ರಾಜ್ಯ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ : ಯಾರಿಗೆ ಸಚಿವ ಸ್ಥಾನ?

By Web DeskFirst Published Jun 2, 2019, 7:43 AM IST
Highlights

ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆದಂತಾಗಿದೆ. ಇನ್ನು ಕೆಲ ದಿನಗಳಲ್ಲಿ ವಿಸ್ತರಣೆ ಮಾಡಲು ನಾಯಕರು ಮನಸು ಮಾಡಿದ್ದಾರೆ.

ಬೆಂಗಳೂರು :  ಕಳೆದ ಕೆಲ ದಿನಗಳಿಂದ ನರಳಾಟದ ಮಟ್ಟ ಮುಟ್ಟಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ-ಪುನಾರಚನೆ ಗೊಂದಲ ಕಡೆಗೂ ಬಗೆಹರಿದಿದೆ. ಸದ್ಯಕ್ಕೆ ಪುನಾರಚನೆಯಿಲ್ಲ, ವಿಸ್ತರಣೆ ಮಾತ್ರ ಖಚಿತ. ಅಮಾವಾಸ್ಯೆ ಮುಗಿದ ಕೂಡಲೇ (ಬಹುತೇಕ ಜೂ.6 ಕ್ಕೆ) ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಪಕ್ಷೇತರರಾದ ರಾಣೆಬೆನ್ನೂರು ಶಾಸಕ ಆರ್. ಶಂಕರ್ ಹಾಗೂ ಮುಳಬಾಗಿಲು ಶಾಸಕ ಎನ್. ನಾಗೇಶ್ ಅವರು ಸಂಪುಟ ಸೇರುವ ಸಾಧ್ಯತೆ ದಟ್ಟವಾಗಿದೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡುವೆ ಶನಿವಾರ ಈ ಕುರಿತು ನಡೆದ ಮಹತ್ವದ ಮಾತುಕತೆಯಲ್ಲಿ ಸಂಪುಟ ವಿಸ್ತರಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಮೂಲಗಳ ಪ್ರಕಾರ ಪ್ರಸ್ತುತ ಸಂಪುಟದಲ್ಲಿ ಖಾಲಿ ಇರುವ ಮೂರು ಸ್ಥಾನಗಳ (2 ಜೆಡಿಎಸ್ ಹಾಗೂ 1 ಕಾಂಗ್ರೆಸ್ ಸ್ಥಾನ) ಪೈಕಿ 2 ಸ್ಥಾನಕ್ಕೆ ಆರ್. ಶಂಕರ್ ಹಾಗೂ ಎನ್. ನಾಗೇಶ್ ಅವರನ್ನು ಪರಿಗಣಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಕುತೂಹಲದ ಸಂಗತಿಯೆಂದರೆ, ಸಂಪುಟದಲ್ಲಿ ಬಾಕಿ ಉಳಿದ ಒಂದು ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ಅವರನ್ನು ಸೇರಿಸಿಕೊಳ್ಳುವ ಪ್ರಯತ್ನ ಜೀವಂತವಾಗಿರುವುದು ಈ ಮಾತುಕತೆ ವೇಳೆ ಬಹಿರಂಗವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಾರಕಿಹೊಳಿ ಅವರನ್ನು ಮನವೊಲಿಸಿ ಸಂಪುಟಕ್ಕೆ ಸೇರಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದು, ಈ ಪ್ರಯತ್ನ ಯಶಸ್ವಿಯಾಗುವಾದರೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಸಿದ್ದರಾಮಯ್ಯ ಸಹ ಹೇಳಿದ್ದಾರೆ ಎನ್ನಲಾಗಿದೆ.

ಹೀಗಾಗಿ, ಕಾಂಗ್ರೆಸ್‌ನ ಅತೃಪ್ತ ಶಾಸಕರ ನೇತೃತ್ವ ವಹಿಸಿರುವ ರಮೇಶ್ ಜಾರಕಿಹೊಳಿ ಅವರ ಮನವೊಲಿಸುವ ಕಾರ್ಯ ಮುಂದುವರೆ ಯಲಿದ್ದು, ಒಪ್ಪಿದರೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇನ್ನೂ ಜೀವಂತವಿದೆ. ಒಂದು ವೇಳೆ ಜಾರಕಿಹೊಳಿ ಒಪ್ಪದ ಪಕ್ಷದಲ್ಲಿ ಕಾಂಗ್ರೆಸ್‌ನ ಬಿ.ಸಿ.ಪಾಟೀಲ್ ಅವರನ್ನು ಪರಿಗಣಿಸುವಂತೆ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ಇದು ಇನ್ನೂ ಪಕ್ಕಾ ಆಗಿಲ್ಲ. ಒಟ್ಟಾರೆ, ಬಹುತೇಕ ಜೂ. 6ರಂದು ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಪಕ್ಷೇತರರಾದ ಶಂಕರ್ ಹಾಗೂ ನಾಗೇಶ್ ಅವರು ಸಚಿವರಾಗುವುದು ಖಚಿತ ಎಂದೇ ಹೇಳಲಾಗುತ್ತಿದೆ.

