ಪ್ರೇಯಸಿಗಾಗಿ ವಿಮಾನ ಅಪಹರಣ ಬೆದರಿಕೆ ಹಾಕಿದ್ದವಗೆ ಜೀವಾವಧಿ ಶಿಕ್ಷೆ!

By Web DeskFirst Published Jun 12, 2019, 10:43 AM IST
Highlights

ಗಲ್‌ರ್‍ಫ್ರೆಂಡಿಗಾಗಿ ವಿಮಾನ ಅಪಹರಣ ಬೆದರಿಕೆ ಹಾಕಿದ್ದವಗೆ ಜೀವಾವಧಿ ಶಿಕ್ಷೆ!| 5 ಕೋಟಿ ರು. ದಂಡ ವಿಧಿಸಿದ ಎನ್‌ಐಎ ಕೋರ್ಟ್‌|  ಹುಸಿ ಅಪಹರಣ ಬೆದರಿಕೆ ಹಾಕುವವರೇ ಹುಷಾರ್‌

ಅಹಮದಾಬಾದ್‌[ಜೂ.12]: ಜೆಟ್‌ ಏರ್‌ವೇಸ್‌ ಕಂಪನಿಯ ವಿಮಾನ ಅಪಹರಣ ಮಾಡುವುದಾಗಿ ಚೀಟಿ ಬರೆದು ಅದನ್ನು ವಿಮಾನದ ಟಾಯ್ಲೆಟ್‌ನಲ್ಲಿ ಇಟ್ಟು ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಭೀತಿ ಮೂಡಿಸಿದ್ದ ಮುಂಬೈ ಮೂಲದ ಉದ್ಯಮಿಗೆ ಗುಜರಾತಿನ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ವಿಶೇಷ ಕೋರ್ಟ್‌ ಜೀವಾವಧಿ ಶಿಕ್ಷೆ ಹಾಗೂ ಬರೋಬ್ಬರಿ 5 ಕೋಟಿ ರು. ದಂಡ ವಿಧಿಸಿದೆ. ಸುಖಾಸುಮ್ಮನೆ ವಿಮಾನ ಅಪಹರಣದ ಬೆದರಿಕೆ ಹಾಕುವವರಿಗೆ ಈ ಪ್ರಕರಣ ಎಚ್ಚರಿಕೆ ಗಂಟೆಯಾಗಿದ್ದು, ಆ ರೀತಿ ಮಾಡಿದರೆ ದೀರ್ಘಾವಧಿ ಜೈಲಿನಲ್ಲಿರಬೇಕಾಗುತ್ತದೆ ಎಂಬ ಸಂದೇಶವನ್ನು ರವಾನಿಸಿದೆ.

ಉದ್ಯಮಿ ಬಿರ್ಜು ಸಲ್ಲಾ ಎಂಬಾತನೇ ಶಿಕ್ಷೆಗೆ ಒಳಗಾದವ. ಈತ ಕಟ್ಟುವ 5 ಕೋಟಿ ರು. ದಂಡವನ್ನು ವಿಮಾನದ ಸಿಬ್ಬಂದಿ ಹಾಗೂ ವಿಮಾನದ ಪ್ರಯಾಣಿಕರಿಗೆ ಹಂಚುವಂತೆ ನ್ಯಾಯಾಧೀಶ ಕೆ.ಎಂ. ದವೆ ಅವರು ಮಂಗಳವಾರ ತೀರ್ಪಿನಲ್ಲಿ ತಿಳಿಸಿದ್ದಾರೆ.

