ದೀಪಾವಳಿ ವೇಳೆ ದಿಲ್ಲಿಯಲ್ಲಿ ಉಗ್ರ ದಾಳಿ?

By Web DeskFirst Published Oct 18, 2019, 9:41 AM IST
Highlights

ದೀಪಾವಳಿ ವೇಳೆ ದಿಲ್ಲಿಯಲ್ಲಿ ಉಗ್ರ ದಾಳಿ?| ಬೃಹತ್‌ ಪ್ರಮಾಣದ ವಿಧ್ವಂಸಕ ಕೃತ್ಯ ಎಸಗಲು 5 ಭಯೋತ್ಪಾದಕರ ದುಷ್ಟಸಂಚು| ಉಗ್ರರ ಫೋನ್‌ ಸಂಭಾಷಣೆ ವೇಳೆ ಪತ್ತೆ| ನೇಪಾಳದಿಂದ ಬಂದು ದಾಳಿ ಸಾಧ್ಯತೆ

ನವದೆಹಲಿ[ಅ.18]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ವಿರುದ್ಧ ಕೊತಕೊತ ಕುದಿಯುತ್ತಿರುವ ಭಯೋತ್ಪಾದಕರು, ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ದೀಪಾವಳಿ ವೇಳೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನರಮೇಧ ನಡೆಸಲು ಯತ್ನಿಸುತ್ತಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ.

ನೇಪಾಳ ಮೂಲಕ ಭಾರತಕ್ಕೆ ಆಗಮಿಸಿ, ದೆಹಲಿಯಲ್ಲಿ ದೀಪಾವಳಿ ಸಂದರ್ಭದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಐವರು ಉಗ್ರರು ಪ್ರಯತ್ನಿಸುತ್ತಿದ್ದಾರೆ. ಭಯೋತ್ಪಾದಕರ ನಡುವಣ ದೂರವಾಣಿ ಸಂಭಾಷಣೆಯನ್ನು ಕದ್ದಾಲಿಸಿದಾಗ ಈ ದುಷ್ಟಸಂಚು ಬೆಳಕಿಗೆ ಬಂದಿದೆ. ಅನುಷ್ಠಾನಗೊಳಿಸಲು ಉದ್ದೇಶಿಸಿರುವ ತಮ್ಮ ಈ ಯೋಜನೆ ಬೃಹತ್‌ ಪ್ರಮಾಣದ್ದಾಗಿರಲಿದೆ ಎಂದು ಉಗ್ರರು ಮಾತನಾಡಿರುವುದನ್ನು ಗುಪ್ತಚರ ಸಂಸ್ಥೆಗಳು ಕೇಳಿಸಿಕೊಂಡಿವೆ. ದೆಹಲಿಗೆ ತಲುಪಿದ ಬಳಿಕ ಕಾಶ್ಮೀರದಿಂದ ಆಗಮಿಸುವ ಕೆಲವು ವ್ಯಕ್ತಿಗಳು ತಮ್ಮನ್ನು ಭೇಟಿಯಾಗಲಿದ್ದಾರೆ ಎಂಬ ಮಾಹಿತಿಯೂ ಈ ಸಂಭಾಷಣೆ ವೇಳೆ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.

ಉಗ್ರರು ದೂರವಾಣಿ ಸಂಭಾಷಣೆ ನಡೆಸಿರುವ ಸ್ಥಳ ಭಾರತ- ನೇಪಾಳ ಗಡಿಯ ಗೋರಖ್‌ಪುರಕ್ಕೆ ಸಮೀಪದಲ್ಲಿದೆ ಎನ್ನಲಾಗಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ದೇಶಾದ್ಯಂತ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಆರೆಂಜ್‌ ಅಲರ್ಟ್‌:

ಈ ನಡುವೆ, ಭಯೋತ್ಪಾದಕರ ಗುಂಪೊಂದು ದಾಳಿಗೆ ಹೊಂಚು ಹಾಕುತ್ತಿದೆ ಎಂಬ ವರ್ತಮಾನ ಬಂದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರ ಹಾಗೂ ಪಂಜಾಬ್‌ನಲ್ಲಿರುವ ಹಲವು ರಕ್ಷಣಾ ಸಂಸ್ಥೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಪಂಜಾಬ್‌ ಹಾಗೂ ಜಮ್ಮುವಿನಲ್ಲಿರುವ ಮತ್ತು ಅದರ ಸುತ್ತಲಿರುವ ರಕ್ಷಣಾ ಘಟಕಗಳಲ್ಲಿ ಹೈ ಅಲರ್ಟ್‌ ಸಾರಲಾಗಿದೆ. ಪಠಾಣ್‌ಕೋಟ್‌ ಸೇರಿದಂತೆ ವಾಯುಪಡೆ ನೆಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ ಎಂದು ಮೂಲಗಳು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿವೆ.

370ನೇ ವಿಧಿಯನ್ನು ಕೇಂದ್ರ ಸರ್ಕಾರ ಆ.5ರಂದು ನಿಷ್ಕಿ್ರಯಗೊಳಿಸಿದಾಗಿನಿಂದಲೂ ದೇಶದಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಉಗ್ರರು ಪ್ರಯತ್ನಿಸುತ್ತಲೇ ಬಂದಿದ್ದಾರೆ ಎಂಬುದನ್ನು ಕಾಲಕಾಲಕ್ಕೆ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.

click me!