ಇನ್ನು ಬೆಂಗಳೂರಿನಲ್ಲೂ ಬಾಡಿಗೆ ಸೈಕಲ್ ಟ್ರಿಣ್ ಟ್ರಿಣ್ ಲಭ್ಯ

By Web DeskFirst Published Jun 18, 2019, 9:45 AM IST
Highlights

ಸಾಂಸ್ಕೃತಿಕ ನಗರಿ ಮೈಸೂರಿನಂತೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಪ್ರವಾಸೋದ್ಯಮ- ತೋಟಗಾರಿಕೆ ಇಲಾಖೆಗಳ ಸಹಭಾಗಿತ್ವದಲ್ಲಿ ಬಾಡಿಗೆ ಸೈಕಲ್‌ ಸೇವೆ ಆರಂಭವಾಗುತ್ತಿದೆ. ನಾಳೆ ಕಬ್ಬನ್ ಪಾರ್ಕಿನಲ್ಲಿ ಈ ಸೇವೆಗೆ ಚಾಲನೆ ಸಿಗಲಿದ್ದು, ಇದರ ರೂಪು ರೇಷೆಗಳೇನು? ಓದಿ...

 ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು ನಗರದಲ್ಲಿ ‘ಸೈಕಲ್‌ ಪ್ರವಾಸೋದ್ಯಮ’ ಉತ್ತೇಜಿಸುವ ಸಲುವಾಗಿ ಮೈಸೂರು ನಗರದ ಮಾದರಿಯಲ್ಲಿಯೇ ಆ್ಯಪ್‌ ಆಧಾರಿತ ‘ಬಾಡಿಗೆ ಸೈಕಲ್‌’ ಸೇವೆ ಪ್ರಾರಂಭವಾಗುತ್ತಿದೆ.

ಮೈಸೂರು ನಗರಕ್ಕೆ ಬರುವ ಪ್ರವಾಸಿಗರಿಗಾಗಿ ‘ಟ್ರಿಣ್‌ ಟ್ರಿಣ್‌’ ಹೆಸರಿನಲ್ಲಿ ಬಾಡಿಗೆ ಸೈಕಲ್‌ ಸೇವೆ ಪ್ರಾರಂಭಿಸಲಾಗಿತ್ತು. ಇದೀಗ ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಮತ್ತು ತೋಟಗಾರಿಕೆ ಇಲಾಖೆಗಳ ಸಹಭಾಗಿತ್ವದಲ್ಲಿ ‘ನಮ್ಮ ನಿಮ್ಮ ಸೈಕಲ್‌’ ಹೆಸರಿನಲ್ಲಿ ಬಾಡಿಗೆ ಸೈಕಲ್‌ ಸೇವೆ ಪ್ರಾರಂಭವಾಗುತ್ತಿದ್ದು, ಜೂ.19 (ಬುಧವಾರ)ರಿಂದ ಚಾಲನೆ ದೊರೆಯಲಿದೆ.

ಪಾಶ್ಚಿಮಾತ್ಯ ದೇಶಗಳಾದ ಅಮೆರಿಕ, ಯುರೋಪ್‌ಗಳಲ್ಲಿ ಸೈಕಲ್‌ ಪ್ರವಾಸೋದ್ಯಮಕ್ಕೆ ಹೆಚ್ಚು ಬೇಡಿಕೆ ಇದೆ. ಅಲ್ಲದೆ, ಸೈಕಲ್‌ ಸೇವೆಯಿಂದ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುವ ಜತೆಗೆ ಆದಾಯವನ್ನೂ ಪಡೆಯುತ್ತಿದ್ದಾರೆ. ಅದೇ ರೀತಿಯಲ್ಲಿ ನಮ್ಮಲ್ಲೂ ಸೈಕಲ್‌ ಸೇವೆ ಪರಿಚಯ ಮಾಡಲಾಗುತ್ತಿದೆ. ಇದರಿಂದಾಗಿ ಕಬ್ಬನ್‌ ಉದ್ಯಾನ ಮತ್ತು ಸುತ್ತಲ ಐದು ಕಿಲೋಮೀಟರ್‌ ಪ್ರದೇಶದಲ್ಲಿ ಸೈಕಲ್‌ ಮೂಲಕ ಓಡಾಡಲು ಸಾರ್ವಜನಿಕರಿಗೆ ನೆರವಾಗಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಡ್ಸನ್‌ ಪ್ರವೇಶದ್ವಾರಕ್ಕೆ ಹೊಸ ಸ್ಪರ್ಶ:

