
ಬೆಂಗಳೂರು (ಜ.27): ಬರುವ ಫೆ.1ರಿಂದ ನಡೆಸಲು ಉದ್ದೇಶಿಸಿದ್ದ ಐಎಸ್‌ಐ ಮುದ್ರೆ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್‌ನ ಮುದ್ರೆ) ಹೊಂದಿರದ ಹೆಲ್ಮೆಟ್ ಧರಿಸುವ ದ್ವಿಚಕ್ರ ವಾಹನ ಸವಾರರ ವಿರುದ್ಧದ ಕಾರ್ಯಾಚರಣೆಗೆ ಸದ್ಯಕ್ಕೆ ಬ್ರೇಕ್ ಬೀಳುವುದು ಬಹುತೇಕ ಖಚಿತವಾಗಿದೆ. ಐಎಸ್‌ಐ ಮಾರ್ಕ್‌ನ ಹೆಲ್ಮೆಟ್ ಕಡ್ಡಾಯಗೊಳಿಸುವ ಜವಾಬ್ದಾರಿಯನ್ನು ಹೊರಲು ಪೊಲೀಸ್ ಹಾಗೂ ಸಾರಿಗೆ ಇಲಾಖೆ ತಯಾರಿಲ್ಲದಿರುವುದೇ ಇದಕ್ಕೆ ಕಾರಣ.
ಕಳಪೆ ಗುಣಮಟ್ಟದ ಹೆಲ್ಮೆಟ್ ಎಂಬುದನ್ನು ಹೇಗೆ ಪತ್ತೆ ಹಚ್ಚಬೇಕು ಎಂಬುದರ ಬಗ್ಗೆ ಪೊಲೀಸರಿಗೇ ಗೊಂದಲವಿದೆ. ನಕಲಿ ಕಂಪನಿಗಳು ಐಎಸ್‌ಐ ಮುದ್ರೆ ಇರುವ ಹೆಲ್ಮೆಟ್ ಗಳನ್ನು ಮಾರಾಟ ಮಾಡುತ್ತಿವೆ. ಪೊಲೀಸರಿಗೆ ನಕಲಿ ಗುಣಮಟ್ಟದ ಹೆಲ್ಮೆಟ್ ಪತ್ತೆಹಚ್ಚುವುದು ಹೇಗೆ ಎಂಬ ಮಾಹಿತಿ ಇಲ್ಲ. ಸೂಕ್ತ ಮಾಹಿತಿ ಇಲ್ಲದೆ ವಿಶೇಷ ಕಾರ್ಯಾಚರಣೆ ನಡೆಸುವುದು ಕಷ್ಟವಾಗಲಿದೆ.
ಈ ಹಿನ್ನೆಲೆಯಲ್ಲಿ ಫೆ.1ರಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿವೆ. ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ, ಹೆಲ್ಮೆಟ್‌ರಹಿತ ಚಾಲನೆ ವೇಳೆ ದ್ವಿಚಕ್ರ ವಾಹನ ಸವಾರರು ಹೆಚ್ಚು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಬೈಕ್ ಓಡಿಸುವವರ ಜತೆ ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿ ಸರ್ಕಾರ 2016 ರ ಜ.20ಕ್ಕೆ ನಿಯಮ ಅನುಷ್ಠಾನಕ್ಕೆ ತಂದಿತ್ತು. ಸಂಚಾರ ಪೊಲೀಸರು ಹಾಗೂ ಸಾರಿಗೆ ಇಲಾಖೆ ಭಾರತೀಯ ಮೋಟಾರು ವಾಹನ ಕಾಯ್ದೆ-1988 ಕಲಂ 129 ರ ಪ್ರಕಾರ ದ್ವಿಚಕ್ರ ವಾಹನ ಚಲಾಯಿಸುವಾಗ ಐಎಸ್‌ಐ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ನಿಯಮ ಇದೆ.
ಆದರೆ ಅದನ್ನು ಹೇಗೆ ಪತ್ತೆ ಹಚ್ಚುವುದು ಎಂಬುದರ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲ. ಹೀಗಾಗಿ ನಕಲಿ ಹೆಲ್ಮೆಟ್ ವಿರುದ್ಧ ಕಾರ್ಯಾ ಚರಣೆ ನಡೆಸುವ ಬಗ್ಗೆ ಪೊಲೀಸರಿಗೆ ಇನ್ನಷ್ಟು ದಿನ ಕಾಲಾವಕಾಶ ನೀಡುವಂತೆ ಸೂಚಿಸಲಾಗಿದೆ ಎಂದರು.
ಸಾಮಾಜಿಕ ಜಾಲತಾಣದಿಂದ ಗೊಂದಲ: ಕಳೆದ ವರ್ಷ ಮೈಸೂರು ನಗರದಲ್ಲಿ ಹೆಲ್ಮೆಟ್ ಧರಿಸದೆ ಹಾಗೂ ಅರ್ಧ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡಿ 47 ಯುವಕರು ಮೃತಪಟ್ಟಿದ್ದರು. ಕಳಪೆ ಹೆಲ್ಮೆಟ್ ಧರಿಸಿ ಸಾವನ್ನಪ್ಪುವವರ ಸಂಖ್ಯೆ ಕಡಿಮೆಗೊಳಿಸುವ ಉದ್ದೇಶದಿಂದ ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರ ರಾವ್ ಅವರು ಉತ್ತಮ ಗುಣಮಟ್ಟದ ಐಎಸ್‌ಐ ಹೆಲ್ಮೆಟ್ ಧರಿಸುವುದು ಕಡ್ಡಾಯ ಎಂದು ಸೂಚಿಸಿದ್ದರು. ಅದರಂತೆ ಅರ್ಧ ಹೆಲ್ಮೆಟ್ ಧರಿಸಿದ್ದ ಸವಾರರ ವಿರುದ್ಧ ಅಲ್ಲಿನ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಸಂಗ್ರಹಿಸಿದ್ದ ಅರ್ಧ ಹೆಲ್ಮೆಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬಳಿಕ ಗೃಹ ಸಚಿವರು ಹಾಗೂ ಇತರ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆದರೆ, ಇಲ್ಲಿಯತನಕ ಸಾರಿಗೆ ಇಲಾಖೆ ಐಎಸ್‌ಐ ಗುಣಮಟ್ಟದ ಹೆಲ್ಮೆಟ್ ಬಗ್ಗೆ ಯಾವುದೇ ಪತ್ರವನ್ನು ಪೊಲೀಸ್ ಇಲಾಖೆಗೆ ಬರೆದಿಲ್ಲ. ಇದು ಹಳೆಯ ನಿಯಮ. ಇದೀಗ ವಿವಾದ ಮಾಡಲಾಗುತ್ತಿದೆ. ಸವಾರರು ತಮ್ಮ ರಕ್ಷಣೆಯ ದೃಷ್ಟಿಯಿಂದ ಗುಣಮಟ್ಟದ ಹೆಲ್ಮೆಟ್ ಧರಿಸುವುದು ಒಳಿತು. ಈ ರೀತಿ ಕಾರ್ಯಾಚರಣೆ ಮಾಡುವುದು ಅಷ್ಟು ಸುಲಭವಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.