ಕನ್ನಡ ನಾಡ ಧ್ವಜದ ಆಸೆ ಕೈಬಿಟ್ಟಿತೇ ಸರ್ಕಾರ..?

By Web DeskFirst Published Oct 21, 2018, 11:06 AM IST
Highlights

ಹಿಂದಿನ ಸರ್ಕಾರ ಪ್ರತ್ಯೇಕ ನಾಡಧ್ವಜ ರೂಪಿಸಿ, ಪ್ರತ್ಯೇಕ ಧ್ವಜ ಹೊಂದುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟು ಒಂಬತ್ತು ತಿಂಗಳು ಕಳೆದಿದೆ. ಆದರೆ ಈವರೆಗೆ ಕಳುಹಿಸಿದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯದ ಮೈತ್ರಿ ಸರ್ಕಾರ ಕೂಡ ಪ್ರತ್ಯೇಕ ಧ್ವಜ ವಿಚಾರದ ಬೆನ್ನತ್ತುವ ಕೆಲಸವನ್ನು ಇನ್ನೂ ಆರಂಭಿಸಿಯೇ ಇಲ್ಲ.
 

ಬೆಂಗಳೂರು :  ಭಾರೀ ಚರ್ಚೆಗೆ ನಾಂದಿ ಹಾಡಿದ್ದ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಹೊಂದುವ ಪ್ರಸ್ತಾವನೆ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಮೂಲೆಗೆ ಸೇರಿದೆ.

ಈ ಹಿಂದಿನ ಸರ್ಕಾರ ಪ್ರತ್ಯೇಕ ನಾಡಧ್ವಜ ರೂಪಿಸಿ, ಪ್ರತ್ಯೇಕ ಧ್ವಜ ಹೊಂದುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟು ಒಂಬತ್ತು ತಿಂಗಳು ಕಳೆದಿದೆ. ಆದರೆ ಈವರೆಗೆ ಕಳುಹಿಸಿದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯದ ಮೈತ್ರಿ ಸರ್ಕಾರ ಕೂಡ ಪ್ರತ್ಯೇಕ ಧ್ವಜ ವಿಚಾರದ ಬೆನ್ನತ್ತುವ ಕೆಲಸವನ್ನು ಇನ್ನೂ ಆರಂಭಿಸಿಯೇ ಇಲ್ಲ.

ಪ್ರಸ್ತುತ ಸಮ್ಮಿಶ್ರ ಸರ್ಕಾರ ಸಾಲ ಮನ್ನಾ, ಸಚಿವ ಸಂಪುಟ ವಿಸ್ತರಣೆ, ಮುಖಂಡರ ಭಿನ್ನಮತ ಶಮನ, ಉಪಚುನಾವಣೆ ಮುಂತಾದವುಗಳನ್ನು ನಿರಂತರವಾಗಿ ಎದುರಿಸುತ್ತಿದೆ. ಇವುಗಳನ್ನು ನಿವಾರಿಸಿ ಸರ್ಕಾರವನ್ನು ಸುಗಮವಾಗಿ ನಡೆಸಲು ಸರ್ಕಾರ ಬೆವರು ಹರಿಸುತ್ತಿದೆ. ಹಾಗಾಗಿ ಪ್ರತ್ಯೇಕ ಧ್ವಜ ವಿಚಾರದಲ್ಲಿ ಸರ್ಕಾರ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅಲ್ಲದೇ ಸರ್ಕಾರ ಸಿದ್ಧಪಡಿಸಿದ ಪ್ರತ್ಯೇಕ ಧ್ವಜದ ಬಗ್ಗೆ ಆಕ್ಷೇಪಗಳು ಸಹ ಇವೆ. ಹೀಗಾಗಿ ಮತ್ತೊಮ್ಮೆ ಈ ವಿಷಯ ಕೈಗೆತ್ತಿಕೊಂಡು ವಿವಾದದ ಸುಳಿಗೆ ಸಿಲುಕಲು ಸರ್ಕಾರ ಸಿದ್ಧವಿಲ್ಲ ಎನ್ನುತ್ತಿವೆ ಸರ್ಕಾರದ ಮೂಲಗಳು.

