ನಿವೃತ್ತ ಸಿಆರ್'ಪಿಎಫ್ ಅಧಿಕಾರಿಗೆ ಪ್ರವೇಶ ನಿರಾಕರಿಸಿದ ಕೆನಡಾ ದೇಶ

By Suvarna Web DeskFirst Published May 23, 2017, 6:23 PM IST
Highlights

ತೇಜಿಂಗ್ ಸಿಂಗ್ ಅವರು ಕಳೆದ 30 ವರ್ಷಗಳಿಂದ ಕೆನಡಾಗೆ ಸಾಕಷ್ಟು ಬಾರಿ ಹೋಗಿ ಬಂದಿದ್ದಾರೆ. ಅವರಿಗೆ ಇಂಥ ಅನುಭವ ಹಿಂದೆಂದೂ ಆಗಿರಲಿಲ್ಲವಂತೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಹುಶಃ ಯಾವ ಸೇನಾಧಿಕಾರಿ ಅಥವಾ ಸಿಆರ್'ಪಿಎಫ್ ಅಧಿಕಾರಿಗೆ ಇಂಥ ಅವಮಾನವಾಗಿದ್ದು ಇದೇ ಮೊದಲಿರಬೇಕು.

ನವದೆಹಲಿ(ಮೇ 23): ಭಾರತದ ಮೀಸಲು ಪೊಲೀಸ್ ಪಡೆಯಿಂದ ಭಾರೀ ಅತ್ಯಾಚಾರ, ಅನಾಚಾರ, ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ನಿವೃತ್ತ ಸಿಆರ್'ಪಿಎಫ್ ಅಧಿಕಾರಿಗೆ ಕೆನಡಾ ದೇಶ ಪ್ರವೇಶ ನಿರಾಕರಿಸಿದ ಘಟನೆ ಬೆಳಕಿಗೆ ಬಂದಿದೆ. ಸಿಆರ್'ಪಿಎಫ್'ನ ನಿವೃತ್ತ ಐಜಿಪಿಯಾಗಿದ್ದ ತೇಜಿಂದರ್ ಸಿಂಗ್ ಧಿಲ್ಲೋನ್ ಅವರು ಮೇ 18ರಂದು ವಾಂಕೂವರ್ ಏರ್'ಪೋರ್ಟ್'ಗೆ ಕಾಲಿಟ್ಟಾಗ ಈ ಘಟನೆ ನಡೆದಿದೆ. ಕೆನಡಾದ ವಲಸೆ ಮತ್ತು ನಿರಾಶ್ರಿತರ ರಕ್ಷಣೆ ಕಾಯ್ದೆಯ ನಿಯಮದ ನೆಪವೊಡ್ಡಿ ಧಿಲ್ಲೋನ್ ಅವರನ್ನು ಏರ್'ಪೋರ್ಟ್ ಅಧಿಕಾರಿಗಳು ತಡೆದಿದ್ದಾರೆ.

ಭಾರತ ಸರಕಾರವನ್ನೂ ಬಿಡಲಿಲ್ಲ:
ತೇಜಿಂದರ್ ಸಿಂಗ್ ಅವರು ವಾಂಕೂವರ್ ವಿಮಾನ ನಿಲ್ದಾಣಕ್ಕೆ ಕಾಲಿಟ್ಟಾಗ ವಲಸೆ ಅಧಿಕಾರಿಗಳು ಮೊದಲು ದೂಷಣೆ ಮಾಡಿದ್ದ ಭಾರತ ಸರಕಾರದ ವಿರುದ್ಧವೇ. ತಾವು ಸೇವೆ ಸಲ್ಲಿಸಿದ ಸರಕಾರವು ಭಯೋತ್ಪಾದನೆಯಲ್ಲಿ ತೊಡಗುತ್ತಿದೆ; ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ; ನರಹತ್ಯೆ ಮಾಡುತ್ತಿದೆ ಎಂದು ಆರೋಪಗಳನ್ನ ಮಾಡಿದೆ. ಆದರೆ, ಸ್ವಲ್ಪ ಸಮಯದ ಬಳಿಕ ಕೆನಡಾದ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ಸ್ವಲ್ಪ ಬದಲಾವಣೆ ತಂದು ಮತ್ತೊಂದು ಹೇಳಿಕೆ ನೀಡಿದರು. ಅದರ ಪ್ರಕಾರ, ತೇಜಿಂದರ್ ಕಾರ್ಯನಿರ್ವಹಿಸಿದ ಸಿಆರ್'ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ) ಪಡೆ ಬಹಳಷ್ಟು ವ್ಯವಸ್ಥಿತವಾಗಿ ಮಾನವ ಹಕ್ಕು ಉಲ್ಲಂಘನೆ ಮಾಡಿದೆ. ಅಮಾಯಕ ಜನರಿಗೆ ಹಿಂಸೆ; ಅನಗತ್ಯ ಬಂಧನ; ಕೊಲೆ ಮತ್ತು ಲೈಂಗಿಕ ಹಲ್ಲೆ ನಡೆಸಿದೆ.

