ಹೆಸರು ಬದಲಾಯಿಸಿ ಎಂದ ಮೌಲ್ವಿಗಳಿಗೆ ಎಂಪಿ ನುಸ್ರತ್ ಖಡಕ್ ತಿರುಗೇಟು!

By Web DeskFirst Published Oct 8, 2019, 1:32 PM IST
Highlights

ದುರ್ಗಾ ಪೂಜೆಯಲ್ಲಿ ಪಾಲ್ಗೊಂಡ ಸಂದೆ ನುಸ್ರತ್ ಜಹಾನ್| ಧರ್ಮ ವಿರೋಧಿ ಆಚರಣೆಯಲ್ಲಿ ಪಾಲ್ಗೊಂಡ ನುಸ್ರತ್ ತನ್ನ ಹೆಸರು, ಧರ್ಮ ಬದಲಾಯಿಸಿಕೊಳ್ಳಲಿ ಅಂದ್ರ ಇಸ್ಲಾಂ ಧಾರ್ಮಿಕ ಗುರುಗಳು| ಧರ್ಮದ ಪಾಠ ಮಾಡಿದ ಇಸ್ಲಾಂ ಗುರುಗಳಿಗೆ ನುಸ್ರತ್ ತಿರುಗೇಟು

ಕೋಲ್ಕತ್ತಾ[ಅ.08]: ಬಂಗಾಳದ ಖ್ಯಾತ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ದುರ್ಗಾ ಪೂಜೆ ನಡೆಸುತ್ತಿರುವ ವಿಡಿಯೋ ಒಂದು ಕಳೆದ ಕೆಲ ದಿನಗಳ ಹಿಂದೆ ಸೋಶಿಯಲ್ ಮಿಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಡಿಯೋಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಆದರೀಗ ಈ ಪ್ರಶಂಸೆಯ ಬೆನ್ನಲ್ಲೇ ಇದು ಇಸ್ಲಾಂ ಧಾರ್ಮಿಕ ಗುರುಗಳ ಕೆಂಗಣ್ಣಿಗೆ ಗುರಿಯಾಗಿದೆ. ನುಸ್ರತ್ ವಿರುದ್ಧ ಕಿಡಿ ಕಾರಿರುವ ಧಾರ್ಮಿಕ ಗುರುಗಳು ಅವರು ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಿದ್ದಾರೆ. ಹೀಗಾಗಿ ನುಸ್ರತ್ ತಮ್ಮ ಹೆಸರು ಮತ್ತು ಧರ್ಮವನ್ನು ಬದಲಾಯಿಸಿಕೊಳ್ಳಲಿ ಎಂದಿದ್ದಾರೆ.

ದುರ್ಗಾ ಮಾತೆಗಾಗಿ ಸಂಸದೆಯರ ಡಾನ್ಸ್: ವೈರಲ್ ಆಯ್ತು ವಿಡಿಯೋ!

ನುಸ್ರತ್ ಜಹಾನ್ ವಿರುದ್ಧ ಕಿಡಿ ಕಾರಿರುವ ಸುನ್ನಿ ಪಂಥಕ್ಕೆ ಸೇರಿದ ಧರ್ಮಗುರು ಮುಫ್ತಿ ಅಸದ್ ಖಾಸ್ಮಿ 'ಅಲ್ಲಾಹುವಿಗೆ ಮಾತ್ರ ಪ್ರಾರ್ಥಿಸಬೇಕು ಎಂದು ಇಸ್ಲಾಮ್ ಧರ್ಮ ತನ್ನ ಹಿಂಬಾಲಕರಿಗೆ ಆದೇಶಿಸಿದೆ. ಆದರೂ ಕೂಡ ಆಕೆ ಹಿಂದೂ ದೇವರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಅವರು ಮಾಡಿದ ಕೆಲಸ ಹರಾಮ್[ಧರ್ಮ ಬಾಹಿರ, ಪಾಪದ ಕೆಲಸ] ಆಗಿದೆ' ಎಂದಿದ್ದಾರೆ. 

ಇದೇ ಸಂದರ್ಭದಲ್ಲಿ ನುಸ್ರತ್ ವಿವಾಹ ವಿಚಾರದ ಕುರಿತಾಗಿಯೂ ಆಕ್ಷೇಪ ವ್ಯಕ್ತಪಡಿಸಿರುವ ಇಸ್ಲಾಂ ಗುರು 'ನುಸ್ರತ್ ಅನ್ಯ ಧರ್ಮೀಯ ವ್ಯಕ್ತಿಯನ್ನು ವಿವಾಹವಾಗಿದ್ಧಾರೆ. ತನ್ನ ಹೆಸರು ಮತ್ತು ಧರ್ಮವನ್ನು ಬದಲಿಸಿಕೊಳ್ಳಲಿ. ಮುಸ್ಲಿಂ ಹೆಸರು ಇಟ್ಟುಕೊಂಡು ಧರ್ಮಕ್ಕೆ ಕೆಟ್ಟ ಹೆಸರು ತರುವುದು ಸರಿಯಲ್ಲ' ಎಂದಿದ್ದಾರೆ.

ಜೈ ಶ್ರೀರಾಮ್ ಘೋಷಣೆ, ಟ್ರೋಲ್ ಮತ್ತು ಸಂಸದೆ ನುಸ್ರತ್ ಜಹಾನ್!

ಇಸ್ಲಾಂ ಗುರುಗಳ ಈ ಆಕ್ರೋಶಕ್ಕೆ ತಕ್ಕ ತಿರುಗೇಟು ನೀಡಿರುವ ಸಂಸದೆ ನುಸ್ರತ್ 'ಎಲ್ಲ ಧರ್ಮದ ಸೌಹಾರ್ದತೆ ಸಾರಲು ನನ್ನದೇ ಆದ ದಾರಿಯಲ್ಲಿ ನಾನು ಹೋಗುತ್ತಿದ್ದೇನೆ. ನಾನು ಮಾಡುತ್ತಿರುವ ಸರಿಯೆಂದು ನನಗನಿಸುತ್ತಿದೆ. ನಾವು ಎಲ್ಲ ಧರ್ಮದ ಹಬ್ಬಗಳನ್ನು ಆಚರಿಸಬೇಕು' ಎಂದಿದ್ದಾರೆ.

ಸಂಸದೆಯಾದ ಬಳಿಕ ಪಾಶ್ಚಿಮಾತ್ಯ ಉಡುಗೆ ಧರಿಸಿ ಸಂಸತ್ತು ಪ್ರವೇಶಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಲು ಆರಂಭಿಸಿದ್ದ ನುಸ್ರತ್ ಜಹಾನ್, ಈ ವರ್ಷದ ಆರಂಭದಲ್ಲಿ ನಿಖಿಲ್ ಜೈನ್ ಅವರನ್ನು ವಿವಾಹವಾಗಿದ್ದರು. ಅಂದಿನಿಂದ ಅವರು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ನಿನ್ನೆ ಭಾನುವಾರವೂ ನುಸ್ರತ್ ಕುಂಕುಮ, ಮಂಗಳಸೂತ್ರ ಧರಿಸಿ ತನ್ನ ಪತಿ ಜೊತೆ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಕೈಜೋಡಿಸಿ, ಭಕ್ತಿಯಿಂದ ಮಂತ್ರೋಚ್ಛಾರ ಮಾಡಿದ್ದರು.

click me!