡೆಸಲು ಅನುಮತಿ ಪಡೆದಿದ್ದಾರೆ. ಆದರೆ ಒಬ್ಬ ಪ್ರಯಾಣಿಕರನ್ನು ಮತ್ತೊ ಬ್ಬ­ರೊಂದಿಗೆ ಕೂರಿಸಿ ಕರೆದೊಯ್ಯಲು ರಾಜ್ಯದ ಮೋಟಾರ್‌ ವಾಹನ ಕಾಯ್ದೆಯಲ್ಲಿ ಅವಕಾಶವಿಲ್ಲ. ಪ್ರಯಾಣಿಕರ ಸುರಕ್ಷತೆ ಮುಖ್ಯ. ಆದ್ದರಿಂದ ಅಪಾಯ ತಡೆಯಲು ಮುಂಜಾಗ್ರತಾ ಕ್ರಮವಾಗಿ ಪೂಲಿಂಗ್‌ ಮತ್ತು ಶೇರಿಂಗ್'ಅನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಕಂಪನಿಗಳ ಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮನವಿ ಪರಿಶೀಲಿಸಿ ಸದ್ಯದಲ್ಲೇ ನಿರ್ಧಾರ ಪ್ರಕಟಿಸುತ್ತೇವೆ.
- ರಾಮಲಿಂಗಾ ರೆಡ್ಡಿ, ರಾಜ್ಯ ಸಾರಿಗೆ ಸಚಿವರು

 

ಓಲಾ ಹಾಗೂ ಉಬರ್‌ ಪೂಲ್‌ ಬುಕ್ಕಿಂಗ್‌ ಸರಿಯಲ್ಲ. ಈ ಸಂಸ್ಥೆಗಳ ಚಾಲಕರಾಗಿ ಇದನ್ನು ಒಪ್ಪಿಕೊಳ್ಳುತ್ತೇವೆ. ಆರ್‌ಟಿಒ ಅಧಿಕಾರಿಗಳ ನಿರ್ದೇಶನದಂತೆ ಫೆ.3ರಂದು ಸೇವೆ ಸ್ಥಗಿತಗೊಳಿಸಬೇಕಿತ್ತು. ಆದರೂ ಸೇವೆ ಮುಂದುವರಿಸಲಾಗಿದೆ. ಮೂರ್ನಾಲ್ಕು ಬುಕ್ಕಿಂಗ್‌ ಒಂದೇ ಕ್ಯಾಬ್‌ನಲ್ಲಿ ಒಟ್ಟಿಗೆ ಸಂಚರಿಸುವುದರಿಂದ ಉಳಿದ ಚಾಲಕರಿಗೆ ನಷ್ಟವಾಗುತ್ತದೆ. ಸುಮಾರು ಒಂದು ಲಕ್ಷ ನಲವತ್ತು ಸಾವಿರಕ್ಕೂ ಹೆಚ್ಚು ಕ್ಯಾಬ್‌ಗಳ ಚಾಲಕರು ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಗ್ರೀನ್‌ ಸಿಟಿ ಅನ್ನುವುದೆಲ್ಲ ಬರೀ ಪೊಳ್ಳು. ಆರ್‌ಟಿಒ ಅಧಿಕಾರಿಗಳಿಗೆ ಸಂಸ್ಥೆಗೆ ನೇರವಾಗಿ ದಂಡ ವಿಧಿಸಿ ಎಂದರೂ ಕೇಳುತ್ತಿಲ್ಲ. 

-ತನ್ವೀರ್‌, ಓಲಾ ಉಬರ್‌ ಚಾಲಕರ ಮತ್ತು ಮಾಲೀಕರ ಸಂಘ(ಒಟಿಯು)ರಾಜ್ಯಾಧ್ಯಕ್ಷ

 

