ಮಂಚವಿಲ್ಲದೇ ಜೈಲಿನಲ್ಲಿ ಚಿದುಗೆ ನಿದ್ರೆ ಇಲ್ಲದ ರಾತ್ರಿ!

By Web DeskFirst Published Sep 7, 2019, 10:14 AM IST
Highlights

ಜೈಲಿನಲ್ಲಿ ಚಿದುಗೆ ನಿದ್ರೆ ಇಲ್ಲದ ರಾತ್ರಿ| ಮರದ ಹಲಗೆ ಮೇಲೆ ಮಲಗಿದ ಪ್ರಭಾವಿ ರಾಜಕಾರಣಿ, ಮಂಚವೂ ಸಿಕ್ಕಿಲ್ಲ

ನವದೆಹಲಿ[ಸೆ.07]: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ ಸಂಬಂಧ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿ ತಿಹಾರ್‌ ಜೈಲು ಸೇರಿರುವ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಪಿ. ಚಿದಂಬರಂ ಅವರಿಗೆ ಮೊದಲೇ ದಿನವೇ ನಿದ್ರೆ ಬಂದಿಲ್ಲ.

ಗುರುವಾರ ಸಂಜೆ ಏಷ್ಯಾದ ಅತಿದೊಡ್ಡ ಕಾರಾಗೃಹ ಸೇರಿದ ಚಿದಂಬರಂ ಅವರಿಗೆ ಜೈಲಿನ ಅಧಿಕಾರಿಗಳು ರೋಟಿ, ದಾಲ್‌, ಸಬ್ಜಿ ಹಾಗೂ ಅನ್ನ ನೀಡಿದರು. ಮೆತ್ತನೆಯ ಹಾಸಿಗೆಯ ಮೇಲೆ ಪವಡಿಸುತ್ತಿದ್ದ ಚಿದಂಬರಂ ಅವರಿಗೆ ಆ ಸೌಕರ್ಯ ಜೈಲಿನಲ್ಲಿ ಇಲ್ಲ. ಹೀಗಾಗಿ ಮರದ ಮಲಗೆ ಮೇಲೆ ಚಿದು ನಿದ್ರೆ ಮಾಡಲು ಪ್ರಯತ್ನಿಸಿದರಾದರೂ ಅವರಿಗೆ ಹೆಚ್ಚು ನಿದ್ರೆ ಬರಲಿಲ್ಲ ಎಂದು ಮೂಲಗಳು ತಿಳಿಸಿವೆ. ಚಿದಂಬರಂ ಅವರು ಮಂಚಕ್ಕೆ ಕೋರಿಕೆ ಇಟ್ಟಿದ್ದಾರೆ. ಆದರೆ ವೈದ್ಯರು ಪರೀಕ್ಷೆ ನಡೆಸಿ, ಅಗತ್ಯ ಇದೆ ಎಂದು ಹೇಳಿದರಷ್ಟೇ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಆರ್ಥಿಕತೆ ಚಿಂತೆ: ಜೈಲಿಗೆ ಹೊರಡುವ ಮುನ್ನ ಚಿದಂಬರಂ ಹೀಗಂದ್ರಂತೆ!

ಬೆಳಗ್ಗೆ ಎದ್ದು ಜೈಲಿನ ಆವರಣದಲ್ಲಿ ವಾಯು ವಿಹಾರ ನಡೆಸಿ, ಧಾರ್ಮಿಕ ಗ್ರಂಥಗಳನ್ನು ಚಿದಂಬರಂ ಅವರು ಓದಿದರು. ನಂತರ ಬೆಳಗ್ಗೆ 6ರ ವೇಳೆಗೆ ಚಹಾ ಹಾಗೂ ಗಂಜಿಯನ್ನು ಸೇವಿಸಿದರು. ಪತ್ರಿಕೆಗಳನ್ನು ಅವರಿಗೆ ಒದಗಿಸಲಾಗಿತ್ತು.

ಕೋರ್ಟಿನ ಆದೇಶದ ಅನುಸಾರ ಚಿದಂಬರಂ ಅವರಿಗೆ ಪ್ರತ್ಯೇಕ ಕೊಠಡಿ ಹಾಗೂ ಪಾಶ್ಚಾತ್ಯ ಶೈಲಿಯ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದು ಬಿಟ್ಟರೆ ವಿಶೇಷ ಸೌಕರ್ಯ ಒದಗಿಸಲಾಗಿಲ್ಲ. ಜೈಲಿನ ಗ್ರಂಥಾಲಯ ಬಳಸಲು ಹಾಗೂ ನಿರ್ದಿಷ್ಟಅವಧಿಗೆ ಟೀವಿ ನೋಡುವ ಅವಕಾಶ ಅವರಿಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ತಿಹಾರ್ ಜೈಲಿಗೆ ಹೊರಟ ಚಿದಂಬರಂ: ವಿಶೇಷ ಸೆಲ್’ನಲ್ಲಿ 14 ದಿನ!

ಗುರುವಾರ ಸಂಜೆ ಜೈಲಿಗೆ ಬರುತ್ತಿದ್ದಂತೆ ಚಿದಂಬರಂ ಅವರನ್ನು ಕಡ್ಡಾಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಕೋರ್ಟಿನ ಅನುಮತಿ ಪಡೆದು, ಕನ್ನಡಕ ಹಾಗೂ ಔಷಧಗಳನ್ನು ಅವರು ಜೈಲಿಗೆ ತಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

click me!