ಜಿಲ್ಲಾಧ್ಯಕ್ಷರಿಗೆ, ರಾಜ್ಯಧ್ಯಕ್ಷರಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಇಲ್ಲ

Published : Jan 01, 2018, 10:48 AM ISTUpdated : Apr 11, 2018, 12:58 PM IST
ಜಿಲ್ಲಾಧ್ಯಕ್ಷರಿಗೆ, ರಾಜ್ಯಧ್ಯಕ್ಷರಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಇಲ್ಲ

ಸಾರಾಂಶ

ಕರ್ನಾಟಕ ಸೇರಿದಂತೆ 8 ರಾಜ್ಯಗಳು 2018ರಲ್ಲಿ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಹೊತ್ತಿನಲ್ಲೇ, ಆ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರು ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಶಾಕ್ ನೀಡಿದ್ದಾರೆ.

ನವದೆಹಲಿ (ಜ.1): ಕರ್ನಾಟಕ ಸೇರಿದಂತೆ 8 ರಾಜ್ಯಗಳು 2018ರಲ್ಲಿ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಹೊತ್ತಿನಲ್ಲೇ, ಆ ರಾಜ್ಯದ ಕಾಂಗ್ರೆಸ್ ಅಧ್ಯಕ್ಷರು ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಶಾಕ್ ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಸಂಸತ್ ಚುನಾವಣೆ ವೇಳೆ ಪಕ್ಷದ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರಿಗೆ ಚುನಾವಣಾ ಟಿಕೆಟ್ ನಿರಾಕರಿಸುವ ಪ್ರಸ್ತಾಪವನ್ನು ರಾಹುಲ್ ಗಾಂಧಿ ಮುಂದಿಟ್ಟಿದ್ದಾರೆ.

ಇದು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಚುನಾವಣಾ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಪಕ್ಷದ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರಿಗೆ ಶಾಕ್ ನೀಡಿದೆ. ಈ ಹಿಂದೆ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವೇಳೆಯೂ ರಾಹುಲ್ ಗಾಂಧಿ ಇಂಥದ್ದೊಂದು ಪ್ರಸ್ತಾಪ ಮುಂದಿಟ್ಟಿದ್ದರು.

ಆದರೆ ಇದಕ್ಕೆ ಪಕ್ಷದ ಹಲವು ರಾಜ್ಯ ಘಟಕಗಳ ಅಧ್ಯಕ್ಷರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಯಲ್ಲಿ ಅವರು ಪ್ರಸ್ತಾಪ ಕೈಬಿಟ್ಟಿದ್ದರು. ಆದರೆ ಇದೀಗ ಗುಜರಾತ್ ಚುನಾವಣಾ ಫಲಿತಾಂಶವನ್ನು ಪರಾಮರ್ಶಿಸಿದ ವೇಳೆ ಕಂಡಬಂದ ಅಂಶವೊಂದು, ರಾಹುಲ್‌ರನ್ನು ಮತ್ತೆ ಹಳೆಯ ಪ್ರಸ್ತಾಪಕ್ಕೆ ಜೀವ ತುಂಬುವಂತೆ ಮಾಡಿದೆ. ಹಿಂದೆ ತಾವು ಮಾಡಿದ್ದ ಪ್ರಸ್ತಾಪ ಜಾರಿಗೆ ಬಂದಿದ್ದೇ ಆಗಿದ್ದಲ್ಲಿ, ಮಹತ್ವದ ಗುಜರಾತ್ ಫಲಿತಾಂಶ ತಮ್ಮ ಕಡೆಗೆ ಒಲಿಯುವುದು ಶತಃಸಿದ್ಧವಾಗಿತ್ತು ಎಂಬುದನ್ನು ಮನನ ಮಾಡಿ ಕೊಂಡಿರುವ ರಾಹುಲ್, ಈ ಬಾರಿ ಪ್ರಸ್ತಾಪವನ್ನು ಜಾರಿಗೆ ತರಲು ಮುನ್ನುಡಿ ಇಟ್ಟಿದ್ದಾರೆ.

