ಭುಗಿಲೆದ್ದ ಜೆಡಿಎಸ್ - ಕಾಂಗ್ರೆಸ್ ಮುಖಂಡರ ಭಿನ್ನಾಭಿಪ್ರಾಯ

By Web DeskFirst Published Oct 21, 2018, 10:59 AM IST
Highlights

ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಾಭಿ ಪ್ರಾಯ ಭುಗಿಲೆದ್ದಿದೆ.

ಮೈಸೂರು: ನಾಡಹಬ್ಬ ದಸರಾ ಮುಕ್ತಾಯದ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ನಡುವೆ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಾಭಿ ಪ್ರಾಯ ಭುಗಿಲೆದ್ದಿದ್ದು, ಕಾಂಗ್ರೆಸ್  ಶಾಸಕ ತನ್ವೀರ್‌ಸೇಠ್ ಸುದ್ದಿಗೋಷ್ಠಿ ನಡೆಸುವ ಮೂಲಕ ಜೆಡಿಎಸ್ ಮುಖಂಡರ ಮೇಲಿನಅಸಮಾಧಾನವನ್ನು ಬಹಿರಂಗಗೊಳಿಸಿದ್ದಾರೆ. 

ದಸರಾ ಉತ್ಸವದ ವೇಳೆ ಕಾಂಗ್ರೆಸ್ ಮುಖಂಡರಿಗೆ ಸೂಕ್ತ ಆಹ್ವಾನ ನೀಡದ ಹಿನ್ನೆಲೆಯಲ್ಲಿ ಪಾಲ್ಗೊಳ್ಳದೇ ನಾವೆಲ್ಲ ದೂರ ಉಳಿದೆವು. ಚಾಮುಂಡೇಶ್ವರಿ ಹೆಸರಿನಲ್ಲಿ ದಸರಾ ಹಾಗೂ ಜಂಬೂಸವಾರಿ ಮೆರವಣಿಗೆ ನಡೆಯುವುದರಿಂದ ಅದಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದೆವು. ಅದರಂತೆ ದಸರಾಗೆ ಯಾವುದೇ ಅಡ್ಡಿ ಉಂಟಾಗದಂತೆ ನೋಡಿಕೊಂಡೆವು. ಅಧಿಕಾರಿಗಳ ದರ್ಬಾರ್ ನಡುವೆ ಜಿಲ್ಲಾಡಳಿತವು ಜಿಲ್ಲಾ
ಉಸ್ತುವಾರಿ ಸಚಿವರ ಕೈಗೊಂಬೆಯಂತೆ ವರ್ತಿಸಿತು ಎಂದು ಸುದ್ದಿಗಾರರೆದುರು ದೂರಿದರು. 

ಚುನಾವಣೆ ನೆಪ ಹೇಳಿಕೊಂಡು ಯಾವುದೇ ಸಮಿತಿ ರಚಿಸಲಿಲ್ಲ. ದಸರಾ ಪಾಸ್ ವಿತರಣೆಯಲ್ಲಿ ಸಾಕಷ್ಟು ಗೊಂದಲ ಉಂಟಾಯಿತು. ಉಸ್ತುವಾರಿ ಸಚಿವರಿಗೆ 10000, ಸಾ .ರಾ. ಮಹೇಶ್‌ಗೆ 5000, ಮುಖ್ಯಮಂತ್ರಿಗಳ ಕಚೇರಿಗೆ 2000 ಪಾಸ್ ವಿತರಣೆಯಾಗಿದೆ. ಈ ಲೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಉತ್ತರ ಬೇಕು.  ಗೋಲ್ಡ್ ಕಾರ್ಡ್ ಖರೀದಿಸಿದವರಿಗೂ ಸಮಸ್ಯೆಯಾಗಿದೆ. ಅಗತ್ಯಕ್ಕಿಂತ ಹೆಚ್ಚು ಪಾಸ್ ಹೇಗೆ ವಿತರಣೆ ಆಗಿದೆ ಮತ್ತು ಎಷ್ಟು ಪಾಸ್ ಮುದ್ರಣವಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದರು.

ಮುಖ್ಯಮಂತ್ರಿ ಆಗಮನಕ್ಕಾಗಿ ಉಪಮುಖ್ಯಮಂತ್ರಿಗಳನ್ನು ಮುಕ್ಕಾಲು ಗಂಟೆ ಕಾಯಿಸುವುದು ಸರಿ ಯಾದ ಬೆಳವಣಿಗೆ ಅಲ್ಲ. ಗೃಹ ಸಚಿವರೂ ಆದ ಉಪಮುಖ್ಯಮಂತ್ರಿಗಳಿಗೆ ಪೊಲೀಸರು ಮುಖ್ಯಮಂತ್ರಿಗಳ ಆಗಮನದ ಕುರಿತು ನಿಖರವಾದ ಮಾಹಿತಿ ನೀಡಬಹುದು. ಆದರೆ ಮುಂಚೆಯೇ ಕರೆತಂದು ನಿಲ್ಲಿಸಿ ಕಾಯಿಸಿರುವುದರ ಬಗ್ಗೆ ತನಿಖೆ ನಡೆಯಬೇಕು. ಇಂತಹ ಲೋಪಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಅಧಿಕಾರ ನಡೆಸುವಲ್ಲಿ ನಾವು ಒಂದಾಗಿದ್ದರೂ ಅದಕ್ಕೆ ಧಕ್ಕೆ ಬಾರದಂತೆ ವಿರೋಧಿಸುತ್ತೇವೆ. ನಾವು ಅಪಮಾನದ ವೇದಿಕೆಯನ್ನು ಸಹಿಸಿಕೊಳ್ಳುವುದಿಲ್ಲ ಎಂದರು. 

click me!