ಕೊನೆಗೆ ನಿವೃತ್ತ ಸಿಆರ್'ಪಿಎಫ್ ಅಧಿಕಾರಿ ಕೆನಡಾದೊಳಗೆ ಪ್ರವೇಶ ನಿರಾಕರಿಸಿ ವಾಪಸ್ ಕಳುಹಿಸಲಾಯಿತು. ತೇಜಿಂಗ್ ಸಿಂಗ್ ಅವರು ಕಳೆದ 30 ವರ್ಷಗಳಿಂದ ಕೆನಡಾಗೆ ಸಾಕಷ್ಟು ಬಾರಿ ಹೋಗಿ ಬಂದಿದ್ದಾರೆ. ಅವರಿಗೆ ಇಂಥ ಅನುಭವ ಹಿಂದೆಂದೂ ಆಗಿರಲಿಲ್ಲವಂತೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಹುಶಃ ಯಾವ ಸೇನಾಧಿಕಾರಿ ಅಥವಾ ಸಿಆರ್'ಪಿಎಫ್ ಅಧಿಕಾರಿಗೆ ಇಂಥ ಅವಮಾನವಾಗಿದ್ದು ಇದೇ ಮೊದಲಿರಬೇಕು.

ಸಿಆರ್'ಪಿಎಫ್ ಬಗ್ಗೆ ಗೊತ್ತಿಲ್ಲವಾ?
ಭಾರತದ ಸಿಆರ್'ಪಿಎಫ್ ಪಡೆ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ದೇಶಕ್ಕೆ ಆಂತರಿಕವಾಗಿ ಭದ್ರತೆ ಒದಗಿಸುತ್ತಿದೆ. ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್'ಗಢದಂಥ ಕಟ್ಟರ್ ನಕ್ಸಲ್ ಪ್ರದೇಶಗಳಲ್ಲಿ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿದೆ. ಕಾಶ್ಮೀರದಲ್ಲೂ ಇವರ ಸೇವೆ ಅನನ್ಯವಾದುದು. ಕಡಿಮೆ ಸಂಬಳ, ಸರಿಯಾದ ಆಯುಧ ಪರಿಕರಗಳಿಲ್ಲದಿದ್ದರೂ ಈ ಪೊಲೀಸರು ದೇಶಕ್ಕೋಸ್ಕರ ಮಾಡುತ್ತಿರುವ ಸೇವೆ ಯಾರಿಗೆ ತಿಳಿದಿಲ್ಲ. ಎಲ್ಲಿಯೋ ಅಪರೂಪಕ್ಕೆ ನಡೆಯುವ ಕೆಲ ಘಟನೆಗಳನ್ನು ಮುಂದಿಟ್ಟುಕೊಂಡು ಇಡೀ ಸಿಆರ್'ಪಿಎಫ್'ಗೆ ಮಸಿ ಬಳಿಯುವ ಪ್ರಯತ್ನ ಆಗಾಗ ನಡೆಯುತ್ತಿರುತ್ತದೆ.

ಅಷ್ಟಕ್ಕೂ, ಭಾರತ ಸರಕಾರ ಮತ್ತು ಇಲ್ಲಿಯ ಸೇನೆಯ ಬಗ್ಗೆ ಕೆನಡಾ ದೇಶದಲ್ಲಿ ಇಂಥ ಹೀನ ಅಭಿಪ್ರಾಯ ಹೇಗೆ ಮೂಡಿತು ಎಂಬುದು ಗೊತ್ತಿಲ್ಲ. ಕೆನಡಾದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

click me!