
ಬೆಂಗಳೂರು(ಸೆ. 13): ಸಿಎಂ ಸಿದ್ದರಾಮಯ್ಯನವರು ಕಾವೇರಿ ವಿಚಾರದಲ್ಲಿ ಪದತ್ಯಾಗ ಮಾಡಲು ಸಿದ್ಧವಿದ್ದಾರೆಂಬ ಮಾಹಿತಿ ಕೇಳಿ ಬಂದಾಗ ಅಚ್ಚರಿ ಪಟ್ಟವರು ಕಡಿಮೆ. ಕೆಲ ಪ್ರಕರಣಗಳಲ್ಲಿ ಬಹಳ ಗಟ್ಟಿ ನಿಲುವು ತೆಗೆದುಕೊಂಡು ಗಮನ ಸೆಳೆದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೆಮುಂದೆ ನೋಡುವುದಿಲ್ಲವೆಂಬುದು ಅವರನ್ನು ಬಲ್ಲವರಿಗೆ ತಿಳಿದಿರುವ ಸಂಗತಿ. ಇಂದು ಮಂತ್ರಿ ಪರಿಷತ್ ಸಭೆಯವರೆಗೂ ಮುಖ್ಯಮಂತ್ರಿಗಳು ತಮ್ಮ ನಿರ್ಧಾರಕ್ಕೆ ಬದ್ಧವಾಗಿಯೇ ಇದ್ದರೆಂಬುದು ಆಫ್ ದ ರೆಕಾರ್ಡ್ ಮಾಹಿತಿಯಿಂದ ತಿಳಿದುಬಂದಿದೆ. ಆದರೆ, ಮಂತ್ರಿ ಪರಿಷತ್ ಸಭೆಯಲ್ಲಿ ಸಿದ್ದರಾಮಯ್ಯನವರ ನಿಲುವು ಸಡಿಲಗೊಳ್ಳುತ್ತಾ ಹೋಯಿತು. ಆರ್.ಎಲ್.ಜಾಲಪ್ಪ, ರಮೇಶ್ ಕುಮಾರ್ ಅವರನ್ನು ಹೊರತುಪಡಿಸಿ ಉಳಿದವರು ಸಿಎಂ ನಿರ್ಧಾರವನ್ನು ಪುರಸ್ಕರಿಸಲಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಸಭೆಯ ಆರಂಭದಲ್ಲೇ ತಾನು ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದ ಸಿದ್ದರಾಮಯ್ಯ, ಹಿರಿಯರ ಒತ್ತಡಕ್ಕೆ ಕಟ್ಟುಬಿದ್ದು ತಮ್ಮ ನಿಲುವು ಬದಲಿಸಿಕೊಳ್ಳಬೇಕಾಯಿತು ಎಂದು ಸುವರ್ಣನ್ಯೂಸ್ ವರದಿಗಾರ ವೀರೇಂದ್ರ ಉಪ್ಪುಂದ ಹೇಳಿದ್ದಾರೆ.
ವಾಹಿನಿಯಲ್ಲಿ ನಡೆದ "Sorry ಕಾವೇರಿ.. ಆಫ್ ದ ರೆಕಾರ್ಡ್" ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೀರೇಂದ್ರ ಉಪ್ಪುಂದ, ಕಾವೇರಿ ವಿಚಾರವಾಗಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಯಾವ್ಯಾವ ಮುಖಂಡರ ಮುಖವಾಡ ಹೇಗಿತ್ತು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಸುವರ್ಣನ್ಯೂಸ್ ಸುದ್ದಿ ಮತ್ತು ಕಾರ್ಯಕ್ರಮ ಸಂಪಾದಕ ಅಜಿತ್ ಹನುಮಕ್ಕನವರ್ ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ವಿಜಯವಾಣಿ ಸಂಪಾದಕೀಯ ಸಲಹೆಗಾರ ಡಾ. ಜಿ.ಬಿ.ಹರೀಶ್ ಹಾಗೂ ಸುವರ್ಣನ್ಯೂಸ್ ದೆಹಲಿ ಪ್ರತಿನಿಧಿ ಪ್ರಶಾಂತ್ ನಾತು ಕೂಡ ಭಾಗವಹಿಸಿ ವಿಶ್ಲೇಷಣೆ ನಡೆಸಿದ್ದಾರೆ.
ಸಭೆಯಲ್ಲಿ ಯಾವ್ಯಾವ ಮುಖಂಡರು ಏನೇನು ಹೇಳಿದರು..?
