ನೀರವ್‌ ಮೋದಿಗೆ ಎದುರಾಗಿವೆ ಮತ್ತಷ್ಟು ಸಂಕಷ್ಟ

By Suvarna Web DeskFirst Published Feb 20, 2018, 7:37 AM IST
Highlights

ಪಿಎನ್‌ಬಿಗೆ 11400 ಕೋಟಿ ರು. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು, ಸೋಮವಾರವೂ ಉದ್ಯಮಿಗಳಾದ ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿ ವಿರುದ್ಧ ತನಿಖೆ ತೀವ್ರಗೊಳಿಸಿದ್ದು ಬೆಂಗಳೂರು ಸೇರಿದಂತೆ ದೇಶಾದ್ಯಂತ ಹಲವು ಕಡೆಗಳಲ್ಲಿ ದಾಳಿ ನಡೆಸಿವೆ.

ನವದೆಹಲಿ/ಮುಂಬೈ: ಪಿಎನ್‌ಬಿಗೆ 11400 ಕೋಟಿ ರು. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳು, ಸೋಮವಾರವೂ ಉದ್ಯಮಿಗಳಾದ ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿ ವಿರುದ್ಧ ತನಿಖೆ ತೀವ್ರಗೊಳಿಸಿದ್ದು ಬೆಂಗಳೂರು ಸೇರಿದಂತೆ ದೇಶಾದ್ಯಂತ ಹಲವು ಕಡೆಗಳಲ್ಲಿ ದಾಳಿ ನಡೆಸಿವೆ.

ಸೋಮವಾರ ಇಡಿ ಅಧಿಕಾರಿಗಳು, ಚೋಕ್ಸಿಗೆ ಸೇರಿದ 22 ಕೋಟಿ ರು. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದರೆ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 7 ಆಸ್ತಿ ಜಪ್ತಿ ಮಾಡಿವೆ. ಮತ್ತೊಂದೆಡೆ ಸಿಬಿಯ ಅಧಿಕಾರಿಗಳು ನೀರವ್‌ ಮೋದಿ ಕಂಪನಿಗೆ ಸೇರಿದ ನಾಲ್ವರು ಹಿರಿಯ ಅಧಿಕಾರಿಗಳನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಇದರೊಂದಿಗೆ ಇದುವರೆಗೆ ನೀರವ್‌ ಮೋದಿ ಮತ್ತು ಚೋಕ್ಸಿಗೆ ಸೇರಿ 5671 ಕೋಟಿ ರು.ಮೌಲ್ಯದ ಚಿನ್ನಾಭರಣ, ವಜ್ರ ವಶಪಡಿಸಿಕೊಂಡಂತೆ ಆಗಿದೆ.

ಇದೇ ವೇಳೆ ಪಿಎನ್‌ಬಿಯ ಮುಂಬೈ ಶಾಖೆಯ ಅಧಿಕಾರಿಗಳು ಬ್ಯಾಂಕಿಂಗ್‌ ವ್ಯವಸ್ಥೆಯ ಕಣ್ಣು ತಪ್ಪಿಸಿ ಭಾರೀ ಪ್ರಮಾನದಲ್ಲಿ ಎಲ್‌ಒಯು (ಲೆಟರ್‌ ಆಫ್‌ ಅಂಡರ್‌ಟೇಕಿಂಗ್‌) ನೀಡಿದ್ದಾದರೂ ಹೇಗೆ ಎಂಬುದರ ಬಗ್ಗೆ ತನಿಖೆ ತೀವ್ರಗೊಳಿಸಿದ್ದಾರೆ.

ಬ್ಯಾಂಕ್‌ ಶಾಖೆ ಬಂದ್‌: ಈ ನಡುವೆ ಹಗರಣದ ಕೇಂದ್ರಬಿಂದುವಾದ ಪಿಎನ್‌ಬಿಯ ಮುಂಬೈನ ಬ್ರಾಡಿ ರೋಡ್‌ ಶಾಖೆಯನ್ನು ಸಿಬಿಐ ಅಧಿಕಾರಿಗಳು ಬಂದ್‌ ಮಾಡಿಸಿದ್ದು, ಅಲ್ಲಿನ ದಾಖಲೆ ಪತ್ರಗಳ ಪರಿಶೀಲನೆ ಆರಂಭಿಸಿದ್ದಾರೆ.

click me!