
ಹುಬ್ಬಳ್ಳಿ : ಸತತ ಏಳು ಬಾರಿ ಆಯ್ಕೆಯಾಗುವ ಮೂಲಕ ಮೇಲ್ಮನೆಯ ಹಿರಿಯ ಸದಸ್ಯ ಎನಿಸಿರುವ ಜೆಡಿಎಸ್‌ನ ಬಸವರಾಜ ಹೊರಟ್ಟಿಅವರು ಕಳೆದ 36 ವರ್ಷಗಳಿಂದ ವಾಸವಿರುವ ಶಾಸಕರ ಭವನ-2ರಲ್ಲಿನ ಕೊಠಡಿ (435, 436)ಗಳನ್ನು ತಕ್ಷಣ ತೆರವು ಮಾಡುವಂತೆ ಸ್ಪೀಕರ್ ಕೆ.ಬಿ.ಕೋಳಿವಾಡ ನೋಟಿಸ್ ಈಗ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. 27 ರಿಂದಲೇ ನೀತಿಸಂಹಿತೆ ಜಾರಿಯಾಗಿದ್ದರೂ ಮಾರ್ಚ್ 31ರಂದು ಹೊರಟ್ಟಿ ಅವರಿಗೆ ನೀಡಿರುವ ಈ ನೋಟಿಸಿನ ಹಿಂದೆ ರಾಜಕೀಯ ವಾಸನೆ ರಾಚುತ್ತಿದೆ ಎಂದು ಹೇಳಲಾಗಿದೆ.
ರಾಣಿಬೆನ್ನೂರು ರಾಜಕೀಯ?:
ಸ್ಪೀಕರ್ ಕೆ.ಬಿ.ಕೋಳಿವಾಡ ಹಾವೇರಿ ಜಿಲ್ಲೆ ರಾಣಿಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಶಾಸಕರು. ಈಗ ಮತ್ತೊಮ್ಮೆ ಅದೇ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಮಧ್ಯೆ ಇಲ್ಲಿ ಶ್ರೀಪಾದ ಸಾವಕಾರ ಎಂಬವರನ್ನು ಜೆಡಿಎಸ್ ತನ್ನ ಅಭ್ಯರ್ಥಿ ಎಂದು ಘೋಷಿಸಿದೆ. ಹುಬ್ಬಳ್ಳಿ ಕಿಮ್ಸ್ನಲ್ಲಿ ಹಿರಿಯ ಅಧಿಕಾರಿಯಾಗಿದ್ದ ಸಾವಕಾರ ಮತ್ತು ಕೆ.ಬಿ.ಕೋಳಿವಾಡ ಹತ್ತಿರದ ಸಂಬಂಧಿಗಳು. ಕಣದಲ್ಲಿ ಸಾವಕಾರ ಅವರನ್ನು ಎದುರಿಸುವುದು ಕಷ್ಟಎಂದು ಭಾವಿಸಿದ ಕೋಳಿವಾಡ ಅವರು, ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಹೊರಟ್ಟಿಅವರಿಗೆ ಫೋನ್ ಮಾಡಿ ಹೇಗಾದರೂ ಮಾಡಿ ಶ್ರೀಪಾದ ಸಾವಕಾರ ಅವರನ್ನು ಹಿಂದೆ ಸರಿಸಿ ಬೇರೆಯವರಿಗೆ ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದಿದ್ದರಂತೆ. ಅದರಂತೆ ಸಾವಕಾರ ಅವರನ್ನು ಹಿಂದೆ ಸರಿಸಲು ಬಸವರಾಜ ಹೊರಟ್ಟಿಪ್ರಯತ್ನಿಸಿದ್ದಾರೆ. ಆದರೆ ಸಾವಕಾರ ‘ನೀವು ನನ್ನ ಟಿಕೆಟ್ ಬದಲಿಸಿದರೂ ಪಕ್ಷೇತರ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿಯುತ್ತೇನೆ’ ಎಂದು ಕಡ್ಡಿ ಮುರಿದಂತೆ ಹೇಳಿದ್ದರಿಂದ ಹೊರಟ್ಟಿಮೌನವಾಗಿದ್ದಾರೆ. ಆದರೆ, ಹೊರಟ್ಟಿಕುಮ್ಮಕ್ಕಿನಿಂದಲೇ ಶ್ರೀಪಾದ ಸಾವಕಾರ ತಮ್ಮ ವಿರುದ್ಧ ಸ್ಪರ್ಧಿಸುತ್ತಿದ್ದಾರೆ ಎಂದು ಭಾವಿಸಿರುವ ಕೋಳಿವಾಡ ಈಗ ಹೊರಟ್ಟಿವಿರುದ್ಧ ಸೇಡಿನ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೊರಟ್ಟಿಆರೋಪಿಸಿದ್ದಾರೆ.
ರಾಜಕೀಯ ಸೇಡು
ಕೆ.ಬಿ.ಕೋಳಿವಾಡ ಅವರು ನನಗೆ ಫೋನ್ ಮಾಡಿ ‘ಸಾವಕಾರ ಸ್ಪರ್ಧೆಯಿಂದ ಸಮುದಾಯದ ಮತಗಳು ಹಂಚಿಕೆಯಾಗಿ ಬೇರೆಯವರಿಗೆ ಲಾಭವಾಗುತ್ತದೆ. ಹೇಗಾದರೂ ಮಾಡಿ ಸಾವಕಾರ ಅವರನ್ನು ಹಿಂದೆ ಸರಿಸಿ, ಬೇರೆಯವರಿಗೆ ಟಿಕೆಟ್ ನೀಡಿ’ಎಂದು ನನಗೆ ಮತ್ತು ನಮ್ಮ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದುಂಬಾಲು ಬಿದ್ದರು. ನಮ್ಮ ಪಕ್ಷ ತನ್ನ ನಿರ್ಧಾರ ಬದಲಿಸಲಿಲ್ಲ. ಹಾಗಾಗಿ ರಾಜಕೀಯ ಸೇಡು ತೀರಿಸಿಕೊಳ್ಳಲು ಈಗ ನನಗೆ ನೋಟಿಸ್ ನೀಡಿದ್ದಾರೆ. ಇದರ ವಿರುದ್ಧ ನಾನು ಹೋರಾಟ ಮಾಡುತ್ತೇನೆ.
-ಬಸವರಾಜ ಹೊರಟ್ಟಿ, ಮೇಲ್ಮನೆ ಹಿರಿಯ ಸದಸ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.