ಶಾಸಕರಿಗೆ ಉತ್ತರ ಕೊಡಲು ಅಧಿಕಾರಿಗಳ ನೇಮಕ!

By Suvarna Web DeskFirst Published Jun 1, 2017, 9:10 AM IST
Highlights

ರಾಜ್ಯ ವಿಧಾನಮಂಡಲದಲ್ಲಿ ಇನ್ನುಮಂದೆ ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ ಎನ್ನುವಂತೆಯೇ ಇಲ್ಲ. ಏಕೆಂದರೆ ಶಾಸಕರ ಪ್ರಶ್ನೆಗಳಿಗೆ ಉತ್ತರ ಕೊಡಿಸುವುದಕ್ಕೆಂದೇ ಇದೇ ಮೊದಲ ಬಾರಿಗೆ ಪ್ರತಿ ಇಲಾಖೆಗಳಿಗೂ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರಿಗೆ ಈಗಾಗಲೇ ಸದನದಲ್ಲಿ ಪ್ರಸ್ತಾಪವಾಗುವ ಸಮಸ್ಯೆಗಳಿಗೆ, ಕೇಳುವ ಪ್ರಶ್ನೆಗಳಿಗೆ ಹಾಗೂ ಉಂಟಾಗುವ ಗೊಂದಲಗಳಿಗೆ ಕೂಡಲೇ ಇಲಾಖೆಗಳಿಂದ ಉತ್ತರ ದೊರಕಿಸಿಕೊಡುವಂತೆ ಸೂಚನೆಯನ್ನೂ ನೀಡಲಾಗಿದೆ.

ಬೆಂಗಳೂರು(ಜೂ.01): ರಾಜ್ಯ ವಿಧಾನಮಂಡಲದಲ್ಲಿ ಇನ್ನುಮಂದೆ ಶಾಸಕರು ಕೇಳುವ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ ಎನ್ನುವಂತೆಯೇ ಇಲ್ಲ. ಏಕೆಂದರೆ ಶಾಸಕರ ಪ್ರಶ್ನೆಗಳಿಗೆ ಉತ್ತರ ಕೊಡಿಸುವುದಕ್ಕೆಂದೇ ಇದೇ ಮೊದಲ ಬಾರಿಗೆ ಪ್ರತಿ ಇಲಾಖೆಗಳಿಗೂ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರಿಗೆ ಈಗಾಗಲೇ ಸದನದಲ್ಲಿ ಪ್ರಸ್ತಾಪವಾಗುವ ಸಮಸ್ಯೆಗಳಿಗೆ, ಕೇಳುವ ಪ್ರಶ್ನೆಗಳಿಗೆ ಹಾಗೂ ಉಂಟಾಗುವ ಗೊಂದಲಗಳಿಗೆ ಕೂಡಲೇ ಇಲಾಖೆಗಳಿಂದ ಉತ್ತರ ದೊರಕಿಸಿಕೊಡುವಂತೆ ಸೂಚನೆಯನ್ನೂ ನೀಡಲಾಗಿದೆ.

ಸ್ಪೀಕರ್‌ ಕೆ.ಬಿ.ಕೋಳಿವಾಡ ಅಧ್ಯಕ್ಷತೆಯಲ್ಲಿ ವಿಧಾನಸಭೆ ಕಾರ್ಯದರ್ಶಿ ಎಸ್‌.ಮೂರ್ತಿ ಇತ್ತೀಚೆಗೆ ನೋಡಲ್‌ ಅಧಿಕಾರಿಗಳಿಗೆ ಮಾಹಿತಿ ದೊರಕಿಸುವ ಬಗ್ಗೆ ತರಬೇತಿಯನ್ನೂ ನೀಡಿದ್ದಾರೆ. ಹಾಗೆಯೇ ಜೂನ್‌ 5ರಿಂದ ಆರಂಭವಾಗುವ ಅಧಿವೇಶನದಿಂದಲೇ ಇದು ಜಾರಿಯಾಗುತ್ತಿರುವುದರಿಂದ ಕೂಡಲೇ ಸಿದ್ಧತೆ ನಡೆಸುವಂತೆಯೂ ಅವರು ಸೂಚಿಸಿದ್ದಾರೆ. ಹೀಗಾಗಿ ಈ ಬಾರಿ ನಡೆಯುವ ಮುಂದುವರಿದ ಬಜೆಟ್‌ ಅಧಿವೇಶನ (ಮಳೆಗಾಲದ) ದಲ್ಲಿ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ ಎನ್ನುವ ಸಮಸ್ಯೆ ಅಷ್ಟಾಗಿ ಇರಲಾರದು ಎಂದು ನಿರೀಕ್ಷಿಸಲಾಗಿದೆ.

