
ಅನಂತಪುರ(ಆ.20): ವೈದ್ಯರೊಬ್ಬರು ಸಹದ್ಯೋಗಿಯೊಬ್ಬರಿಗೆ ಎಚ್‌ಐವಿ ಪೀಡಿತ ರಕ್ತವನ್ನು ಇಂಜೆಕ್ಷನ್ ಮೂಲಕ ಚುಚ್ಚಲು ಯತ್ನಿಸಿದ ಆಘಾತಕಾರಿ ಘಟನೆ ಆಂಧ್ರ ಅನಂತಪುರದಲ್ಲಿ ಶುಕ್ರವಾರ ನಡೆದಿದೆ.
ಇಲ್ಲಿನ ಪ್ರೊಡ್ಡತ್ತೂರ್ ಆಸ್ಪತ್ರೆಯ ಮೂಳೆತಜ್ಞ ಡಾ. ರಾಜು ಎಂಬುವವರಿಗೆ, ಅದೇ ಆಸ್ಪತ್ರೆಯ ಡಾ. ಲಕ್ಷ್ಮೀಪ್ರಸಾ ದ್ ಮೇಲೆ ತೀರಾ ಸಿಟ್ಟಿತ್ತು. ಹೀಗಾಗಿ ಅವರಿಗೆ ಪಾಠ ಕಲಿಸಲು ನಿರ್ಧರಿಸಿದ್ದ ಡಾ. ರಾಜು, ಶುಕ್ರವಾರ ಆಸ್ಪತ್ರೆಯ ಎಚ್'ಐವಿ ಪೀಡಿತರ ವಾರ್ಡ್'ಗೆ ತೆರಳಿ ಅಲ್ಲಿ ಸಿರಿಂಜ್ ಮೂಲಕ ಓರ್ವ ರೋಗಿಯಿಂದ ರಕ್ತ ಪಡೆದಿದ್ದರು. ಬಳಿಕ ಅದೇನು ಅನ್ನಿಸಿತೋ ಸಿರಿಂಜ್'ನಿಂದ ಸೂಜಿಯನ್ನು ತೆಗೆದು ಹಾಗೆಯೇ ಕೆಳಗಿನ ಮಹಡಿಗೆ ಬಂದಿದ್ದರು. ಹೀಗೆ ಬಂದವರೇ ಡಾ. ಲಕ್ಷ್ಮೀ ಪ್ರಸಾದ್ ಅವರನ್ನು ನೋಡುತ್ತಲೇ ಅವರ ಮೇಲೆ ಸಿರಿಂಜ್'ನಿಂದ ರಕ್ತವನ್ನು ಎರಚಿದ್ದಾರೆ.
ಈ ವೇಳೆ ಲಕ್ಷ್ಮೀ ಪ್ರಸಾದ್ ತಪ್ಪಿಸಿಕೊಳ್ಳುವ ಯತ್ನ ಮಾಡಿದರಾದರೂ, ಬಟ್ಟೆಯ ಮೇಲೆಲ್ಲಾ ರಕ್ತ ತಾಗಿತು. ವಿಷಯ ತಿಳಿಯುತ್ತಲೇ ಪೊಲೀಸರು ಆಗಮಿಸಿ ರಾಜು ಅವರನ್ನು ವಶಕ್ಕೆ ಪಡೆದರು. ಆದರೆ ಈ ಬಗ್ಗೆ ದೂರು ನೀಡಿದರೆ, ಆಸ್ಪತ್ರೆಯ ಘನತೆಗೆ ಕುಂದು ತರುತ್ತದೆ ಎಂದು ಆಸ್ಪತ್ರೆ ಮುಖ್ಯಸ್ಥರು ಲಕ್ಷ್ಮೀಪ್ರಸಾದ್ ಅವರ ಮನವೊಲಿಸಿದ ಕಾರಣ, ಅವರು ದೂರು ನೀಡುವುದರಿಂದ ಹಿಂದೆ ಸರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.