ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾಗದಕ್ಕೂ ಕೂಡ ಕಾಸಿಲ್ಲ

Published : Jun 30, 2019, 08:48 AM IST
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾಗದಕ್ಕೂ ಕೂಡ ಕಾಸಿಲ್ಲ

ಸಾರಾಂಶ

ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಕಾಗದ ಪೆನ್ನಿಗೂ ಪರದಾಡುವಂತಹ ಸ್ಥಿತಿ ಕರ್ನಾಟಕದಲ್ಲಿದೆ. ಟೆಂಡರ್ ನವೀಕರಣ ಮಾಡದಿರುವುದೇ ಇಂತಹ ಸ್ಥಿತಿಗೆ ಕಾರಣವಾಗಿದೆ. 

ಬೆಂಗಳೂರು [ಜೂ.30] : ಸರ್ಕಾರದ ಬೊಕ್ಕಸಕ್ಕೆ ಪ್ರಮುಖ ಆದಾಯದ ಮೂಲವಾಗಿರುವ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಪೆನ್ನು, ಪೇಪರ್ ಖರೀದಿಗೂ ಹಣವಿಲ್ಲ! ಕಳೆದ ಮೂರು ತಿಂಗಳ ಹಿಂದೆ ರಾಜ್ಯಾದ್ಯಂತ 250 ಕ್ಕೂ ಹೆಚ್ಚಿರುವ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಕಾಗದ, ಟೋನರ್, ಪ್ರಿಂಟರ್‌ಗಳ ಪೂರೈಕೆ ಹಾಗೂ ನಿರ್ವಹಣೆ ಮಾಡುತ್ತಿದ್ದ ಗುತ್ತಿಗೆ ಮುಕ್ತಾಯವಾಗಿದೆ. ಈವರೆಗೂ ಟೆಂಡರ್ ನವೀಕರಣ ಹಾಗೂ ಮರು ಟೆಂಡರ್ ಪ್ರಕ್ರಿಯೆಗೆ ಸರ್ಕಾರದಿಂದ ಅನುಮತಿ ದೊರೆತಿಲ್ಲ. ಜತೆಗೆ, ಉಪ ನೋಂದಣಾಧಿಕಾರಿ ಕಚೇರಿಯಿಂದಲೇ ಖರೀದಿ ಮಾಡಿ ನಿರ್ವಹಣೆ ಮಾಡಲೂ ಸೂಕ್ತ ಹಣಕಾಸು ಒದಗಿಸಿಲ್ಲ.

ಪರಿಣಾಮ, ಉಪ ನೋಂದಣಾಧಿಕಾರಿಗಳೇ ಹಣ ಹಾಕಿ ಕಾಗದ, ಟೋನರ್ ಖರೀದಿ ಹಾಗೂ ಪ್ರಿಂಟರ್‌ಗಳ ನಿರ್ವಹಣೆ ಮಾಡುತ್ತಿದ್ದಾರೆ. ಸಾರ್ವ ಜನಿಕರು ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರು. ಮೌಲ್ಯದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸಿ ನೋಂದಣಿಗೆ ಹೋದರೆ ಕಳಪೆ ಗುಣ ಮಟ್ಟದ ಕಾಗದದಲ್ಲಿ ದೃಢೀಕೃತ ದಾಖಲೆಗಳನ್ನು ಪಡೆಯಬೇಕಾಗಿದೆ. ಅಲ್ಲದೆ, ನೋಂದಣಿ, ಶುದ್ಧ ಕ್ರಯ, ವಿವಾಹ ನೋಂದಣಿ ಸೇರಿದಂತೆ ಪ್ರಮುಖ ದಾಖಲೆಗಳಿಗೆ ಗುಣಮಟ್ಟವಲ್ಲದ ಕಾಗದ ಬಳಕೆ ಮಾಡಲಾಗುತ್ತಿದೆ. ಇದರಿಂದ ಪ್ರಮಾಣಪತ್ರಗಳು ಬಾಳಿಕೆಯೂ ಬರುವುದಿಲ್ಲ.