ಮೈತ್ರಿ ಸರ್ಕಾರ ಸಿದ್ಧವಿಲ್ಲ:

ನಾವು ಒಂದೇ ದೇಶದಲ್ಲಿದ್ದೇವೆ. ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವ ಯಾವುದೇ ಕಾನೂನಿಗೆ ಅವಕಾಶವಿಲ್ಲ ಎಂದು ಕೇಂದ್ರ ಗೃಹ ಇಲಾಖೆ ವಕ್ತಾರರೊಬ್ಬರು ನೀಡಿದ್ದ ಹೇಳಿಕೆಯನ್ನೇ ಕೇಳಿ ಇಡೀ ರಾಜ್ಯ ಸರ್ಕಾರವೇ ಮೌನಕ್ಕೆ ಶರಣಾಗಿದೆ. ಆಯಾ ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದುವುದರಲ್ಲಿ ತಪ್ಪೇನಿದೆ? ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಸಲ್ಲತಕ್ಕ ಎಲ್ಲ ಗೌರವವನ್ನು ರಾಜ್ಯಗಳು ಸಲ್ಲಿಸುತ್ತಿವೆ. ಸಂವಿಧಾನದಲ್ಲೂ ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಬಾರದು ಎಂಬುದರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಹೀಗಿರುವಾಗ ಕೇಂದ್ರ ಸರ್ಕಾರ ಏಕೆ ರಾಜ್ಯದ ಪ್ರಸ್ತಾವನೆಯನ್ನು ಅಧಿಕೃತಗೊಳಿಸಲು ಹಿಂದೇಟು ಹಾಕುತ್ತಿದೆ ಎಂಬುದು ಕನ್ನಡಪರ ಸಂಘಟನೆಗಳ ಪ್ರಶ್ನೆ.

ಪ್ರತ್ಯೇಕ ನಾಡಧ್ವಜ ಕುರಿತು ಅಂದಿನ ರಾಜ್ಯ ಸರ್ಕಾರ ಕನ್ನಡಪರ ಸಂಘಟನೆಗಳ ಅಭಿಪ್ರಾಯವನ್ನು ಸಂಗ್ರಹಿಸಿತ್ತು. ಅಲ್ಲದೇ ಕಾನೂನು ತಜ್ಞರ ಸಲಹೆ ಪಡೆದಿತ್ತು. ಎಲ್ಲ ಸಿದ್ಧತೆಗಳ ನಂತರವೇ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರತ್ಯೇಕ ಧ್ವಜಕ್ಕಾಗಿ ಪ್ರಸ್ತಾವನೆ ಕಳುಹಿಸಿ ಕೊಟ್ಟಿತ್ತು. ಅಂದು ರಾಜಕೀಯ ಸ್ವರೂಪ ಪಡೆದ ನಾಡಧ್ವಜದ ವಿಚಾರದ ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಕಾಂಗ್ರೆಸ್‌ ಸರ್ಕಾರದ ಪ್ರಮುಖ ನಿರ್ಧಾರವೊಂದು ಮೂಲೆಗೆ ಸೇರಿದೆ.

ಹೀಗಿದೆ ಹೊಸ ಧ್ವಜ:

