1, 2 ನೇ ಕ್ಲಾಸಲ್ಲಿ ಹೋಂವರ್ಕ್ ನೀಡಿದರೆ ಶಾಲೆ ಮಾನ್ಯತೆ ರದ್ದು

By Shrilakshmi ShriFirst Published Jun 2, 2019, 8:18 AM IST
Highlights

ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಮನೆಗೆಲಸ (ಹೋಂವರ್ಕ್) ನೀಡಿದರೆ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

ಬೆಂಗಳೂರು (ಜೂ. 02): ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಮನೆಗೆಲಸ (ಹೋಂವರ್ಕ್) ನೀಡಿದರೆ ಶಾಲೆಗಳ ಮಾನ್ಯತೆಯನ್ನೇ ರದ್ದುಪಡಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

2019- 20 ನೇ ಶೈಕ್ಷಣಿಕ ಸಾಲಿನಿಂದ ಹೋಂವರ್ಕ್ ನೀಡಬಾರದು ಎಂದು ಮೇ 3 ರಂದು ಈಗಾಗಲೇ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶ ಹೊರಡಿಸಿದ್ದ ಸಮಯದಲ್ಲಿ ಖಾಸಗಿ ಹಾಗೂ ಅನುದಾನಿತ ಶಾಲೆಗಳು ಹೋಂವರ್ಕ್ ನೀಡುವ ವಿಷಯದಲ್ಲಿ ಸರ್ಕಾರದ ಆದೇಶಕ್ಕೆ ಸಡ್ಡು ಹೊಡೆದಿದ್ದವು. ಹೀಗಾಗಿ, ಮತ್ತೊಮ್ಮೆ ಶಾಲೆಗಳಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ.

ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡುವ ಹಾಗೂ 1 ರಿಂದ 5 ನೇ ತರಗತಿ ಮಕ್ಕಳಿಗೆ ಎನ್ ಸಿಇಆರ್‌ಟಿ ನಿಗದಿಪಡಿಸಿದ ಪಠ್ಯ ಹೊರತುಪಡಿಸಿ ಇನ್ಯಾವುದೋ ಪಠ್ಯ ಬೋಧನೆ ಮಾಡುವ ಶಾಲೆಗಳ ಮಾನ್ಯತೆ ರದ್ದು ಪಡಿಸಬಹುದು ಎಂದು ಸೂಚಿಸಿ ಸರ್ಕಾರ ಮೇ 31 ರಂದು ಪರಿಷ್ಕೃತ ಆದೇಶ ಹೊರಡಿಸಿದೆ.

ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಭಾಷೆ ಮತ್ತು ಗಣಿತ ವಿಷಯ, 3 ರಿಂದ 5 ನೇ ತರಗತಿ ಮಕ್ಕಳಿಗೆ ಭಾಷೆ, ಪರಿಸರ ವಿಜ್ಞಾನ ಹಾಗೂ ಗಣಿತ ಹೊರತುಪಡಿಸಿ ಇನ್ಯಾವುದೇ ಪಠ್ಯಕ್ರಮವನ್ನು ನಿಗದಿ ಪಡಿಸಬಾರದು. ಈ ಪಠ್ಯವಿಷಯಗಳನ್ನು ಹೊರತುಪಡಿಸಿ, ಬೇರೆ ಪಠ್ಯಕ್ರಮ ಬೋಧಿಸುವ ಶಾಲೆಗಳ ಬಗ್ಗೆ ನಿಗಾ ವಹಿಸುವಂತೆ ಇಲಾಖೆ ಆಯುಕ್ತರು, ಯೋಜನಾ ನಿರ್ದೇಶಕರು ಮತ್ತು ಉಪ  ನಿರ್ದೇಶಕರಿಗೆ ಸರ್ಕಾರ ಸೂಚನೆ ನೀಡಿದೆ.

 

click me!