ಜೆಟ್‌ ಏರ್‌ವೇಸ್‌ ಕಂಪನಿಯ ದೆಹಲಿ ಕಚೇರಿಯಲ್ಲಿ ಗಲ್‌ರ್‍ಫ್ರೆಂಡ್‌ ಕೆಲಸ ಮಾಡುತ್ತಿದ್ದಾಳೆ. ಆಕೆಯನ್ನು ಮುಂಬೈಗೆ ಕರೆಸಬೇಕಿತ್ತು. ದೆಹಲಿ ಕಚೇರಿ ಮುಚ್ಚಿ ಹೋದರೆ ಆಕೆ ಮುಂಬೈಗೆ ಬರುತ್ತಾಳೆ ಎಂಬ ಕಾರಣಕ್ಕೆ ತಾನು ಹುಸಿ ಬೆದರಿಕೆ ಹಾಕಿದ್ದೆ ಎಂದು ವಿಚಾರಣೆ ಸಂದರ್ಭದಲ್ಲಿ ಬಿರ್ಜು ಸಲ್ಲಾ ಹೇಳಿಕೊಂಡಿದ್ದ. ಆದರೆ ಈಗ ಗಲ್‌ರ್‍ಫ್ರೆಂಡೂ ಇಲ್ಲ, ಸ್ವಾತಂತ್ರ್ಯವೂ ಇಲ್ಲ, ಹಣವೂ ಇಲ್ಲ ಎಂಬ ಅತಂತ್ರ ಪರಿಸ್ಥಿತಿಗೆ ದೂಡಲ್ಪಟ್ಟಿದ್ದಾನೆ.

ವಿಮಾನ ಅಪಹರಣ ಪ್ರಕರಣ ತಪ್ಪಿಸಲು ಬಲಿಷ್ಠ ವಿಮಾನ ಅಪಹರಣ ನಿಗ್ರಹ ಕಾಯ್ದೆಯನ್ನು ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೆ ತಂದಿತ್ತು. ಅದರಡಿ ಶಿಕ್ಷೆಗೆ ಒಳಗಾದ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೂ ಬಿರ್ಜು ಗುರಿಯಾಗಿದ್ದಾನೆ. ಅಲ್ಲದೆ ವಿಮಾನ ಹಾರಾಟ ಪಟ್ಟಿಯಿಂದ ನಿರ್ಬಂಧಕ್ಕೆ ಒಳಗಾದ ಮೊದಲಿಗನೂ ಆಗಿದ್ದಾನೆ.

ಮಾಡಿದ್ದೇನು?:

2017ರ ಅ.30ರಂದು ಮುಂಬೈನಿಂದ ದೆಹಲಿಗೆ ಜೆಟ್‌ ಏರ್‌ವೇಸ್‌ ವಿಮಾನ ಹೊರಟಿತ್ತು. ಬಿಸಿನೆಸ್‌ ಕ್ಲಾಸ್‌ನಲ್ಲಿ ಬಿರ್ಜು ಪ್ರಯಾಣಿಸುತ್ತಿದ್ದ. ವಿಮಾನ ಅಪಹರಣ ಮಾಡಲಾಗಿದೆ. ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ವಿಮಾನ ಒಯ್ಯಿರಿ ಎಂದು ಇಂಗ್ಲಿಷ್‌ ಹಾಗೂ ಉರ್ದುವಿನಲ್ಲಿ ಚೀಟಿಯೊಂದನ್ನು ಬರೆದು ಟಾಯ್ಲೆಟ್‌ನಲ್ಲಿದ್ದ ಟಿಶ್ಶೂ ಪೇಪರ್‌ ಬಾಕ್ಸ್‌ನಲ್ಲಿಟ್ಟಿದ್ದ. ಚೀಟಿಯ ಕೊನೆಯಲ್ಲಿ ಅಲ್ಲಾ ಈಸ್‌ ಗ್ರೇಟ್‌ ಎಂದೂ ಬರೆದಿದ್ದ.

ಈ ಚೀಟಿ ಪತ್ತೆಯಾಗುತ್ತಿದ್ದಂತೆ ವಿಮಾನವನ್ನು ಅಹಮದಾಬಾದ್‌ ಏರ್‌ಪೋರ್ಟ್‌ನಲ್ಲಿ ಇಳಿಸಲಾಗಿತ್ತು. ವಿಚಾರಣೆ ನಡೆಸಿ ಸಲ್ಲಾನನ್ನು ಬಂಧಿಸಲಾಗಿತ್ತು. ಆಗ ಆತನ ಗಲ್‌ರ್‍ಫ್ರೆಂಡ್‌ ವೃತ್ತಾಂತ ಬೆಳಕಿಗೆ ಬಂದಿತ್ತು.

click me!