ವಿಧಾನಸಭೆ ಮತ್ತು ವಿಧಾನಪರಿಷತ್ತುಗಳಲ್ಲಿ ಪ್ರತಿ ಬಾರಿ ಅಧಿವೇಶನದಲ್ಲೂ ಸದಸ್ಯರು 15 ದಿನಗಳ ಮುಂಚೆಯೇ ಪ್ರಶ್ನೆ ಕೇಳಿದ್ದರೂ ಸಚಿವರಿಂದ ಉತ್ತರ ಸಿಗದಿರುವ ಸಮಸ್ಯೆ ಹಿಂದಿನಿಂದಲೂ ಇದೆ. ಇದರಿಂದ ಪ್ರತಿದಿನ ನಡೆಯುವ ಪ್ರಶ್ನೋತ್ತರ ಕಲಾಪದಲ್ಲಿ ಬರೀ ಪ್ರಶ್ನೆಗಳು ಕೇಳಿ ಬರುತ್ತವೆಯೇ ವಿನಃ ಸಚಿವರಿಂದ ಸಮರ್ಪಕ ಉತ್ತರ ಸಿಗುವುದಿಲ್ಲ. ಹೆಚ್ಚಿನ ಸಲ, ಮಾಹಿತಿ ತರಿಸಿ ನಂತರ ನೀಡಲಾಗುವುದು, ಸದನ ಮುಗಿಯುವ ಒಳಗಾಗಿ ಉತ್ತರ ಕೊಡಿಸಲಾಗುವುದು ಎನ್ನುವ ನೆಪದಲ್ಲಿ ಪ್ರಶ್ನೆಗಳಿಗೆ ಉತ್ತರವೇ ಸಿಗದಂತೆ ಮಾಡಲಾಗುತ್ತದೆ.
ಇದರಿಂದ ಶಾಸಕರು ಸದನದಲ್ಲಿ ಸರ್ಕಾರವನ್ನು ತರಾ ಟೆಗೆ ತೆಗೆದುಕೊಳ್ಳುವುದು, ಗಲಾಟೆಗಳಾಗುವುದು, ಕಲಾಪ ಮುಂದೂಡಿರುವ ಉದಾಹರಣೆಗಳೂ ಇವೆ. ಇದರಿಂದ ಸರ್ಕಾರ ಮುಜುಗರ ಅನುಭವಿಸುತ್ತದೆ. ಇದನ್ನು ತಪ್ಪಿಸಲು ಈ ಬಾರಿ ರಾಜ್ಯದ 38 ಇಲಾಖೆಗಳಿಗೂ ತಲಾ ಒಬ್ಬರಂತೆ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಶಾಸಕರು ಆಪೇಕ್ಷಿಸುವ ಮಾಹಿತಿಯನ್ನು ತಪ್ಪದೆ ದೊರಕಿಸಿ ಕೊಡುವ ಹೊಣೆಯನ್ನು ಅವರಿಗೆ ನೀಡಲಾಗಿದೆ.

ಸದಸ್ಯರು ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರದಲ್ಲಿ ಗೊಂದಲವಿದ್ದರೆ ಅಥವಾ ಅಸಮರ್ಪಕವಾಗಿದ್ದರೆ ಅದನ್ನೂ ಸರಿಪಡಿಸಿಕೊಡುವ ಜವಾಬ್ದಾರಿ ನೋಡಲ್‌ ಅಧಿಕಾರಿ ಗಳದು. ಇವರು ಅಧಿವೇಶನದ ಸಂದರ್ಭದಲ್ಲಿ ಇಲಾಖೆ ಮತ್ತು ಸಂಸದೀಯ ಅಧಿಕಾರಿಗಳ ಜತೆಗೆ ಸಂಪರ್ಕ ಹೊಂದಿರಬೇಕು. ಅದರಲ್ಲೂ ಮೊಬೈಲ್‌ ಸಂಪರ್ಕದ ಮೂಲಕ ತಮ್ಮ ಇಲಾಖೆಗಳಿಂದ ತಕ್ಷಣ ಮಾಹಿತಿ ತರಿಸಿಕೊಳ್ಳುತ್ತಿರಬೇಕು ಎಂದು ಸೂಚಿಸಲಾಗಿದೆ.

click me!