ಪಿಎಂಸಿ ಹಗರಣ: ಸಚಿವೆ ನಿರ್ಮಲಾಗೆ ಬ್ಯಾಂಕ್‌ ಠೇವಣಿದಾರರಿಂದ ಮುತ್ತಿಗೆ

By Web DeskFirst Published Oct 11, 2019, 9:39 AM IST
Highlights

ಪಿಎಂಸಿ ಹಗರಣ: ಸಚಿವೆ ನಿರ್ಮಲಾಗೆ ಬ್ಯಾಂಕ್‌ ಠೇವಣಿದಾರರಿಂದ ಮುತ್ತಿಗೆ| ವಿಧಾನಸಭೆ ಚುನಾವಣೆ ಪ್ರಚಾರ ಚರ್ಚೆಗೆ ಬಂದಿದ್ದ ನಿರ್ಮಲಾ| ಸಹಕಾರ ಬ್ಯಾಂಕ್‌ ಹಗರಣ ತಡೆಗೆ ಅಗತ್ಯ ಕ್ರಮ ಖಚಿತ| ಈ ಕುರಿತ ಅಧ್ಯಯನಕ್ಕಾಗಿ ಸಮಿತಿ ರಚಿಸುವುದಾಗಿ ಭರವಸೆ

ಮುಂಬೈ[ಅ.11]: ಪಂಜಾಬ್‌ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್‌(ಪಿಎಂಸಿ) ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆ ಬ್ಯಾಂಕ್‌ನಲ್ಲಿ ಠೇವಣಿ ಹೊಂದಿದ ಗ್ರಾಹಕರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನೇ ಮುತ್ತಿಗೆ ಹಾಕಿದ ಘಟನೆ ಮುಂಬೈನಲ್ಲಿ ನಡೆದಿದೆ. ಈ ವೇಳೆ ಠೇವಣಿದಾರರ ಸಮಾಧಾನ ಪಡಿಸಲು ಹೈರಾಣಾದ ಸಚಿವೆ ನಿರ್ಮಲಾ, ಸಹಕಾರ ಬ್ಯಾಂಕ್‌ಗಳ ಹಗರಣ ತಡೆಗೆ ಅಗತ್ಯವಾದರೆ, ಕಾನೂನು ತಿದ್ದುಪಡಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪಿಎಂಸಿ ಬ್ಯಾಂಕ್‌ ಮಾಜಿ ಎಂಡಿ ಬಂಧನ!

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಸರ್ಕಾರದ ಸಾಧನೆಗಳ ಬಗ್ಗೆ ವಿವರಣೆಗಾಗಿ ಗುರುವಾರ ಮುಂಬೈ ಬಿಜೆಪಿ ಕಚೇರಿಗೆ ಸೀತಾರಾಮನ್‌ ಆಗಮಿಸುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪಿಎಂಸಿ ಠೇವಣಿ ಖಾತೆದಾರರು ಮುತ್ತಿಗೆ ಹಾಕಿದರು. ಅಲ್ಲದೆ, ತಾವು ಠೇವಣಿ ಇಟ್ಟ ಹಣವನ್ನು ತಮಗೇ ವಾಪಸ್‌ ತೆಗೆದುಕೊಳ್ಳಲು ಅವಕಾಶವಿಲ್ಲದಿರುವ ಬಗ್ಗೆ ತೀಕ್ಷ್ಣವಾಗಿ ಪ್ರಶ್ನಿಸಿದರು.

ಈ ವೇಳೆ ಖಾತೆದಾರರ ಆಕ್ರೋಶಗಳನ್ನು ಸಮಾಧಾನದಿಂದ ಆಲಿಸಿದ ಸೀತಾರಾಮನ್‌, ‘ಅಗತ್ಯವಿದ್ದರೆ, ಸಹಕಾರ ಬ್ಯಾಂಕ್‌ಗಳ ಆಡಳಿತಕ್ಕೆ ಸಂಬಂಧಿಸಿದ ಕಾನೂನುಗಳನ್ನು ಚಳಿಗಾಲದ ಅಧಿವೇಶನದ ವೇಳೆ ತಿದ್ದುಪಡಿ ಮಾಡಲಾಗುತ್ತದೆ. ಇದರ ಅಧ್ಯಯನಕ್ಕಾಗಿ ಆರ್ಥಿಕ ವ್ಯವಹಾರಗಳು ಮತ್ತು ಹಣಕಾಸು ಸೇವೆಗಳ ಕಾರ್ಯದರ್ಶಿಗಳು, ಗ್ರಾಮೀಣ ಹಾಗೂ ನಗರಾಭಿವೃದ್ಧಿ ಇಲಾಖೆ ಮತ್ತು ಆರ್‌ಬಿಐ ಉಪ ಗವರ್ನರ್‌ ಅವರನ್ನೊಳಗೊಂಡ ಸಮಿತಿ ರಚಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

8880 ಕೋಟಿ ಒಟ್ಟು ಸಾಲದಲ್ಲಿ ಎಚ್‌ಡಿಐಎಲ್‌ಗೆ 6500 ಕೋಟಿ!

ಪಿಎಂಸಿಯಲ್ಲಿ ನಡೆದಿದೆ ಎನ್ನಲಾದ 4500 ಕೋಟಿ ರು. ಹಣ ಅವ್ಯವಹಾರ ಬಯಲಾದ ಕಾರಣ ಈ ಬ್ಯಾಂಕ್‌ನ ಠೇವಣಿದಾರರ ಹಣ ಹಿಂತೆಗೆತದ ಮೇಲೆ ಆರ್‌ಬಿಐ ಅಂಕುಶ ವಿಧಿಸಿತ್ತು. ಮೊದಲಿಗೆ ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆಯಿಂದ 1000 ರು. ಮಾತ್ರವೇ ಹಣ ಹಿಂಪಡೆಯಬಹುದಾಗಿತ್ತು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ, ಈ ಮಿತಿಯನ್ನು 25 ಸಾವಿರ ರು.ಗೆ ಏರಿಕೆ ಮಾಡಲಾಯಿತು.

click me!