ಕನ್ನಡಿಗರಲ್ಲಿ ಭಾವನಾತ್ಮಕತೆ ಬೆಸೆದಿರುವ ಕನ್ನಡಪರ ಹೋರಾಟಗಾರ ಮ.ರಾಮಮೂರ್ತಿ ಅವರು ರಚಿಸಿದ್ದ ಕೆಂಪು ಮತ್ತು ಹಳದಿ ಬಣ್ಣದ ಧ್ಜಜವನ್ನೇ ಮಾದರಿಯಾಗಿಟ್ಟುಕೊಂಡು ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ರೂಪಿಸಿ ಅದಕ್ಕೊಂದು ಕಾನೂನು ಚೌಕಟ್ಟು ಕಲ್ಪಿಸಲು 9 ಸದಸ್ಯರ ಸಮಿತಿ ರಚಿಸಿತ್ತು. ಅಂತೆಯೇ ಸಮಿತಿಯು ನಾಲ್ಕು ಮಾದರಿ ಧ್ವಜಗಳನ್ನು ರಚಿಸಿತ್ತು. ಅದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಳದಿ, ಬಿಳಿ ಮತ್ತು ಕೆಂಪು ಬಣ್ಣ ಹಾಗೂ ಮಧ್ಯದಲ್ಲಿ ಸತ್ಯಮೇವ ಜಯತೆ ಎಂಬ ಘೋಷವಾಕ್ಯ, ಗಂಡಭೇರುಂಡದ ಲಾಂಛನ ಒಳಗೊಂಡ ಧ್ವಜವನ್ನು ಅಂತಿಮಗೊಳಿಸಿತ್ತು.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಮುಖಂಡರ ಒಪ್ಪಿಗೆ ಪಡೆದು ಪ್ರತ್ಯೇಕ ನಾಡಧ್ವಜ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ನ.1ರಂದು ಕನ್ನಡ ರಾಜ್ಯೋತ್ಸವ ನಡೆಯಲಿದೆ. ಅದಕ್ಕೂ ಮೊದಲೇ ಕೇಂದ್ರ ಸರ್ಕಾರ ಪ್ರತ್ಯೇಕ ನಾಡಧ್ವಜ ಪ್ರಸ್ತಾವನೆಗೆ ಅಧಿಕೃತ ಮುದ್ರೆ ಹಾಕುವಂತೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು. ಪಕ್ಷಾತೀತವಾಗಿ ಈ ಕುರಿತು ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು.

- ಟಿ.ಎ.ನಾರಾಯಣಗೌಡ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ.

ಕೆಂಪು-ಹಳದಿ ಬಣ್ಣದ ಬಾವುಟದೊಂದಿಗೆ ಕನ್ನಡಿಗರಿಗೆ ಭಾವನಾತ್ಮಕ ಸಂಬಂಧವಿದೆ. ಹಿಂದಿನ ಸರ್ಕಾರ ಅಧಿಕೃತ ನಾಡಧ್ವಜ ರೂಪಿಸಲು ಎಲ್ಲರಂತೆ ನಾವೂ ಒಪ್ಪಿಕೊಂಡಿದ್ದೆವು. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಲಾಗುವುದು. ಹೊಸ ಧ್ವಜ ಅಧಿಕೃತಗೊಳ್ಳುವವರೆಗೂ ಹಳದಿ, ಕೆಂಪು ಬಾವುಟವನ್ನೇ ಬಳಸುತ್ತೇವೆ.

- ಸಾ.ರಾ.ಗೋವಿಂದು, ಕನ್ನಡಪರ ಹೋರಾಟಗಾರ

ಎಲ್ಲರಿಗೂ ರಾಜಕೀಯ ಬೇಕೇ ಹೊರತು ಯಾರಿಗೂ ಕನ್ನಡ, ನಾಡು, ರೈತರ ಹಿತಾಸಕ್ತಿ ಬೇಕಿಲ್ಲ. ನಾಡಗೀತೆ, ರೈತಗೀತೆ ಇರುವಂತೆ ಪ್ರತ್ಯೇಕ ಧ್ವಜ ಇರಬೇಕು ಎನ್ನುವುದರಲ್ಲಿ ತಪ್ಪೇನಿದೆ? ನಮ್ಮ ಮಂತ್ರಿಗಳು, ಸಂಸದರು, ಶಾಸಕರಿಗೆ ಕನ್ನಡಿಗರ ಮತಗಳು ಬೇಕೇ ಹೊರತು, ಅವರ ಭಾವನೆಗಳು ಬೇಕಿಲ್ಲ. ಈಗಲಾದರೂ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುವ ಮೂಲಕ ನಾಡಧ್ವಜಕ್ಕೆ ಅಧಿಕೃತ ಒಪ್ಪಿಗೆ ಪಡೆಯಲು ಪ್ರಯತ್ನಿಸಬೇಕು.

- ಪ್ರವೀಣ್‌ಕುಮಾರ್‌ ಶೆಟ್ಟಿ, ಅಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ

ಸಂಪತ್‌ ತರೀಕೆರೆ

click me!