ಝಾಕಿರ್ ನಾಯ್ಕ್'ರ ಎನ್'ಜಿಓಗೆ ಸೇರಿದ 10 ಸ್ಥಳಗಳ ಮೇಲೆ ಎನ್'ಐಎ ದಾಳಿ; ಎಫ್'ಐಆರ್ ದಾಖಲು

By Suvarna Web DeskFirst Published Nov 19, 2016, 6:04 AM IST
Highlights

ಝಾಕಿರ್ ನಾಯ್ಕ್ ಸ್ಥಾಪಿಸಿದ ನಿಷೇಧಿತ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್'ಎಫ್)ನ ನಂಟಿರುವ ಮಹಾರಾಷ್ಟ್ರದಲ್ಲಿನ 10 ಸ್ಥಳಗಳ ಮೇಲೆ ಇಂದು ಬೆಳಗ್ಗೆ ಎನ್'ಐಎ ತಂಡಗಳು ದಾಳಿ ನಡೆಸಿದವು.

ನವದೆಹಲಿ(ನ. 19): ವಿವಾದಿತ ಇಸ್ಲಾಮಿಕ್ ಧರ್ಮ ಬೋಧಕ ಝಾಕಿರ್ ನಾಯ್ಕ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಎಫ್'ಐಆರ್ ದಾಖಲು ಮಾಡಿದೆ. ಝಾಕಿರ್ ನಾಯ್ಕ್ ವಿವಿಧ ಧರ್ಮಗಳ ನಡುವೆ ಕಲಹ ಸೃಷ್ಟಿಸುತ್ತಿದ್ದಾರೆಂಬ ಆರೋಪ ಈ ಎಫ್'ಐಆರ್'ನಲ್ಲಿದೆ. 'ಪೀಸ್' ಟಿವಿ ವಾಹಿನಿಯಲ್ಲಿ ಝಾಕಿರ್ ನಾಯ್ಕ್ ಅವರ ಭಾಷಣಗಳನ್ನು ಪರಿಶೀಲಿಸಿದ ಬಳಿಕ ಈ ಎಫ್ಐಆರ್ ದಾಖಲು ಮಾಡಲಾಗಿದೆ.

ಝಾಕಿರ್ ನಾಯ್ಕ್ ಸ್ಥಾಪಿಸಿದ ನಿಷೇಧಿತ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್'ಎಫ್)ನ ನಂಟಿರುವ ಮಹಾರಾಷ್ಟ್ರದಲ್ಲಿನ 10 ಸ್ಥಳಗಳ ಮೇಲೆ ಇಂದು ಬೆಳಗ್ಗೆ ಎನ್'ಐಎ ತಂಡಗಳು ದಾಳಿ ನಡೆಸಿದವು. ಪೀಸ್ ಟಿವಿಯಲ್ಲಿ ಝಾಕಿರ್ ನಾಯ್ಕ್'ರ ಐಆರ್'ಎಫ್ ಸಂಸ್ಥೆಯ ಪಾಲಿದೆ. ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರಕಾರವು ಐಆರ್'ಎಫ್ ಅನ್ನು 5 ವರ್ಷಗಳ ಮಟ್ಟಿಗೆ ನಿಷೇಧ ಹೇರಿದೆ. ಅಲ್ಲದೇ, ಆ ಫೌಂಡೇಶನ್'ಗೆ ಸೇರಿದ ವಿವಿಧ ಅಂಗ ಸಂಸ್ಥೆಗಳ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇನ್ನು, ಝಾಕಿರ್ ನಾಯ್ಕ್ ಸದ್ಯ ಸೌದಿ ಅರೇಬಿಯಾದಲ್ಲಿದ್ದು ಅಲ್ಲಿಂದಲೇ ಪೀಸ್ ಟೀವಿಗೆ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆನ್ನಲಾಗಿದೆ. ಬ್ರಿಟನ್, ಕೆನಡಾ, ಮಲೇಷ್ಯಾ ದೇಶಗಳಲ್ಲಿ ಝಾಕಿರ್ ನಾಯ್ಕ್'ರ ಭಾಷಣವನ್ನು ನಿಷೇಧಿಸಲಾಗಿದೆ. ಬಾಂಗ್ಲಾದೇಶದ ರಾಜಧಾನಿಯಲ್ಲಿ ಕೆಲ ತಿಂಗಳ ಹಿಂದೆ ದಾಳಿ ಎಸಗಿ 20 ಜನರನ್ನು ಬಲಿ ತೆಗೆದುಕೊಂಡಿದ್ದ ಉಗ್ರರಿಗೆ ಇದೇ ಝಾಕಿರ್ ನಾಯ್ಕ್ ಪ್ರಚೋದನೆ ನೀಡಿದ್ದರೆಂದು ಬಾಂಗ್ಲಾದೇಶ ಸರಕಾರ ಆರೋಪಿಸಿತ್ತು.

ಆದರೆ, ತನ್ನ ವಿರುದ್ಧ ಭಾರತ ಸರಕಾರ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದುದು. ಇದು ಭಾರತೀಯ ಮುಸ್ಲಿಮರ ಮೇಲೆ ನಡೆದ ದಾಳಿಯಾಗಿದೆ. ಶಾಂತಿ, ಪ್ರಜಾತಂತ್ರ ಹಾಗೂ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಪ್ರತ್ಯಾರೋಪಿಸಿ ಝಾಕಿರ್ ನಾಯ್ಕ್ ಅವರು ಭಾರತ ಸರಕಾರಕ್ಕೆ ಬಹಿರಂಗ ಪತ್ರ ಬರೆದಿದ್ದರು.

click me!