
ಬೆಂಗಳೂರು: ಈ ವರ್ಷ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶ ಶುಲ್ಕ ಏರಿಕೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಸರ್ಕಾರ, ವೈದ್ಯಕೀಯ ಕೋರ್ಸುಗಳ ಶುಲ್ಕ ಏರಿಕೆ ಮಾಡಬೇಕೇ ಅಥವಾ ಬೇಡವೇ ಎಂಬ ಗೊಂದಲದಲ್ಲಿದೆ. ಕಳೆದೆರಡು ವರ್ಷದಂತೆ ಈ ವರ್ಷವೂ ಶುಲ್ಕ ಹೆಚ್ಚಳಕ್ಕೆ ಖಾಸಗಿ ಇಂಜಿನಿಯರಿಂಗ್ ಮತ್ತು ವೈದ್ಯ ಕಾಲೇಜುಗಳು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದವು. ಬೇಡಿಕೆ ತಿರಸ್ಕರಿಸಿರುವ ಉನ್ನತ ಶಿಕ್ಷಣ ಇಲಾಖೆ ಈಗಾಗಲೇ ಇಂಜಿನಿಯರಿಂಗ್ ಕೋರ್ಸುಗಳ ಶುಲ್ಕ ಏರಿಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ವೈದ್ಯಕೀಯ ಶಿಕ್ಷಣ ಇಲಾಖೆ ನೀಟ್ ಫಲಿತಾಂಶ ಪ್ರಕಟವಾಗಲಿ, ನಂತರ ಖಾಸಗಿ ವೈದ್ಯ ಕಾಲೇಜುಗಳ ಜತೆ ಚರ್ಚಿಸೋಣ ಎಂದು ಕಾಯುತ್ತಿದೆ. ಮಂಗಳವಾರ ಕೆಇಎನಲ್ಲಿ ಸಿಇಟಿ ಫಲಿತಾಂಶ ಬಿಡುಗಡೆ ಮಾಡಿದ ಬಳಿಕ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು ಶುಲ್ಕ ಏರಿಕೆ ಕುರಿತ ಪ್ರಶ್ನೆಗೆ ಪ್ರತ್ಯೇಕ ಪ್ರತಿಕ್ರಿಯೆ ನೀಡಿದರು.
ಈ ಬಾರಿ 4 ಗ್ರೇಸ್ ಅಂಕ:
ಈ ಬಾರಿಯ ಸಿಇಟಿ ಮೌಲ್ಯಮಾಪನದ ವೇಳೆ ಎರಡಲ್ಲ ಒಟ್ಟು ನಾಲ್ಕು ಗ್ರೇಸ್ ಅಂಕಗಳನ್ನು ನೀಡಲಾಗಿದೆ. ಪರೀಕ್ಷೆ ಮುಗಿದ ಬೆನ್ನಲ್ಲೇ ಆಂತರಿಕ ಪರಿಶೀಲನೆ ವೇಳೆ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರ ಪತ್ರಿಕೆಯ ತಲಾ ಒಂದೊಂದು ಪ್ರಶ್ನೆಗಳಲ್ಲಿ ಗೊಂದಲ ಕಂಡಿದ್ದರಿಂದ ಪ್ರತಿ ಪ್ರಶ್ನೆಗೆ ಒಂದು ಗ್ರೇಸ್ ಅಂಕ ನೀಡಲಾಗಿತ್ತು. ಒಟ್ಟು 2 ಗ್ರೇಸ್ ಅಂಕದ ಮಾಹಿತಿಯನ್ನು ಕೀ ಉತ್ತರದಲ್ಲೇ ಪ್ರಕಟಿಸಲಾಗಿತ್ತು. ಬಳಿಕ ಅಭ್ಯರ್ಥಿಗಳಿಂದ ಬಂದ 400 ಆಕ್ಷೇಪಗಳನ್ನು ಪರಿಗಣಿಸಿ ಮೇಲೆ ರಸಾಯನಶಾಸ್ತ್ರ ವಿಷಯದಲ್ಲಿ 2 ಗ್ರೇಸ್ ಅಂಕ, ಗಣಿತದಲ್ಲಿ ಒಂದು ಹಾಗೂ ಭೌತಶಾಸ್ತ್ರದಲ್ಲಿ ಒಂದು ಸೇರಿ ಒಟ್ಟು ನಾಲ್ಕು ಗ್ರೇಸ್ ಅಂಕ ನೀಡಲಾಗಿದೆ.