ಪ್ರಸ್ತಾಪ ಮಂಡನೆ: ಎರಡು ದಿನ ಹಿಂದೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಉಸ್ತುವಾರಿ ಹೊತ್ತಿರುವ ಹಲವು ಹಿರಿಯ ನಾಯಕರ ಜೊತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಭೆಯೊಂದನ್ನು ನಡೆಸಿದ್ದರು. ಈ ಸಭೆಯಲ್ಲಿ, ಪಕ್ಷದ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಟಿಕೆಟ್ ನಿರಾಕರಿಸುವ ಪ್ರಸ್ತಾಪವನ್ನು ರಾಹುಲ್ ಗಾಂಧಿ ಮಂಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ನಾಯಕರಿಂದ ಅಭಿಪ್ರಾಯವನ್ನೂ ಆಹ್ವಾನಿಸಿದ್ದಾರೆ.

ಕೈತಪ್ಪಿದ ಗುಜರಾತ್: ಸಭೆಯಲ್ಲಿ ಭಾಗವಹಿಸಿದ್ದ ರಾಹುಲ್, ‘ಗುಜರಾತ್ ಚುನಾವಣಾ ಪ್ರಚಾರದ ವೇಳೆ ಸಮನ್ವಯದ ಕೊರತೆಯನ್ನು ನಾನು ಪ್ರಮುಖವಾಗಿ ಗಮನಿಸಿದ್ದೇನೆ. ರಾಜ್ಯ ಘಟಕದ ಅಧ್ಯಕ್ಷರು ಮತ್ತು ಹಲವು ಜಿಲ್ಲಾ ಘಟಕಗಳ ಅಧ್ಯಕ್ಷರು, ತಮ್ಮ ಗಮನವನ್ನು ಪೂರ್ಣವಾಗಿ ತಾವು ಸ್ಪರ್ಧಿಸಿದ್ದ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದ್ದರು. ಇದು ಒಟ್ಟಾರೆ ಚುನಾವಣಾ ಪ್ರಚಾರ ಮತ್ತು ಕಾರ್ಯತಂತ್ರದ ಮೇಲೆ ಪರಿಣಾಮ ಬೀರಿತ್ತು. ರಾಜ್ಯ ಮತ್ತು ಜಿಲ್ಲಾ ಘಟಕಗಳ ನಡುವೆ ಸಮನ್ವಯದ ಕೊರತೆ ಎದ್ದುಕಾಣುತ್ತಿತ್ತು.

ಒಂದು ವೇಳೆ ಸಮನ್ವಯ ಸಾಧ್ಯವಾಗಿದ್ದೇ ಆಗಿದ್ದಲ್ಲಿ, ನಾವು ಇನ್ನೂ ಕನಿಷ್ಠ 10 ಸ್ಥಾನ ಗೆದ್ದು, ಅಧಿಕಾರಕ್ಕೆ ಏರುವ ಎಲ್ಲಾ ಸಾಧ್ಯತೆಗಳಿದ್ದವು. ಜೊತೆಗೆ ಗುಜರಾತ್ ಚುನಾವಣೆಯ ಫಲಿತಾಂಶದ ಪರಾಮರ್ಶೆ ವೇಳೆಯೂ ಸಮನ್ವಯದ ಕೊರತೆಯನ್ನು ನಾನು ಕಂಡುಕೊಂಡಿದ್ದೇನೆ. ಹೀಗಾಗಿ ಮುಂದಿನ ಚುನಾವಣೆಗಳ ವೇಳೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಮತ್ತು ಜಿಲ್ಲಾ ಘಟಕದ ಅಧ್ಯಕ್ಷರು ಚುನಾವಣೆಗೆ ಸ್ಪರ್ಧಿಸಿದಂತೆ ಮಾಡಬೇಕು ಎನ್ನುವುದು ನನ್ನ ಪ್ರಸ್ತಾಪ’ ಎಂದು ರಾಹುಲ್ ಹೇಳಿದ್ದಾರೆ.

ಆರ್‌ಎಸ್‌ಎಸ್ ಮೆಚ್ಚಿದ ರಾಹುಲ್: ಇದೇ ವೇಳೆ ಚುನಾವಣೆ ಸಮಯದಲ್ಲಿ ಬಿಜೆಪಿ ಮತ್ತು ಆರ್‌ಎಸ್ ಎಸ್ ನಡುವಣ ಸಮನ್ವಯವನ್ನು ಸಭೆಯಲ್ಲಿ ರಾಹುಲ್ ಮೆಚ್ಚಿಕೊಂಡರು ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!