
ಬೆಂಗಳೂರು[ಜೂ.18]: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ನಾಲ್ಕು ದಿನ ಕಳೆದರೂ ಆರ್.ಶಂಕರ್ ಮತ್ತು ಎಚ್.ನಾಗೇಶ್ ಅವರಿಗೆ ಖಾತೆ ಭಾಗ್ಯ ಸಿಕ್ಕಿಲ್ಲ. ಕಳೆದ ಶುಕ್ರವಾರ ಪಕ್ಷೇತರ ಶಾಸಕರಾದ ಶಂಕರ್ ಮತ್ತು ನಾಗೇಶ್ ಅವರು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಖಾತೆ ಹಂಚಿಕೆ ವಿಳಂಬಕ್ಕೆ ನಿರ್ದಿಷ್ಟಕಾರಣಗಳು ತಿಳಿದುಬಂದಿಲ್ಲ.
ಶಂಕರ್ ಅವರಿಗೆ ಕಾಂಗ್ರೆಸ್ ಪಾಲಿಗಿರುವ ಪೌರಾಡಳಿತ ಖಾತೆ ಹಾಗೂ ನಾಗೇಶ್ ಅವರಿಗೆ ಜೆಡಿಎಸ್ ಪಾಲಿಗಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆಗಳನ್ನು ನೀಡಬಹುದು ಎಂಬ ಮಾತು ಕೇಳಿಬಂದಿತ್ತು. ಆದರೆ, ಇದೀಗ ವಿಳಂಬವಾಗುತ್ತಿರುವುದನ್ನು ಗಮನಿಸಿದರೆ ಖಾತೆಗಳಲ್ಲಿ ಬದಲಾವಣೆ ತರುವ ಉದ್ದೇಶ ಇರಬಹುದು ಎಂಬ ಮಾತು ಕೇಳಿಬರುತ್ತಿದೆ. ಆದರೂ, ಇನ್ನೆರಡು ದಿನಗಳಲ್ಲಿ ಹಂಚಿಕೆಯಾಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.
ಶುಕ್ರವಾರ ಪ್ರಮಾಣ ಸ್ವೀಕರಿಸಿದ ದಿನ ಸಂಜೆಯೇ ಖಾತೆ ಹಂಚಿಕೆಯಾಗಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಆ ದಿನ ರಾತ್ರಿಯೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದರು. ಖಾತೆ ಹಂಚಿಕೆ ಮಾಡುವ ಉದ್ದೇಶವಿದ್ದಿದ್ದರೆ ಶನಿವಾರವೂ ಮಾಡಬಹುದಿತ್ತು. ಆದರೆ, ಹಾಗಾಗಲಿಲ್ಲ.
ಭಾನುವಾರ ಮಧ್ಯಾಹ್ನ ಕುಮಾರಸ್ವಾಮಿ ಅವರು ದೆಹಲಿಯಿಂದ ವಾಪಸಾದರು. ಆದರೆ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ಬಗ್ಗೆ ನಿರ್ಧಾರ ಕೈಗೊಂಡು ಆದೇಶವನ್ನೂ ಹೊರಡಿಸಿದರು. ನೂತನ ಸಚಿವರಿಗೆ ಖಾತೆ ಹಂಚಿಕೆ ಆಗಲೇ ಇಲ್ಲ. ಸೋಮವಾರ ಕುಮಾರಸ್ವಾಮಿ ಅವರು ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಜನತಾ ದರ್ಶನ ನಡೆಸಿದರು. ಮಂಗಳವಾರವೂ ಅದು ಮುಂದುವರೆಯಲಿದೆ.
ಹೀಗಾಗಿ, ಮಂಗಳವಾರ ಸಂಜೆ ಅಥವಾ ಬುಧವಾರದ ವೇಳೆ ನೂತನ ಸಚಿವರಿಬ್ಬರ ಖಾತೆ ಹಂಚಿಕೆಯಾಗಬಹುದು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.