ಆರ್‌ಟಿಒ ಅಧಿಕಾರಿಗಳು ಸುಮ್ಮನೆ ವಾಹನಗಳನ್ನು ಹಿಡಿದು ದಂಡ ವಿಧಿಸುತ್ತಿದ್ದಾರೆ. ಪ್ರತಿದಿನ ಶೋರೂಂನಿಂದ ಹೊಸ ಗಾಡಿಗಳು ರಸ್ತೆಗಿಳಿಯುತ್ತಿವೆ. ಇನ್ನೆಲ್ಲಿ ಪರಿಸರ ಮಾಲಿನ್ಯ, ಡೀಸೆಲ್‌ ಬಳಕೆ ಕಡಿಮೆಯಾಗುತ್ತದೆ ಎಂಬ ಬಗ್ಗೆ ಅವಲೋಕಿಸಿ. ಇಂದು ಓಲಾ­ ವನ್ನು ಲೀಸಿಂಗ್‌ ವಾಹನ ಎಂದು ಬಿಡುತ್ತಿರುವುದರಿಂದ ನಷ್ಟವಾಗುತ್ತಿದೆ. ಚಾಲಕರು ಸಾಲಗಾರ ರಾಗುವ ಸ್ಥಿತಿ ಇದೆ. ಚಾಲಕರಿಗೆ ಸಕಾರಣವಿಲ್ಲದೆ ದಂಡ ವಿಧಿಸುವುದನ್ನು ನಿಲ್ಲಿಸಬೇಕು. ಪ್ರಸ್ತುತ ಒಂದು ಕಿ.ಮೀ.ಗೆ ಓಲಾ .6 ಉಬರ್‌ .7 ನಿಗದಿ ಮಾಡಲಾಗಿದೆ. ಚಾಲಕರಿಗೆ ಕಿ.ಮೀ.ಗೆ 4ರಿಂದ .5 ಬೀಳುತ್ತದೆ. ಆದ್ದರಿಂದ ಸರ್ಕಾರದ ನಿಯಮದಂತೆ .19 ಬೆಲೆ ನಿಗದಿಗೊಳಿಸ ಬೇಕು. ಯಾವ ಸಂಸ್ಥೆ ಚಾಲಕರ ಸಮಸ್ಯೆಗಳಿಗೆ ಸ್ಪಂದಿಸುತ್ತದೋ ಅದಕ್ಕೆ ನಮ್ಮ ಬೆಂಬಲ.
-ಶಾಂತಕುಮಾರ್‌, ಒಟಿಯು ಉಪಾಧ್ಯಕ್ಷ

 

ಅನುಕೂಲಗಳು

  •  ಕಾರಿನ ಇಂಧನ, ನಿರ್ವಹಣೆ ವೆಚ್ಚ ಕಡಿತ. ಚಾಲನೆಯ ಒತ್ತಡದಿಂದ ಪಾರು.
  • ಕಾರು ಬಳಸುವವರಿಗೆ ದುಬಾರಿ ವೆಚ್ಚ ಕಡಿತ, ಒಂಟಿ ಪ್ರಯಾಣದ ಏಕತಾನತೆಯಿಂದ ಪಾರು.
  • ದಟ್ಟಣೆ ಕಡಿಮೆ ಮಾಡಿದ ತೃಪ್ತಿ, ಇಂಧನ ಬಳಕೆ ಕಡಿತ ಮತ್ತು ಮಾಲಿನ್ಯ ಕಡಿತದಿಂದ ಕಾರ್ಬನ್‌ ಫುಟ್‌ಪ್ರಿಂಟ್‌ ಕಡಿತ.
  • , ಗಡಿಬಿಡಿರಹಿತ ನೆಮ್ಮದಿಯ ಪಯಣ. 

ಅನಾನುಕೂಲಗಳು

  • ಸರಿಯಾಗಿ ಸಿದ್ಧರಿಲ್ಲದೇ ಇದ್ದರೆ, ನಿಮ್ಮ ಸಮಯ ವಷ್ಟೇ ಅಲ್ಲ, ಸಹಪ್ರಯಾಣಿಕರ ಸಮಯವೂ ಪೋಲು.
  • ಅವರ ಹವ್ಯಾಸ, ಅಭ್ಯಾಸಗಳನ್ನೂ ಸಹಿಸಿಕೊಳ್ಳಬೇಕಾದ ಕಿರಿಕಿರಿ.
  • ಮತ್ತು ಸ್ವಾತಂತ್ರ್ಯವನ್ನು ಬದಿಗಿರಿಸಬೇಕಾಗುತ್ತದೆ.
  • ಪ್ರಯಾಣಿಸುವಾಗ ಗಾಸಿಪ್‌, ಕುಹಕಗಳಿಗೂ ಈಡಾಗಬೇಕಾಗಬಹುದು.

(ಕನ್ನಡಪ್ರಭ ವಾ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಖ್ಯಾತ ಸಿನಿಮಾ ನಟಿ-ನಿರೂಪಕಿ ಜೊತೆ ಆರ್‌ಸಿಬಿ ಮಾಜಿ ಪ್ಲೇಯರ್‌ ಡೇಟಿಂಗ್‌?
ಭಾರಿ ಇಳಿಕೆ ಬಳಿಕ ಶಾಕ್ ಕೊಟ್ಟ ಚಿನ್ನದ ಬೆಲೆ, ಬೆಂಗಳೂರು-ಹೈದರಾಬಾದ್‌ನಲ್ಲಿ 6,500 ರೂ ಏರಿಕೆ