ಸಿದ್ದರಾಮಯ್ಯ ನಿವಾಸದಲ್ಲಿ ಸಭೆ: ಸಂಪುಟ ಗೊಂದಲ ಪರಿಹಾರಕ್ಕಾಗಿ ಕಾಂಗ್ರೆಸ್ ಹೈಕಮಾಂಡ್‌ನ ಸೂಚನೆಯಂತೆ ಕುಮಾರಸ್ವಾಮಿ ಅವರು ಖುದ್ದು ಸಿದ್ದರಾಮಯ್ಯ ಅವರ ನಿವಾಸಕ್ಕೆ ಶನಿವಾರ ತೆರಳಿ ಮಾತುಕತೆ ನಡೆಸಿದರು. ಸುಮಾರು 30 ನಿಮಿಷಗಳ ಕಾಲ ನಡೆದ ಮಾತುಕತೆ ವೇಳೆ ಪಕ್ಷೇತರರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಒಮ್ಮತ ಮೂಡಿತು ಎನ್ನಲಾಗಿದೆ. ಈ ವೇಳೆ ಶಂಕರ್ ಹಾಗೂ ನಾಗೇಶ್ ಅವರನ್ನು ಸಿದ್ದರಾಮಯ್ಯ ಅವರ ನಿವಾಸಕ್ಕೆ ಕರೆಸಿಕೊಳ್ಳಲಾಗಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹೊಯ್ದಾಡುವ ಪಕ್ಷೇತರರ ಮನಸ್ಥಿತಿ ಬಗ್ಗೆ ಇಬ್ಬರೂ ನಾಯಕರು ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಇನ್ನು ಬಿಜೆಪಿಯತ್ತ ಸುಳಿಯದಂತೆ ತಾಕೀತು ಮಾಡಿದರು ಎನ್ನಲಾಗಿದೆ. ಇದೇ ವೇಳೆ ರಮೇಶ್ ಜಾರಕಿಹೊಳಿ ಅವರ ಮನವೊಲಿಸಿ ಸಂಪುಟಕ್ಕೆ ಸೇರಿಸಿಕೊಳ್ಳುವ ವಿಷಯವನ್ನು ಕುಮಾರಸ್ವಾಮಿ ಅವರು ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ತಮ್ಮ ಅಭ್ಯಂತರ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ರಮೇಶ್ ಜಾರಕಿಹೊಳಿ ಸಂಪುಟ ಸೇರಲು ಹಿಂಜರಿದರೆ ಆಗ ಬಿ.ಸಿ. ಪಾಟೀಲ್ ಅವರಿಗೆ ಅವಕಾಶ ನೀಡಬೇಕು. ಈ ವಿಸ್ತರಣೆ ವೇಳೆ ಸಾಧ್ಯವಾಗದಿದ್ದರೂ ಭವಿಷ್ಯ ದಲ್ಲಿ ಬಿ.ಸಿ.ಪಾಟೀಲ್‌ಗೆ ಸ್ಥಾನ ನೀಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು ಎಂದು ಮೂಲಗಳು ಹೇಳಿವೆ. 

ಸಿದ್ದರಾಮಯ್ಯ ಮೇಲುಗೈ: ಈ ಮಾತುಕತೆ ಯ ನಂತರ ಸಂಪುಟ ವಿಸ್ತರಣೆ ಖಚಿತಗೊಂಡಂತಾಗಿದ್ದು, ಅದು ಅಮಾವಾಸ್ಯೆ ನಂತರ ನಡೆಯ ಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಮೂಲಗಳ ಪ್ರಕಾರ ಜೂ.೬ ಉತ್ತಮ ದಿನವಾಗಿದ್ದು, ಬಹುತೇಕ ಅಂದೇ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ. ಸಂಪುಟ ವಿಸ್ತರಣೆ-ಪುನಾರಚನೆ ವಿಚಾರದಲ್ಲಿ ಎಲ್ಲಾ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪುನಾರಚನೆ ಸೂಕ್ತ ಎಂಬ ಅಭಿಪ್ರಾಯ ಹೊಂದಿದ್ದರೂ, ಕೇವಲ ವಿಸ್ತರಣೆ ಸಾಕು ಎಂದು ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು. ಜೆಡಿಎಸ್ ಪುನಾರಚನೆಯೇ ಸೂಕ್ತ ಎಂದು ವಾದ ಮಾಡಿತ್ತು. ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ನ ಬಹುತೇಕ ಎಲ್ಲಾ ನಾಯಕರು
ಪುನಾರಚನೆಯೇ ಸೂಕ್ತ ಎಂದು ವಾದಿಸಿದ್ದರು.

ಆದರೆ, ಸಿದ್ದರಾಮಯ್ಯ ಮಾತ್ರ ಯಾವುದೇ ಕಾರಣಕ್ಕೂ ಪುನಾರಚನೆ ಬೇಡ ಎಂದೇ ವಾದಿಸಿದ್ದರು. ಹೈಕಮಾಂಡ್ ಸಿದ್ದರಾಮಯ್ಯ ಅವರ ನಿಲುವಿಗೆ ಬೆಂಬಲ ನೀಡಿದೆ. ತನ್ಮೂಲಕ ಸಿದ್ದರಾಮಯ್ಯ ಪಕ್ಷದಲ್ಲಿ ಮತ್ತೆ ಮೇಲುಗೈ ಸಾಧಿಸಿದಂತಾಗಿದೆ.

click me!