
ಪಟನಾ(ಆ.20): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಧ್ಯಕ್ಷತೆಯ ಜೆಡಿಯು ಅಧಿಕೃತವಾಗಿ ಎನ್‌ಡಿಎ ಸೇರುವುದಾಗಿ ಘೋಷಿಸಿದೆ.ನಿತೀಶ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಬಿಹಾರದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಹಾಗೂ ಆರ್'ಜೆಡಿ ಸಂಗ ತೊರೆದಿದ್ದ ಜೆಡಿಯು, ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಈಗ ಎನ್'ಡಿಎ ಸೇರುವ ನಿರ್ಣಯ ಕೈಗೊಂಡಿದೆ. ಇನ್ನು ಕೇಂದ್ರ ಸಚಿವ ಸಂಪುಟವನ್ನು ಜೆಡಿಯು ಸೇರಲಿದೆಯೇ ಎಂಬ ಕುತೂಹಲ ಮಾತ್ರ ತಣಿಯಬೇಕಿದೆ.
ಜೆಡಿಯು ಎನ್'ಡಿಎ ಸೇರುವುದನ್ನು ತಾವು ಸ್ವಾಗತಿಸುತ್ತೇವೆ. ಇದರಿಂದ ಬಿಹಾರದಲ್ಲಿ ಹೊಸ ಅಭಿವೃದ್ಧಿ ಯುಗ ಆರಂಭವಾಗಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಂತಸ ವ್ಯಕ್ತಪಡಿಸಿದ್ದಾರೆ.
ಸರ್ವಾನುಮತದ ನಿರ್ಣಯ: ಈ ಬಗ್ಗೆ ಮಾಹಿತಿ ನೀಡಿದ ಜೆಡಿಯು ವಕ್ತಾರ ಕೆ.ಸಿ. ತ್ಯಾಗಿ, ‘ಜೆಡಿಯು ಕಾರ್ಯಕಾರಿಣಿಯಲ್ಲಿ ಎನ್‌ಡಿಎ ಸೇರುವ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ’ ಎಂದರು. ಇದೇ ವೇಳೆ ನಿತೀಶ್ ಪರ ನಿಲ್ಲದ ಪಕ್ಷದ ಮಾಜಿ ಅಧ್ಯಕ್ಷ ಶರದ್ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡ ತ್ಯಾಗಿ, ‘ಶರದ್ ಯಾದವ್ ಎಲ್ಲ ತ್ಯಾಗ ಮಾಡಿ ಹೋಗಿದ್ದಾರೆ. ಜನರ ಮುಂದೆ ಇದ್ದ ಗೌರವ ಕಳೆದುಕೊಂಡಿದ್ದಾರೆ. ಅವರು ಲಾಲು ಪ್ರಸಾದ್ ಯಾದವ್ ಅವರ ಆರ್'ಜೆಡಿ ಸಮಾವೇಶದಲ್ಲಿ ಭಾಗಿಯಾದರೆ ‘ಲಕ್ಷ್ಮಣ ರೇಖೆ’ ದಾಟಿದಂತಾಗುತ್ತದೆ. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.