ಕನ್ನಡ ಸಿನಿಮಾಕ್ಕೆ ಜಿಎಸ್‌ಟಿ ಇಲ್ಲ

By Suvarna Web DeskFirst Published Jun 20, 2017, 9:19 AM IST
Highlights

ತೆರಿಗೆ ವ್ಯವಸ್ಥೆಯಿಂದ ಚಲನಚಿತ್ರ ರಂಗದ ಮೇಲೆ ತೆರಿಗೆ ಹೊರೆ ಹೆಚ್ಚಾಗಲಿದೆ. ಹೀಗಾಗಿ ಕನ್ನಡ ಚಿತ್ರಗಳ ಮೇಲೆ ಹೊರೆ ಕಡಿಮೆ ಮಾಡಲು ರಾಜ್ಯ ಸರ್ಕಾರದಿಂದ ಯಾವ ರೀತಿ ತೆರಿಗೆ ಮರುಪಾವತಿ ಮಾಡಬಹುದು ಎಂಬ ಬಗ್ಗೆ ಚರ್ಚಿಸಲಾಗುವುದು. ಒಟ್ಟಾರೆ ಕನ್ನಡ ಚಿತ್ರೋದ್ಯಮಕ್ಕೆ ಜಿಎಸ್‌ಟಿ ಹೊರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ತೆರಿಗೆ ಮರುಪಾವತಿ ಮಾಡಲು ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ವಿಧಾನ ಪರಿಷತ್ತು : ತೆರಿಗೆ ವ್ಯವಸ್ಥೆಯಿಂದ ಚಲನಚಿತ್ರ ರಂಗದ ಮೇಲೆ ತೆರಿಗೆ ಹೊರೆ ಹೆಚ್ಚಾಗಲಿದೆ. ಹೀಗಾಗಿ ಕನ್ನಡ ಚಿತ್ರಗಳ ಮೇಲೆ ಹೊರೆ ಕಡಿಮೆ ಮಾಡಲು ರಾಜ್ಯ ಸರ್ಕಾರದಿಂದ ಯಾವ ರೀತಿ ತೆರಿಗೆ ಮರುಪಾವತಿ ಮಾಡಬಹುದು ಎಂಬ ಬಗ್ಗೆ ಚರ್ಚಿಸಲಾಗುವುದು. ಒಟ್ಟಾರೆ ಕನ್ನಡ ಚಿತ್ರೋದ್ಯಮಕ್ಕೆ ಜಿಎಸ್‌ಟಿ ಹೊರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ವಿಧಾನಪರಿಷತ್‌ನಲ್ಲಿ ಜಿಎಸ್‌ಟಿ ವಿಧೇಯಕ-2017 ಮಂಡಿಸಿ ಮಾತನಾಡಿದ ಅವರು, ಕನ್ನಡ ಚಿತ್ರಗಳಿಗೆ ಸರ್ಕಾರದಿಂದ ತೆರಿಗೆ ವಿಧಿಸುತ್ತಿರಲಿಲ್ಲ. ಇದೀಗ ಜಿಎಸ್‌ಟಿಯಿಂದ ಚಿತ್ರರಂಗಕ್ಕೆ ಹಿನ್ನಡೆಯಾಗಲಿದೆ. 100 ರು.ಗಿಂತ ಹೆಚ್ಚಿರುವ ಟಿಕೆಟ್‌ಗೆ ಶೇ.28 ಹಾಗೂ 100 ರು.ಗಿಂತ ಕಡಿಮೆ ಬೆಲೆಯ ಟಿಕೆಟ್‌ಗೆ ಶೇ.18 ರಷ್ಟುತೆರಿಗೆ ವಿಧಿಸಲು ಜಿಎಸ್‌ಟಿಯಲ್ಲಿ ಪ್ರಸ್ತಾಪಿಸಲಾಗಿದೆ. ಜಿಎಸ್‌ಟಿ ಜುಲೈ 1ರಿಂದ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಈ ತೆರಿಗೆ ಅನ್ವಯವಾಗಲಿದೆ.

ಈ ಮೊದಲು ರಾಜ್ಯ ಸರ್ಕಾರವು ಕನ್ನಡ ಚಿತ್ರಗಳಿಗೆ ತೆರಿಗೆ ರಿಯಾಯಿತಿ ನೀಡಿತ್ತು. ಇದೀಗ ಚಿತ್ರರಂಗಕ್ಕೆ ತೆರಿಗೆ ಹೊರೆಯಿಂದ ಮುಕ್ತಿ ನೀಡಲು ಸರ್ಕಾರದಿಂದ ಯಾವ ರೀತಿ ಮರು ಪಾವತಿ ಮಾಡಬಹುದು ಎಂಬ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ಪರಿಷತ್‌ ಸದಸ್ಯೆ ಜಯಮಾಲಾ ಅವರು, ನಾನು ಈ ವಿಷಯವನ್ನು ಪ್ರಸ್ತಾಪಿಸಬೇಕು ಎಂದು ಬಂದಿದ್ದೆ. ನೀವೇ ಹೇಳು ತ್ತೀದ್ದೀರಿ, ಧನ್ಯವಾದ ಎಂದರು.

ಸಿದ್ದರಾಮಯ್ಯ, ಬೇಡ ಕುಳಿತುಕೊಳ್ಳಮ್ಮಾ. ಯಾರೂ ಹೇಳಬಾರದು ಎಂದೇ ನಾನು ಹೇಳುತ್ತಿದ್ದೇನೆ. ಚಿತ್ರರಂಗದ ಪರವಾಗಿ ನಾವು ಇದ್ದೇವೆ. ಈವರೆಗೆ ನಾವು ಮಾಡಿದ ಕೆಲಸಗಳಿಂದ ಚಿತ್ರರಂಗಕ್ಕೆ ಅನುಕೂಲ ಆಗಿಲ್ವಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಯಮಾಲಾ, ಖಂಡಿತ ತುಂಬಾ ಅನುಕೂಲ ಆಗಿದೆ. ಸರ್ಕಾರದ ನೆರವಿನಿಂದಾಗಿ ಈ ಮೊದಲು ವರ್ಷಕ್ಕೆ 70 ಬರುತ್ತಿದ್ದ ಕನ್ನಡ ಸಿನಿಮಾ ಈಗ 200 ರಷ್ಟಾಗಿದೆ. ಚಿತ್ರರಂಗ ಇನ್ನೂ ಬೆಳವಣಿಗೆ ಆಗಲು ಈ ತೆರಿಗೆ ಹೊರೆ ಇಳಿಸಬೇಕು ಎಂದು ಮನವಿ ಮಾಡಿದರು. ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಚಿತ್ರರಂಗದ ಬೆಳವಣಿಗೆಗೆ ನಾವು ಸಹಕಾರ ನೀಡಲು ಬದ್ಧವಾಗಿದ್ದೇವೆ. ಚಿತ್ರಗಳಿಗೆ ತೆರಿಗೆ ಮರುಪಾವತಿ ಹೇಗೆ ಮಾಡಬಹುದು ಎಂಬುದರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

click me!