ಹೈ-ಕ ಟಾಪರ್ಸ್'ಗೂ ಉಚಿತ ಪ್ರವೇಶ:
ಈ ಬಾರಿ ಸಿಇಟಿಯಲ್ಲಿ ಎಲ್ಲಾ ವಿಭಾಗಗಳಲ್ಲಿ ಟಾಪ್ 5 ರ್ಯಾಂಕ್ ಪಡೆದವರ ಜತೆಗೆ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಯಾರು ಟಾಪ್ 5 ರ್ಯಾಂಕ್ ಪಡೆದಿರುತ್ತಾರೆ ಅವರಿಗೂ ಸರ್ಕಾರವೇ ಪೂರ್ಣ ಪ್ರವೇಶ ಶುಲ್ಕ ನೀಡುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು. ಕಳೆದ ಕೆಲ ವರ್ಷಗಳಿಂದ ಸಿಇಟಿಯ ಎಲ್ಲಾ ವಿಭಾಗಗಳಲ್ಲೂ ಟಾಪ್ ಐದು ರ್ಯಾಂಕ್ ಸ್ಥಾನ ಪಡೆದವರು ರಾಜ್ಯದ ಯಾವುದೇ ಕಾಲೇಜುಗಳಲ್ಲಿ ಪ್ರವೇಶ ಪಡೆದರೂ ಸರ್ಕಾರವೇ ಪೂರ್ವಾವಧಿ ಪ್ರವೇಶ ಶುಲ್ಕ ಭರಿಸುತ್ತಿದೆ. ಇದರ ಮುಂದುವರಿಕೆ ಜತೆಗೆ ಈ ಬಾರಿ ಹೈದರಾಬಾದ್ ಕರ್ನಾಟಕ ಭಾಗದ ಟಾಪ್ 5 ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಸಿದ್ಧಪಡಿಸಲಾಗಿದೆ ಎಂದರು.
ನಾಳೆಯಿಂದ ದಾಖಲೆ ಪರಿಶೀಲನೆ:
ಸಿಇಟಿಯಲ್ಲಿ ವಿವಿಧ ರ್ಯಾಂಕ್ ಪಡೆಯುವ ಮೂಲಕ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಜೂ.1ರಿಂದ ದಾಖಲೆಗಳ ಪರಿಶೀಲನೆ ಆರಂಭವಾಗಲಿದೆ. ಜೂ.1, 2 ಮತ್ತು 3ರಂದು ಕ್ರಮವಾಗಿ ಅಂಗವಿಕಲ, ಎನ್'ಸಿಸಿ ಮತ್ತು ಕ್ರೀಡಾ ಕೋಟಾದಡಿ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ದಾಖಲೆಗಳ ಪರಿಶೀಲನೆ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಮಾತ್ರ ನಡೆಯಲಿದೆ. ಮೊದಲ ದಿನ ಜೂ.5ರಂದು 1ರಿಂದ 700ನೇ ರಾರಯಂಕ್ ವರೆಗಿನ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ನಡೆಯಲಿದೆ. ಅದೇ ರೀತಿ ಯಾವ್ಯಾವ ರ್ಯಾಂಕ್'ನವರಿಗೆ ಯಾವ ದಿನದಂದು ದಾಖಲೆ ಪರಿಶೀಲನೆ ಇದೆ ಎಂಬುದಕ್ಕೆ http://cet.kar.nic.in ನೋಡಿ.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.