ಏಕರೂಪ ನಾಗರಿಕ ಸಂಹಿತೆ ಪರ ಸುಪ್ರೀಂ ಬ್ಯಾಟಿಂಗ್| ಸಂಹಿತೆ ತರಲು ಸರ್ಕಾರಗಳು 63 ವರ್ಷದಿಂದ ಕ್ರಮ ಕೈಗೊಂಡಿಲ್ಲ| 370ನೇ ವಿಧಿ ರದ್ದುಗೊಳಿಸಿದ ಕೇಂದ್ರ ಸರ್ಕಾರಕ್ಕೆ ಹೊಸ ಅಸ್ತ್ರ?
ನವದೆಹಲಿ[ಸೆ.15]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ 370ನೇ ವಿಧಿಯನ್ನು ನಿಷ್ಕಿ್ರಯಗೊಳಿಸುವ ಮೂಲಕ ಪಕ್ಷದ ದಶಕಗಳ ಭರವಸೆಯನ್ನು ಈಡೇರಿಸಿರುವ ಕೇಂದ್ರ ಸರ್ಕಾರದ ಮುಂದಿನ ಗುರಿ ಏಕರೂಪ ನಾಗರಿಕ ಸಂಹಿತೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಈ ಸಂದರ್ಭದಲ್ಲೇ ಏಕರೂಪ ನಾಗರಿಕ ಸಂಹಿತೆಯ ಪರ ಸುಪ್ರೀಂಕೋರ್ಟ್ ಬ್ಯಾಟ್ ಬೀಸಿದೆ. ಹೀಗಾಗಿ ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಇಡಬಹುದು ಎಂಬ ವಾದಕ್ಕೆ ಮತ್ತಷ್ಟುಪುಷ್ಟಿಸಿಕ್ಕಂತಾಗಿದೆ.
ಸಂವಿಧಾನದ 44ನೇ ಪರಿಚ್ಛೇದದಡಿ ಏಕರೂಪ ನಾಗರಿಕ ಸಂಹಿತೆಯನ್ನು ತರಬೇಕಾಗಿದ್ದ ಸರ್ಕಾರಗಳು ವಿಫಲವಾಗಿವೆ. 1956ರಲ್ಲಿ ರೂಪುಗೊಂಡ ಹಿಂದು ಕಾನೂನಿನಡಿ ನಾಗರಿಕ ಸಂಹಿತೆ ಎಂಬುದು 63 ವರ್ಷಗಳು ಉರುಳಿದರೂ ಅನುಷ್ಠಾನವಾಗಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತೀವ್ರ ಬೇಸರ ವ್ಯಕ್ತಪಡಿಸಿದೆ.
ಗೋವನ್ನರ ಪಿತ್ರಾರ್ಜಿತ ಆಸ್ತಿ ರಾಜ್ಯದಿಂದ ಹೊರಗಿದ್ದರೂ 1867ರ ಪೋರ್ಚುಗೀಸ್ ನಾಗರಿಕ ಸಂಹಿತೆಯ ನಿಯಂತ್ರಣಕ್ಕೆ ಒಳಪಡುತ್ತದೆ ಎಂದು ಘೋಷಿಸುವ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆ ವಿಚಾರವನ್ನೂ ನ್ಯಾಯಾಲಯ ಪ್ರಸ್ತಾಪಿಸಿದೆ.
ಧರ್ಮಾತೀತವಾಗಿ ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆಯನ್ನು ಹೊಂದಿರುವ ಭಾರತೀಯ ರಾಜ್ಯವಾದ ಗೋವಾ ಉಜ್ವಲ ಉದಾಹರಣೆ. ಗೋವಾದಲ್ಲಿ ವಿವಾಹ ನೋಂದಣಿ ಮಾಡಿಸಿಕೊಳ್ಳುವ ಮುಸ್ಲಿಂ ವ್ಯಕ್ತಿ ಬಹುಪತ್ನಿಯರನ್ನು ಹೊಂದುವಂತಿಲ್ಲ. ಇಸ್ಲಾಂ ಅನುಯಾಯಿಗಳಿಗೂ ತ್ರಿವಳಿ ತಲಾಖ್ ಹೇಳುವ ಅವಕಾಶವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಸಂವಿಧಾನದ ಪರಿಚ್ಛೇದ 44, ಭಾಗ 4ರ ಅನುಸಾರ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕಿತ್ತು. ಆದರೆ ಈ ನಿಟ್ಟಿನಲ್ಲಿ ಈವರೆಗೆ ಯಾವುದೇ ಪ್ರಯತ್ನಗಳು ನಡೆದಿಲ್ಲ. 1956ರಲ್ಲಿ ಹಿಂದು ಕಾನೂನುಗಳನ್ನು ರೂಪಿಸಲಾಯಿತು. ಆದರೆ ದೇಶದ ಎಲ್ಲ ನಾಗರಿಕರಿಗೂ ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆ ರೂಪಿಸುವ ಪ್ರಯತ್ನಗಳು ನಡೆದಿಲ್ಲ ಎಂದು ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಹಾಗೂ ಅನಿರುದ್ಧ ಬೋಸ್ ಅವರಿದ್ದ ಪೀಠ ಹೇಳಿದೆ.