ಕಬ್ಬನ್‌ ಉದ್ಯಾನದ ಹೈಕೋರ್ಟ್‌ ಬಳಿಯ ಪ್ರವೇಶ ದ್ವಾರದ ಮಾದರಿಯಲ್ಲಿ ಹಡ್ಸನ್‌ ವೃತ್ತದ ಬಳಿಯ ಪ್ರವೇಶ ದ್ವಾರ ನಿರ್ಮಾಣ ಮಾಡಲಾಗಿದೆ. .40 ಲಕ್ಷ ವೆಚ್ಚದಲ್ಲಿ ಕಳೆದ 10 ತಿಂಗಳಿಂದ ದ್ವಾರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದೀಗ ಪೂರ್ಣಗೊಂಡಿದೆ. ಸೈಕಲ್‌ ಸೇವೆ ಹಾಗೂ ಉದ್ಯಾನದ ದ್ವಾರದ ಉದ್ಘಾಟನಾ ಕಾರ್ಯಕ್ರಮವನ್ನು ಒಂದೇ ದಿನ ಹಮ್ಮಿಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸೈಕಲ್‌ನಲ್ಲಿಯೇ ದೇಶ ಸುದ್ದಿದ ಯುವಕ

ಗುರುತಿನ ಚೀಟಿ ಕಡ್ಡಾಯ:

ಬಾಡಿಗೆ ಸೈಕಲ್‌ಗಳನ್ನು ನಿಲ್ಲಿಸಲು ಅಗತ್ಯವಿರುವ ಸ್ಥಳಾವಕಾಶವನ್ನು ತೋಟಗಾರಿಕೆ ಇಲಾಖೆ ಒದಗಿಸುತ್ತಿದೆ. ಅಲ್ಲದೆ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಸೈಕಲ್‌ ಸ್ಟ್ಯಾಂಡ್‌ ನಿರ್ಮಿಸಿ ಕೊಡಲಾಗುತ್ತಿದೆ ಎಂದು ನಮ್ಮ ನಿಮ್ಮ ಸೈಕಲ್‌ ಫೌಂಡೇಷನ್‌ನ ಮುಖ್ಯಸ್ಥೆ ಮುರಳಿ ಮಾಹಿತಿ ನೀಡಿದ್ದಾರೆ.

ಬಾಡಿಗೆ ಸೈಕಲ್‌ ಸೌಲಭ್ಯ ಕಲ್ಪಿಸುವ ಸಲುವಾಗಿ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಲಾಗುತ್ತಿದ್ದು, ಇನ್ನು ಒಂದು ತಿಂಗಳು ವಿಳಂಬವಾಗಲಿದೆ. ಆದರೆ, ತಕ್ಷಣ ಸೈಕಲ್‌ ಸೇವೆ ಪಡೆದುಕೊಳ್ಳುವವರು ಪ್ಯಾನ್‌ಕಾರ್ಡ್‌, ಆಧಾರ ಕಾರ್ಡ್‌ ಸೇರಿದಂತೆ ಸರ್ಕಾರದಿಂದ ನೀಡಿರುವ ಯಾವುದಾದರೂ ಗುರುತಿನ ಚೀಟಿ ನೀಡಬೇಕು. ಅಲ್ಲದೆ, ಮೊಬೈಲ್‌ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ಒಂದು ವೇಳೆ ಸೈಕಲ್‌ ಕಳೆದು ಹೋದಲ್ಲಿ ಗುರುತಿನ ಚೀಟಿ ಮತ್ತು ದೂರವಾಣಿ ಸಂಖ್ಯೆ ಆಧರಿಸಿ ಪೊಲೀಸರಿಗೆ ದೂರು ನೀಡಿ ಸೈಕಲ್‌ನ ಸಂಪೂರ್ಣ ಮೊತ್ತ ವಸೂಲಿ ಮಾಡಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ಪರಿಸರ ರಕ್ಷಣೆ ಮತ್ತು ಸೈಕಲ್‌ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಇದೇ ಮೊದಲ ಬಾರಿ ‘ನಮ್ಮ ನಿಮ್ಮ ಸೈಕಲ್‌ ಫೌಂಡೇಷನ್‌’ ಸಹಯೋಗದಲ್ಲಿ ನಗರದಲ್ಲಿ ಬಾಡಿಗೆ ಸೈಕಲ್‌ ಸೇವೆ ಪ್ರಾರಂಭಿಸಲಾಗುತ್ತಿದೆ. ಈ ಸೇವೆ ಜೂ.19ರಂದು ಲೋಕಾರ್ಪಣೆಯಾಗಲಿದ್ದು, ಸಾರ್ವಜನಿಕರಿಗೆ ಸೈಕಲ್‌ಗಳು ಲಭ್ಯವಾಗಲಿವೆ.

-ಮಹಾಂತೇಶ್‌ ಮುರಗೋಡ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು (ಕಬ್ಬನ್‌ ಪಾರ್ಕ್).

click me!