'ಕಟ್ಟಪ್ಪ' ಸೇರಿ 8 ನಟರ ಬಂಧನಕ್ಕೆ ಕೋರ್ಟ್ ಜಾಮೀನು ರಹಿತ ಆದೇಶ

By Suvarna Web DeskFirst Published May 23, 2017, 8:02 PM IST
Highlights

ಚೆನ್ನೈ'ನಲ್ಲಿ 2009ರ ಅಕ್ಟೋಬರ್ 7ರಂದು ನಡೆದಿದ್ದ ದಕ್ಷಿಣ ಭಾರತ ಸಿನಿಮಾ ಕಲಾವಿದರ ಸಂಘದ ಸಭೆಯಲ್ಲಿ ಪತ್ರಿಕೆಯೊಂದು ತಮ್ಮ ಬಗ್ಗೆ ಕೀಳು ಮಟ್ಟದ ಲೇಖನವನ್ನು ಪ್ರಕಟಿಸಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಚೆನ್ನೈ(ಮೇ.23): ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಸೇರಿದಂತೆ 8 ತಮಿಳು ಕಲಾವಿದರ ಬಂಧನಕ್ಕೆ ಊಟಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ರಹಿತ ಆದೇಶ ನೀಡಿದೆ.

ಚೆನ್ನೈ'ನಲ್ಲಿ 2009ರ ಅಕ್ಟೋಬರ್ 7ರಂದು ನಡೆದಿದ್ದ ದಕ್ಷಿಣ ಭಾರತ ಸಿನಿಮಾ ಕಲಾವಿದರ ಸಂಘದ ಸಭೆಯಲ್ಲಿ ಪತ್ರಿಕೆಯೊಂದು ತಮ್ಮ ಬಗ್ಗೆ ಕೀಳು ಮಟ್ಟದ ಲೇಖನವನ್ನು ಪ್ರಕಟಿಸಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.ಈ ಬಗ್ಗೆ ಪತ್ರಕರ್ತ ಎಂ.ರೊಜಾರಿಯೋ ಎಂಬುವವರು, ಸಿನಿಮಾ ಕಲಾವಿದರು ನಿರ್ದಿಷ್ಟ ಪತ್ರಿಕೆಯನ್ನು ದೂರುವ ಬದಲು ಎಲ್ಲ ಪತ್ರಕರ್ತರ ವಿರುದ್ಧ ಹರಿಹಾಯ್ದಿದ್ದರು' ಎಂದು ಉಲ್ಲೇಖಿಸಿ ಊಟಿ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ದೂರು ನೀಡಿದ್ದರು.

ಈ ಪ್ರಕರಣ ಸಂಬಂಧ ನಟ ಸೂರ್ಯ, ಸತ್ಯರಾಜ್‌, ಶರತ್‌ಕುಮಾರ್‌, ಸುಪ್ರಿಯಾ, ವಿಜಯ್‌ ಕುಮಾರ್‌, ಅರುಣ್‌ ವಿಜಯ್‌, ವಿವೇಕ್‌ ಹಾಗೂ ಚೇರನ್‌ ಅವರನ್ನು ಕೋರ್ಟ್'ಗೆ ಹಾಜರಾಗುವಂತೆ 2011ರ ಡಿ.19ರಂದು ನ್ಯಾಯಾಲಯ ಸೂಚನೆ ನೀಡಿತ್ತು.ಆದರೆ ಈ ಕಲಾವಿದರು ಕೋರ್ಟ್'ಗೆ ಹಾಜರಾಗಲು ನಿರಾಕರಿಸಿ ನೇರವಾಗಿ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶ ಕೇಳಿ ಮದ್ರಾಸ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಇವರ ಅರ್ಜಿಯನ್ನು ವಜಾ ಮಾಡಿತ್ತು.

ಅನಂತರ 2017ರ ಮೇ 15ರಂದು ಪ್ರಕರಣದ ವಿಚಾರಣೆ ಮತ್ತೆ ಆರಂಭವಾಗಿತ್ತು. ಪುನಃ ಕೋರ್ಟ್'ಗೆ ಯಾರು ಸಹ  ಹಾಜರಾಗಿರಲಿಲ್ಲ. ಈ ಸಂಬಂಧ ನ್ಯಾಯಾಧೀಶ ಸೆಂಥಿಲ್‌ಕುಮಾರ್‌ ರಾಜವೇಲ್‌ ಎಲ್ಲಾ ಎಂಟು ನಟರ ವಿರುದ್ಧ  ಮಂಗಳವಾರ ಜಾಮೀನು ರಹಿತ ಬಂಧನಕ್ಕೆ ಆದೇಶಿಸಿದ್ದಾರೆ.

click me!