
ನವದೆಹಲಿ: ವಿವಾದಿತ ಮೇಕೆದಾಟು ಯೋಜನೆಯ ಬಗ್ಗೆ ಚರ್ಚಿಸಲು ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳ ಸಭೆ ಕರೆಯಲು ಮುಂದಾಗಿರುವ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ, ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಲು ಮಾತುಕತೆಗೆ ಬನ್ನಿ ಎಂದು ಆಹ್ವಾನಿಸಿ ಉಭಯ ರಾಜ್ಯಗಳಿಗೂ ಪತ್ರ ಬರೆದಿದ್ದಾರೆ.
ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡಿನ ಜೊತೆ ಚರ್ಚಿಸಲು ರಾಜ್ಯ ಸರ್ಕಾರ ಸದಾ ಸಿದ್ಧವಿತ್ತು. ಈ ಬಗ್ಗೆ ಮಧ್ಯಸ್ಥಿಕೆ ವಹಿಸುವಂತೆ ಗಡ್ಕರಿ ಅವರಲ್ಲಿ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಅನೇಕ ಬಾರಿ ಮನವಿ ಮಾಡಿಕೊಂಡಿದ್ದರು. ಬುಧವಾರ ಗಡ್ಕರಿ ಅವರನ್ನು ಭೇಟಿಯಾದ ಸಂದರ್ಭದಲ್ಲಿಯೂ ಮೇಕೆದಾಟು ಯೋಜನೆಯ ಬಗ್ಗೆ ಚರ್ಚಿಸಲು ತಮಿಳುನಾಡು ಸಿಎಂ ಅವರನ್ನು ಆಹ್ವಾನಿಸುವಂತೆ ಕೋರಿದ್ದರು.
ರಾಜ್ಯದ ಮನವಿಗೆ ಸ್ಪಂದಿಸಿ ಗಡ್ಕರಿ ಸಭೆ ಕರೆದಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವಾಲಯ ಮೂಲಗಳು ತಿಳಿಸಿವೆ. ಸಭೆಯು ದೆಹಲಿಯಲ್ಲಿ ನಡೆಯಲಿದ್ದು ತಮಗೆ ಅನುಕೂಲ ವಾದ ಸಮಯವನ್ನು ತಿಳಿಸುವಂತೆ ಗಡ್ಕರಿ ಅವರು ತಮಿಳು ನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಗೆ ತಿಳಿಸಿ ದ್ದಾರೆ. ಮೇಕೆದಾಟು ಯೋಜನೆಯನ್ನು ತಮಿಳುನಾಡು ವಿರೋಧಿಸುತ್ತಿದ್ದು ಈ ಬಗ್ಗೆ ಮಾತುಕತೆ ನಡೆಸಲು ಅದು ಹಿಂದೇಟು ಹಾಕಿತ್ತು. ಯೋಜನೆಯ ಕಾರ್ಯಾಸಾಧ್ಯತಾ ವರದಿಯನ್ನು ಕೇಂದ್ರ ಜಲ ಮಂಡಳಿ ಒಪ್ಪಿರುವುದನ್ನು ಪ್ರಶ್ನಿಸಿ ಅದು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮೊರೆ
ಹೋಗಿದೆ.
ಮೇಕೆದಾಟು ಸಮತೋಲನ ಅಣೆಕಟ್ಟು ಆಗಿರಲಿದ್ದು ಕುಡಿಯುವ ನೀರು ಮತ್ತು ಜಲ ವಿದ್ಯುತ್ ಗಾಗಿ ಮಾತ್ರ ಲಭ್ಯ ನೀರನ್ನು ಬಳಸುವುದಾಗಿ ಕರ್ನಾಟಕ ಸರ್ಕಾರ ಪ್ರತಿಪಾದಿಸುತ್ತಲೇ ಬಂದಿದೆ. ನೀರಾವರಿಗಾಗಿ ಮೇಕೆದಾಟಿನಿಂದ ನೀರನ್ನು ಬಳಸುವುದಿಲ್ಲ ಎಂಬುದು ರಾಜ್ಯದ ಖಚಿತ ಅಭಿಪ್ರಾಯ. ಅಷ್ಟೇ ಅಲ್ಲದೆ ಈ ಯೋಜನೆಯಿಂದ ತಮಿಳುನಾಡಿಗೆ ಹೆಚ್ಚು ಪ್ರಯೋಜನವಾ ಗಲಿದ್ದು ಅದರ ಪಾಲಿನ ನೀರನ್ನು ನಿಯಮಿತವಾಗಿ ನೀಡಲು ಕರ್ನಾಟಕಕ್ಕೆ ಸುಲಭವಾಗಲಿದೆ ಎಂಬುದು ರಾಜ್ಯದ ತರ್ಕ. ಆದರೆ ತಮಿಳುನಾಡು ಇದ್ಯಾವುದಕ್ಕೂ ಸೊಪ್ಪು ಹಾಕದೇ ಯೋಜನೆಯನ್ನು ವಿರೋಧಿಸುತ್ತ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.