ಸಿದ್ದರಾಮಯ್ಯ - ರಾಜೀನಾಮೆ ನೀಡಲು ಸಿದ್ಧನಿದ್ದೇನೆ? ಯಾವಾಗ ವಿಧಾನಸಭೆ ವಿಸರ್ಜನೆ ಮಾಡುವುದು? ನೀವು ಏನು ನಿರ್ಧರಿಸಿದರೂ ಅದಕ್ಕೆ ಬದ್ಧವಾಗಿರುತ್ತೇನೆ ಎಂದು ಆರಂಭದಲ್ಲೇ ನಿಲುವು ಸ್ಪಷ್ಟಪಡಿಸಿದ್ರು
ಎಂ.ಬಿ. ಪಾಟೀಲ್ - ನಾರಿಮನ್ ಜೊತೆ ಮಾತುಕತೆ ಮಾಡಿದ್ದೇನೆ ಅದರಂತೆ ನೀರು ಬಿಡುವುದು ಉತ್ತಮ ಅಂತ ಮೊಟ್ಟ ಮೊದಲು ಒತ್ತಾಯಿಸಿದ್ರು
ವಿ.ಎಸ್. ಉಗ್ರಪ್ಪ - ನೀರು ಬಿಡಬೇಕು ಅಂತ ಒತ್ತಿ ಒತ್ತಿ ಹೇಳಿದ್ರು. ಇಲ್ಲಾಂದ್ರೆ ಅಣೆಕಟ್ಟನ್ನೇ ವಶಕ್ಕೆ ಪಡೀತಾರೆ ಅಂತ ಹೆದರಿಸಿದ್ರು
ಡಿ.ಕೆ.ಶಿವಕುಮಾರ್- ಕಾನೂನು ತೊಡಕು ಎದುರಾಗಬಾರದು ಅಂದ್ರೆ ನೀರು ಬಿಡೋದು ಉತ್ತಮ ಅಂತ ಸಲಹೆ ನೀಡಿದ್ರು
ಮಲ್ಲಿಕಾರ್ಜುನ ಖರ್ಗೆ - ಕಾನೂನು ವ್ಯಾಪ್ತಿಯಲ್ಲೇ ಹೋರಾಟ ಮುಂದುವರಿಸೋಣ. ಸಿಎಂ ರಾಜೀನಾಮೆ ಯೋಚನೆ ಈ ಹಂತದಲ್ಲಿ ಬೇಡ ಅಂದ್ರು
ಕಾಗೋಡು ತಿಮ್ಮಪ್ಪ - ಹಿರಿಯರಾಗಿದ್ರೂ ಕೂಡ ಯಾವುದೇ ಗಂಭೀರವಾದ ನಿರ್ಣಯಕ್ಕೆ ದಿಕ್ಕು ತೋರಿಸಲಿಲ್ಲ
ಬಿ.ಕೆ. ಹರಿಪ್ರಸಾದ್ - ನೀರು ಬಿಡೋಣ, ಬಿಡೋದು ಬೇಡ ಅನ್ನೋ ಗೊಂದಲ ಹುಟ್ಟಿಸಿ ಅಡ್ಡಗೋಡೆ ಮೇಲೆ ದೀಪ ಇಟ್ಟರು
ಆಸ್ಕರ್ ಫರ್ನಾಂಡಿಸ್ - ಹಾವೂ ಸಾಯಬಾರ್ದು..ಕೋಲೂ ಮುರಿಬಾರ್ದು ಅನ್ನೋ ಹಾಗೆ ಮಾತನಾಡಿ ಜಾರಿಕೊಂಡ್ರು
ವೀರಪ್ಪ ಮೊಯ್ಲಿ - ಬಿಕ್ಕಟ್ಟು ಶಮನ ಮಾಡೋ ಬದಲು ನ್ಯಾಯಮೂರ್ತಿ ಉದಯ್ ಲಲಿತ್ ಬಗ್ಗೆ ಮಾತನಾಡುತ್ತಲೇ ಕಾಲ ಕಳೆದ್ರು
ಆರ್.ಎಲ್. ಜಾಲಪ್ಪ - ನೀರು ಬಿಡೋದು ಬೇಡ ಅಂತ ಖಡಕ್ ಆಗಿ ಹೇಳಿದ್ರು. ಜೊತೆಗೆ ಮುಂದಾಗುವ ಕಾನೂನು ತೊಡಕು ಬಗ್ಗೆ ಎಚ್ಚರ ವಹಿಸಬೇಕು ಅಂತ ಸಲಹೆನೂ ಕೊಟ್ರು .
ರಮೇಶ್ ಕುಮಾರ್ - ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಅವರ ಸಲಹೆ ಪಡೆದು ನೀರು ಬಿಡೋದು ಬೇಡ ಅಂತ ಸಭೆಯಲ್ಲಿ ಹೇಳಿದ್ರು
ರೆಹಮಾನ್ ಖಾನ್ - ಸರ್ಕಾರ ವಿಸರ್ಜನೆ ಚಿಂತನೆ ಬೇಡ. ಕಾನೂನು ಪರ್ಯಾಯ ಮಾರ್ಗದ ಬಗ್ಗೆ ಯೋಚಿಸೋಣ ಅಂದ್ರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.