ಲಕ್ಷಾಂತರ ರು. ಹಣವನ್ನು ಸರ್ಕಾರಕ್ಕೆ ಪಾವತಿಸಿ ಸೂಕ್ತ ಸೇವೆ ಪಡೆಯಲು ಆಗುತ್ತಿಲ್ಲ. ಫೋಟೊಗಳು ಸ್ಪಷ್ಟವಾಗಿ ಮುದ್ರಣ ಕಾಣುತ್ತಿಲ್ಲ. ಪ್ರಮಾಣಪತ್ರ ಗಳಲ್ಲೂ ಸ್ಪಷ್ಟತೆ ಇಲ್ಲ. ಅಮೂಲ್ಯವಾದ ಪ್ರಮಾಣ ಪತ್ರಗಳ ಬಾಳಿಕೆ ಬಗ್ಗೆಯೇ ಖಾತ್ರಿ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಟೇಷನರಿ ನಿರ್ವಹಣೆಗೆ ಹಣವಿಲ್ಲ: ಈ ಬಗ್ಗೆ ಬೆಂಗಳೂರು ನಗರದ ಐದು ನೋಂದಣಿ ಜಿಲ್ಲೆ ಸೇರಿದಂತೆ ಚಾಮರಾಜನಗರ, ಮೈಸೂರು, ಚಿಕ್ಕಬಳ್ಳಾಪುರ ನೋಂದಣಾಧಿಕಾರಿ ಕಚೇರಿಗಳಿಂದ ಮಾಹಿತಿ ಪಡೆದರೆ, ಎಲ್ಲಾ ಕಚೇರಿಗಳಿಂದಲೂ ಹಣ ಲಭ್ಯತೆ ಇಲ್ಲ ಎಂಬ ಉತ್ತರವೇ ಬರುತ್ತಿದೆ. ಕಳೆದ ವರ್ಷ ಸುಮಾರು 11 ,500 ಕೋಟಿ ರು. ಆದಾಯ ವನ್ನು ರಾಜ್ಯ ಸರ್ಕಾರಕ್ಕೆ ಉಪ ನೋಂದಣಾಧಿಕಾರಿಗಳ ಕಚೇರಿಗಳಿಂದಲೇ ಬಂದಿದೆ. ಆದರೂ ಟೆಂಡರ್ ನವೀಕರಣ ಮಾಡುವುದಾಗಲಿ ಅಥವಾ ಇಲಾಖೆ ಯಿಂದಲೇ ಸ್ಟೇಷನರಿ ಖರೀದಿ, ನಿರ್ವಹಣೆಗೆ ಹಣ ಒದಗಿಸುವುದಾಗಲಿ ಮಾಡಿಲ್ಲ.

ಹೀಗಾಗಿ, ಸ್ವತಃ ಅಧಿಕಾರಿಗಳೇ ಕೈಗಳಿಂದ ಹಣ ಹಾಕಿ ನಿರ್ವಹಣೆ ಮಾಡುತ್ತಿದ್ದೇವೆ. ಎಚ್‌ಪಿ ಸ್ಟಾಂಡರ್ಡ್ ಪ್ರಿಂಟರ್ ಬಳಸಿ ಪ್ರಿಂಟ್ ತೆಗೆದರೆ ಗುಣಮಟ್ಟ ಉತ್ತಮವಾಗಿರುತ್ತದೆ. ಆದರೆ, ಕಳೆದ ಐದು ವರ್ಷಗಳ ಹಿಂದೆ ಅಳವಡಿಸಿರುವ ಪ್ರಿಂಟರ್ ಗಳು ಸಹ ಬಹುತೇಕ ಹಾಳಾಗಿವೆ.  ಹೀಗಿದ್ದರೂ ಸಾರ್ವಜನಿಕರಿಗೆ ಸೇವೆ ನಿರಾಕರಿಸಬಾರದು ಎಂಬ ಕಾರಣಕ್ಕೆ ಸ್ವಂತ ಹಣ ಹಾಕಿ ನಿರ್ವಹಿಸುತ್ತಿದ್ದೇವೆ. ಈ ವೇಳೆ ಸಾಕಷ್ಟು ಲೋಪಗಳೂ ಉಂಟಾಗುತ್ತಿವೆ ಎಂದು ಹೇಳಿದರು.

ಪ್ರತಿ ತಿಂಗಳು 1 ಲಕ್ಷ ರು. ವೆಚ್ಚ: ಮೊದಲ ತಿಂಗಳಲ್ಲಿ ಕಚೇರಿಯಿಂದಲೇ ಖರೀದಿ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಪ್ರತಿ ತಿಂಗಳು 1 ಲಕ್ಷ ರು.ವರೆಗೆ ನಿರ್ವಹಣಾ ವೆಚ್ಚ ತಗಲುತ್ತದೆ. ಕಂದಾಯ ಇಲಾಖೆಗೆ ಶೇ.70  ರಷ್ಟು ಆದಾಯ ಬೆಂಗಳೂರಿನ ರಾಜಾಜಿನಗರ, ಬಸವನಗುಡಿ, ಶಿವಾಜಿನಗರ, ಜಯನಗರ, ಗಾಂಧಿನಗರ ನೋಂದಣಿ ಜಿಲ್ಲೆಗಳಿಂ ದಲೇ ಬರುತ್ತಿದೆ. ಆದರೆ, ನಮಗೂ ಯಾವುದೇ ವ್ಯವಸ್ಥೆ ಮಾಡಿಕೊಟ್ಟಿಲ್ಲ. ನಾವು ಬೆಂಗಳೂರಿನ ಉಪ ನೋಂದಣಾಧಿಕಾರಿಗಳು ಮೊದಲ ತಿಂಗಳು ಜನತಾ ಬಜಾರ್‌ನಿಂದ 1 ಲಕ್ಷ ರು.ವರೆಗಿನ ಕಾಗದ, ಟೋನರ್ ಖರೀದಿಸಿ ತಂದಿದ್ದೇವೆ. 

ಆದರೆ ಕಳೆದ ಎರಡು ತಿಂಗಳಿಂದ ಜನತಾ ಬಜಾರ್ ನವರಿಗೂ ಸರ್ಕಾರ ಹಣ ಪಾವತಿಸಿಲ್ಲ. ಸರ್ಕಾರಿ ಸಂಸ್ಥೆಯಾದರೂ ಅವರಿಗೂ ಹಣ ನೀಡದಿದ್ದರೆ ನಿರ್ವಹಣೆ ಕಷ್ಟ. ಹೀಗಾಗಿ ಹಳೆಯ ಬಾಕಿ ಪಾವತಿಸುವವರೆಗೂ ಸ್ಟೇಷನರಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಖಾಸಗಿಯವರಿಂದ ಖರೀದಿ ಮಾಡಿ ಹಣ ಪಾವತಿಸಲು ನಮಗೆ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಾರೆ. 

ಸಿಬ್ಬಂದಿಯಿಂದಲೇ ನಿರ್ವಹಣೆ: ಸರ್ಕಾರದಿಂದ ನಿರ್ವಹಣೆಗೆ ಹಣ ದೊರೆಯದ ಕಾರಣ ಸಿಬ್ಬಂದಿಯೇ ಹಣ ಕ್ರೋಢೀಕರಿಸಿ ನಿರ್ವಹಣೆ ಮಾಡಲಾಗುತ್ತಿದೆ. ಪ್ರತಿ ದಿನ 200 ಇಸಿ ವಿತರಣೆ ಮಾಡಬೇಕಾಗುತ್ತದೆ. ಸ್ಥಿರಾಸ್ತಿ ನೋಂದಣಿ, ಗಿಫ್ಟ್ ಡೀಡ್, ಅಗ್ರಿಮೆಂಟ್ ರಿಜಿಸ್ಟ್ರೇಷನ್, ಆಸ್ತಿ ಋಣಭಾರ ರಹಿತ ಪ್ರಮಾಣಪತ್ರ ಸೇರಿದಂತೆ ನಿತ್ಯ 1,500  ಪುಟದಷ್ಟು ದೃಢೀಕೃತ ಪ್ರಮಾಣಪತ್ರ ವಿತರಣೆ ಮಾಡಬೇಕು. ಆರ್‌ಟಿಐ ಅರ್ಜಿಗಳಿಗೆ ಉತ್ತರ ನೀಡಬೇಕು. 

ಪ್ರಧಾನಕಾರ್ಯದರ್ಶಿಗಳಿಗೆ ಲೆಕ್ಕಪತ್ರದ ವರದಿ ನೀಡಬೇಕು. ಕೇಂದ್ರ ಕಚೇರಿ ಹಾಗೂ ಇತರೆ ಕಚೇರಿಗಳಿಗೆ ಪತ್ರ ವ್ಯವಹಾರ ಮಾಡಬೇಕು. ಇದಕ್ಕಾಗಿ ನಿತ್ಯ 2 ಸಾವಿರಕ್ಕೂ ಹೆಚ್ಚು ಪುಟ ಕಾಗದ ಬೇಕು. ಪ್ರಿಂಟರ್‌ಗಳಿಗೆ 1 ಟೋನರ್‌ಗೆ 4,500 ರು.ಗಳಂತೆ 10 - 12 ಟೋನರ್  ಬೇಕಾಗುತ್ತದೆ. ಜೆರಾಕ್ಸ್ ಯಂತ್ರದ ನಿರ್ವಹಣಾ ವೆಚ್ಚ, ಪ್ರಿಂಟರ್, ಯುಪಿಎಸ್, ಬ್ಯಾಟರಿ ನಿರ್ವಹಣಾ ವೆಚ್ಚವನ್ನೂ ನಾವೇ ಭರಿಸುತ್ತಿದ್ದೇವೆ. ಎಚ್‌ಪಿ ಸ್ಟಾಂಡರ್ಡ್ ಪ್ರಿಂಟರ್ ಇಲ್ಲದಿದ್ದರೆ ಪ್ರಮಾಣಪತ್ರಗಳ ಗುಣಮಟ್ಟವೂ ಉತ್ತಮವಾಗಿರುವುದಿಲ್ಲ ಎಂದು ಹೇಳಿದರು.

ವರದಿ : ಶ್ರೀಕಾಂತ್ ಎನ್.ಗೌಡಸಂದ್ರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು